ಹಾವೇರಿ: ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿರುವ ಯುವಜನತೆಗೆ ನೆರವಾಗುವ ಉದ್ದೇಶದಿಂದ ರಾಜ್ಯ ಪ್ರತಿ ಜಿಲ್ಲೆಯಲ್ಲೂ ‘ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ’ ಸ್ಥಾಪಿಸಲಾಗಿದೆ. ಇಲ್ಲಿ ನೋಂದಣಿ ಮಾಡಿಕೊಳ್ಳುವ ಅಭ್ಯರ್ಥಿಗಳಿಗೆ ಇದೀಗ ಕಾಯ್ದೆಯ ಬಲ ಬಂದಿದ್ದು, ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ನೇಮಕಾತಿಯಲ್ಲಿ ಮೊದಲ ಆದ್ಯತೆ ಸಿಗಲಿದೆ.
ಜಿಲ್ಲಾ ವ್ಯಾಪ್ತಿಯಲ್ಲಿರುವ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಇಲಾಖೆಯ ಕಚೇರಿಗಳು ಹಾಗೂ ಖಾಸಗಿ ಸಂಸ್ಥೆ–ಕಾರ್ಖಾನೆಗಳಲ್ಲಿರುವ ಹುದ್ದೆಗಳ ಮಾಹಿತಿಯನ್ನು ಜಿಲ್ಲಾ ಉದ್ಯೋಗಾಧಿಕಾರಿಗಳು ಖುದ್ದಾಗಿ ಸಂಗ್ರಹಿಸುತ್ತಿದ್ದಾರೆ. ಕೆಲವರು ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ.
ತಮ್ಮ ಕೆಲಸದ ಸ್ಥಳದಲ್ಲಿ ಖಾಲಿ ಹುದ್ದೆಗಳಿದ್ದರೂ ಜಿಲ್ಲಾ ಉದ್ಯೋಗಾಧಿಕಾರಿಗೆ ಮಾಹಿತಿ ನೀಡಲು ಹಲವರು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಯಾವ ಇಲಾಖೆ, ಕಚೇರಿ, ಸಂಸ್ಥೆಯಲ್ಲಿ ಹುದ್ದೆಗಳು ಖಾಲಿಯಿವೆ ಎಂಬ ಮಾಹಿತಿ ಉದ್ಯೋಗಾಧಿಕಾರಿಗೆ ಗೊತ್ತಾಗುತ್ತಿಲ್ಲ. ಜೊತೆಗೆ, ನೋಂದಾಯಿತ ಅಭ್ಯರ್ಥಿಗಳಿಗೂ ಮಾಹಿತಿ ಸಿಗುತ್ತಿಲ್ಲ.
ಇದಕ್ಕೆಲ್ಲ ಅಂತ್ಯ ಹಾಡಿ ನೋಂದಾಯಿತ ಅಭ್ಯರ್ಥಿಗಳಿಗೆ ಉದ್ಯೋಗ ಕೊಡಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಉದ್ಯೋಗ ವಿನಿಮಯ ಕೇಂದ್ರ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಕ್ರಮ ಕೈಗೊಂಡಿದೆ. ಕಾಯ್ದೆ ಅನ್ವಯ ಪ್ರತಿಯೊಂದು ಇಲಾಖೆ, ಕಚೇರಿ ಹಾಗೂ ಸಂಸ್ಥೆಯಲ್ಲಿರುವ ಉದ್ಯೋಗಿಗಳ ಮಾಹಿತಿ ಸಂಗ್ರಹಿಸುವಂತೆ ಜಿಲ್ಲಾಧಿಕಾರಿ ನೇತೃತ್ವದ ಸಮಿತಿಗೆ ಸೂಚನೆ ನೀಡಿದೆ. ಕಾಯ್ದೆ ಉಲ್ಲಂಘಿಸಿದರೆ, ದಂಡ ವಿಧಿಸಲೂ ಅವಕಾಶವಿದೆ.
