ADVERTISEMENT

72ನೇ ಗಣರಾಜ್ಯೋತ್ಸವ ಕಾರ್ಯಕ್ರಮ: 'ಸಂಕಷ್ಟದಲ್ಲೂ ಅಭಿವೃದ್ಧಿ ಕಾರ್ಯಕ್ಕೆ ಒತ್ತು'

ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 14:16 IST
Last Updated 26 ಜನವರಿ 2021, 14:16 IST
ಹಾವೇರಿ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪತ್ರಕರ್ತರಾದ ವೀರೇಶ ಮಡ್ಲೂರ, ರವಿ ಹೂಗಾರ ಮತ್ತು ಕಲಾವಿದ ಬಸವರಾಜ ಶಿಗ್ಗಾವಿ ಅವರಿಗೆ ಸನ್ಮಾನಿಸಲಾಯಿತು. ಸಚಿವ ಬಸವರಾಜ ಬೊಮ್ಮಾಯಿ, ಶಾಸಕ ನೆಹರು ಓಲೇಕಾರ ಇದ್ದಾರೆ 
ಹಾವೇರಿ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪತ್ರಕರ್ತರಾದ ವೀರೇಶ ಮಡ್ಲೂರ, ರವಿ ಹೂಗಾರ ಮತ್ತು ಕಲಾವಿದ ಬಸವರಾಜ ಶಿಗ್ಗಾವಿ ಅವರಿಗೆ ಸನ್ಮಾನಿಸಲಾಯಿತು. ಸಚಿವ ಬಸವರಾಜ ಬೊಮ್ಮಾಯಿ, ಶಾಸಕ ನೆಹರು ಓಲೇಕಾರ ಇದ್ದಾರೆ    

ಹಾವೇರಿ:ಒಂದೂವರೆ ವರ್ಷ ಸಂಕಷ್ಟದ ವರ್ಷವಾಗಿ ಆಡಳಿತಕ್ಕೆ ಪರೀಕ್ಷೆಯ ಕಾಲವಾಗಿತ್ತು. ಕೋವಿಡ್ ಹಾಗೂ ಪ್ರಾಕೃತಿಕ ವಿಕೋಪಗಳು ರಾಜ್ಯದ ಆರ್ಥಿಕತೆಯನ್ನೇ ಅಲ್ಲಾಡಿಸಿವೆ. ಈ ಸಂಕಷ್ಟಗಳ ದಾರಿಯಲ್ಲೂ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗದಂತೆ ನಮ್ಮ ಸರ್ಕಾರ ಕಾರ್ಯನಿರ್ವಹಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

72ನೇ ಭಾರತ ಗಣರಾಜ್ಯೋತ್ಸವ ಅಂಗವಾಗಿ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ₹7300 ಕೋಟಿ ವೆಚ್ಚದ ನೀರಾವರಿ ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ. ಕೆರೆ ತುಂಬಿಸುವ ಯೋಜನೆ ವರ್ಷಾಂತ್ಯದಲ್ಲಿ ಸಾಕಾರಗೊಳ್ಳಲಿದೆ ಎಂದರು.

ಮೂರು ಸೂತ್ರ:‘ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯತೆ, ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಹಾಗೂ ಆಂತರಿಕ ಹಾಗೂ ಬಾಹ್ಯ ಸುರಕ್ಷತೆಯ ಮೂರು ಸೂತ್ರಗಳ ಆಧಾರದ ಮೇಲೆ ನವ ಭಾರತದ ನಿರ್ಮಾಣಕ್ಕೆ ಕರೆ ಕೊಟ್ಟಿದ್ದಾರೆ. ಈ ಮಾದರಿಯಲ್ಲಿ ರಾಜ್ಯದ ಅಭಿವೃದ್ಧಿಯ ಕಾರ್ಯಗಳು ಮುಂದುವರಿದಿವೆ’ ಎಂದು ಹೇಳಿದರು.

ADVERTISEMENT

‘ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಐ.ಸಿ.ಯು, ಪ್ರಯೋಗಾಲಯ, ಆಮ್ಲಜನಕ ವ್ಯವಸ್ಥೆ, ವೆಂಟಿಲೇಟರ್ ವ್ಯವಸ್ಥೆ ಸೇರಿದಂತೆ ಪ್ರಮುಖ ಸುಧಾರಣೆ ತರಲಾಗಿದೆ. ಆಯುಷ್ಮಾನ್ ಭಾರತ ಯೋಜನೆಯಡಿ ₹7.97 ಕೋಟಿ ಅನುದಾನದಲ್ಲಿ 12,669 ಫಲಾನುಭವಿಗಳಿಗೆ ಚಿಕಿತ್ಸೆ ನೀಡಲಾಗಿದೆ. ₹3.64 ಕೋಟಿ ವೆಚ್ಚದಲ್ಲಿ 1787 ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗಿದೆ’ ಎಂದು ಹೇಳಿದರು.

ನವಿಲುಧಾಮ ಉನ್ನತೀಕರಣ:‘ಮುಂದಿನ ಶೈಕ್ಷಣಿಕ ವರ್ಷಾರಂಭದಲ್ಲಿ ಸರ್ಕಾರಿ ಆಸ್ಪತ್ರೆಯನ್ನು ಬಳಸಿಕೊಂಡು ವೈದ್ಯಕೀಯ ತರಗತಿಗಳನ್ನು ಆರಂಭಿಸಲು ಪ್ರಯತ್ನಿಸಲಾಗುವುದು. ಈ ವರ್ಷಾಂತ್ಯಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ ಮಾಡಲಾಗುವುದು. ಶಿಗ್ಗಾವಿಯಲ್ಲಿ ‘ಜವಳಿ ಪಾರ್ಕ್’ ವರ್ಷಾಂತಕ್ಕೆ ಪೂರ್ಣಗೊಳಿಸಿ 5 ಸಾವಿರ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡಲಾಗುವುದು. ಬಂಕಾಪುರ ನವಿಲು ಧಾಮವನ್ನು ಉನ್ನತೀಕರಿಸಲಾಗುವುದು. ಶೀಘ್ರವೇ ವಿಜನ್ 2021-2025 ಯೋಜನೆ ರೂಪಿಸಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು’ ಎಂದು ಹೇಳಿದರು.

ಸ್ವಾತಂತ್ರ್ಯ ಭಾರತಕ್ಕೊಂದು ಸದೃಢ ಸಂವಿಧಾನ ರಚನೆ ಮಾಡಿದ್ದು ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದ ಹಿರಿಯರ ತಂಡ. ಅವರ ಅವಿರತ ಪ್ರಯತ್ನ ಫಲವಾಗಿ ವಿಶ್ವಕ್ಕೆ ಮಾದರಿಯಾಗಿರುವ ನಮ್ಮ ಸಂವಿಧಾನ ರೂಪುಗೊಂಡಿದೆ.

ಜನಪದ ಕಲಾವಿದ ಬಸವರಾಜ ಶಿಗ್ಗಾವಿ, ಪತ್ರಕರ್ತರಾದ ವಿರೇಶ ಮಡ್ಲೂರ, ರವಿ ಹೂಗಾರ ಅವರನ್ನು ಸನ್ಮಾನಿಸಲಾಯಿತು. ಶಾಸಕ ನೆಹರು ಓಲೇಕಾರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಏಕನಾಥ ಬಾನುವಳ್ಳಿ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶಿವಕುಮಾರ ಸಂಗೂರ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಸಿಇಒ ಮೊಹಮ್ಮದ್‌ ರೋಶನ್, ಎಸ್ಪಿ ಕೆ.ಜಿ.ದೇವರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.