ADVERTISEMENT

ಮಕ್ಕಳ ಸ್ನೇಹಿ ಸಪ್ತಾಹ: ಮಕ್ಕಳ ರಕ್ಷಣೆಗೆ ಒತ್ತು ನೀಡಿ -ನ್ಯಾಯಾಧೀಶ ಪುಟ್ಟರಾಜು

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2022, 14:02 IST
Last Updated 15 ನವೆಂಬರ್ 2022, 14:02 IST
ಹಾವೇರಿ ನಗರದ ಸೇಂಟ್‌ ಆ್ಯನ್ಸ್‌ ಐಸಿಎಸ್‍ಇ ಶಾಲೆಯಲ್ಲಿ ಮಂಗಳವಾರ ಮಕ್ಕಳ ಸ್ನೇಹಿ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ಪೋಕ್ಸೋ ಕಾಯ್ದೆ ಹಾಗೂ ಮಕ್ಕಳ ರಕ್ಷಣೆ ಕುರಿತು ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು
ಹಾವೇರಿ ನಗರದ ಸೇಂಟ್‌ ಆ್ಯನ್ಸ್‌ ಐಸಿಎಸ್‍ಇ ಶಾಲೆಯಲ್ಲಿ ಮಂಗಳವಾರ ಮಕ್ಕಳ ಸ್ನೇಹಿ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ಪೋಕ್ಸೋ ಕಾಯ್ದೆ ಹಾಗೂ ಮಕ್ಕಳ ರಕ್ಷಣೆ ಕುರಿತು ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು   

ಹಾವೇರಿ: ‘ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಕ್ಕಳಿಗೆ ಹೆಚ್ಚಿನ ರಕ್ಷಣೆ ಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪೋಷಕರು ಹಾಗೂ ಶಿಕ್ಷಕರು ಮಕ್ಕಳ ರಕ್ಷಣೆ ಬಗ್ಗೆ ಗಮನ ಹರಿಸಬೇಕು’ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಪುಟ್ಟರಾಜು ಹೇಳಿದರು.

ನಗರದ ಸೇಂಟ್‌ ಆ್ಯನ್ಸ್‌ ಐಸಿಎಸ್‍ಇ ಶಾಲೆಯಲ್ಲಿ ಮಂಗಳವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಚೈತನ್ಯ ಗ್ರಾಮೀಣ ಅಭಿವೃದ್ದಿ ಸಂಸ್ಥೆ ಸಹಯೋಗದಲ್ಲಿ ಚೈಲ್ಡ್ ಲೈನ್ ಸೇ ದೋಸ್ತಿ ವೀಕ್ (ಮಕ್ಕಳ ಸ್ನೇಹಿ ಸಪ್ತಾಹ)ದ ಅಂಗವಾಗಿ ಆಯೋಜಿಸಲಾದ ಪೋಕ್ಸೋ ಕಾಯ್ದೆ ಹಾಗೂ ಮಕ್ಕಳ ರಕ್ಷಣೆ ಕುರಿತು ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು.

ಮಕ್ಕಳ ಮೇಲಿನ ದೌರ್ಜನ್ಯಗಳ ತಡೆಗೆ ಹಾಗೂ ಮಕ್ಕಳಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಮಕ್ಕಳ ಸ್ನೇಹಿ ಸಪ್ತಾಹ ಹಮ್ಮಿಕೊಳ್ಳಲಾಗಿದೆ. ಮಕ್ಕಳು ತಮ್ಮ ಸಮಸ್ಯೆಗಳನ್ನು 1098ಕ್ಕೆ ಕರೆ ಮಾಡಿ ತಿಳಿಸಿದರೆ ಪರಿಹಾರ ಒದಗಿಸಲಾಗುವುದು ಎಂದು ಹೇಳಿದರು.

ADVERTISEMENT

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎಸ.ಎಚ್. ಮಜೀದ್ ಮಾತನಾಡಿ, ಮಕ್ಕಳಿಗೆ ಬಾಲ್ಯದಲ್ಲಿಯೇ ಉತ್ತಮ ಮೌಲ್ಯಗಳನ್ನು ಕಲಿಸಬೇಕು. ಮಕ್ಕಳ ರಕ್ಷಣೆ ಜಾಗೃತಿ ಮೂಡಿಸಲು ಮಕ್ಕಳ ಸ್ನೇಹಿ ಸಪ್ತಾಹವನ್ನು ಏಳು ದಿನ ಹಮ್ಮಿಕೊಳ್ಳಲಾಗಿದೆ ಹೇಳಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಜಯಶ್ರೀ ಪಾಟೀಲ್ ಅವರು ಮಕ್ಕಳ ಸಂರಕ್ಷಣೆ ಹಾಗೂ ಸಂಕಷ್ಟದಲ್ಲಿರುವ ಮಕ್ಕಳಿಗೆ ದಿನದ 24 ಗಂಟೆಗಳ ಕಾಲ ಮಕ್ಕಳ ಸಹಾಯವಾಣಿ ಕಾರ್ಯದ ಕುರಿತು ಮಾಹಿತಿ ನೀಡಿದರು ಹಾಗೂ ಮಕ್ಕಳ ಸ್ನೇಹಿ ಸಪ್ತಾಹ ಹಾಗೂ ಅಂತರರಾಷ್ಟ್ರೀಯ ದತ್ತು ಮಾಸಾಚರಣೆಯ ಪ್ರತಿಜ್ಞಾ ವಿಧಿ ಬೋಧಿಸಿದರು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಹಾಂತೇಶ್ ಬಸವನಾಯ್ಕರ್ ಅವರು ಪೋಕ್ಸೋ ಕಾಯ್ದೆ 2012ರಕುರಿತು ಉಪನ್ಯಾಸ ನೀಡಿದರು. ಸೇಂಟ್‌ ಆ್ಯನ್ಸ್‌ ಶಾಲೆ ಮುಖ್ಯೋಪಾಧ್ಯಾಯರಾದ ಜೋಸಿ ಕುರಿಯನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕ ವಿನಯ ಗುಡುಗೂರ, ಶಿವಾನಂದ ಗದಿಗೇರ, ವಿದ್ಯಾರ್ಥಿ ಪ್ರತಿನಿಧಿ ಅಮೈತ್ ಮಾಳಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.