ಸರ್ಕಾರದ ಈ ಹೊಸ ಕ್ರಮದಿಂದಾಗಿ, ಜಿಲ್ಲೆಯ ಯಾವ ಇಲಾಖೆಯಲ್ಲಿ? ಯಾವ ಕಚೇರಿಯಲ್ಲಿ? ಯಾವ ಸಂಸ್ಥೆಯಲ್ಲಿ? ಯಾವ ಕಾರ್ಖಾನೆಯಲ್ಲಿ? ಎಷ್ಟು ಹುದ್ದೆಗಳು ಖಾಲಿಯಿವೆ? ಎಂಬ ಮಾಹಿತಿ ಉದ್ಯೋಗಾಧಿಕಾರಿಗೆ ಗೊತ್ತಾಗಲಿದೆ. ಇದರಿಂದಾಗಿ, ನೋಂದಾಯಿತ ಅಭ್ಯರ್ಥಿಗಳಿಗೆ ಆದ್ಯತೆ ಮೇರೆಗೆ ಕೆಲಸ ಸಿಗಲಿದೆ.
ಜಾರಿಯಾದರೂ ಅನುಷ್ಠಾನವಾಗದೇ ಉಳಿದಿದ್ದ ಈ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಜಿಲ್ಲಾ ಉದ್ಯೋಗಾಧಿಕಾರಿಯವರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕಾಯ್ದೆ ಪಾಲಿಸದವರ ವಿರುದ್ಧ ಕ್ರಮ ಜರುಗಿಸಲು ಸಹ ಸಜ್ಜಾಗಿದ್ದಾರೆ. ಉದ್ಯೋಗ ಮಾರುಕಟ್ಟೆ ಮಾಹಿತಿ ಸಿದ್ಧಪಡಿಸಿ, ಅಭ್ಯರ್ಥಿಗಳಿಗೆ ನೀಡಲು ತಯಾರಿ ನಡೆಸಿದ್ದಾರೆ.
ಕಾಯ್ದೆ ಬಗ್ಗೆ ಜಾಗೃತಿ: ‘ಜಿಲ್ಲೆಯಲ್ಲಿರುವ ಕೇಂದ್ರ, ರಾಜ್ಯ ಸರ್ಕಾರದ ಇಲಾಖೆಗಳು, ಖಾಸಗಿ ಸಂಸ್ಥೆಗಳು, ಕಾರ್ಖಾನೆಗಳು ಹಾಗೂ ಇತರ ಉದ್ಯೋಗ ಸ್ಥಳಗಳಿಗೆ ಈ ಕಾಯ್ದೆ ಅನ್ವಯವಾಗಲಿದೆ. ಕಾಯ್ದೆಯ ಬಗ್ಗೆ ಎಲ್ಲರಲ್ಲಿಯೂ ಜಾಗೃತಿ ಮೂಡಿಸುವ ಕೆಲಸ ಆರಂಭಿಸಲಾಗಿದೆ’ ಎಂದು ಹಾವೇರಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ (ಪ್ರಭಾರ) ಚೈತನ್ಯಕುಮಾರ ಮೋಹಿತೆ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಪ್ರತಿಯೊಬ್ಬ ಉದ್ಯೋಗದಾತರು, ತಮ್ಮಲ್ಲಿರುವ ಹುದ್ದೆಗಳ ಬಗ್ಗೆ ಹಂತ ಹಂತವಾಗಿ ವರದಿ ಸಲ್ಲಿಸಬೇಕು. ಜೊತೆಗೆ, ಖಾಲಿ ಹುದ್ದೆಗಳು ಹಾಗೂ ಹೊಸ ಹುದ್ದೆಗಳ ನೇಮಕಾತಿ ಬಗ್ಗೆಯೂ ಮಾಹಿತಿ ನೀಡಬೇಕು. ಹೊದ ಹುದ್ದೆಗಳಿಗೆ ಏನಾದರೂ ಅಧಿಸೂಚನೆ ಹೊರಡಿಸುತ್ತಿದ್ದರೆ, ಮೊದಲಿಗೆ ನಮಗೆ ತಿಳಿಸಬೇಕು. ಜೊತೆಗೆ, ನಮ್ಮಲ್ಲಿ ನೋಂದಣಿಯಾದ ಅಭ್ಯರ್ಥಿಗಳನ್ನು ಆದ್ಯತೆ ಮೇರೆಗೆ ನೇಮಕಾತಿಗೆ ಪರಿಗಣಿಸಬೇಕು’ ಎಂದು ಅವರು ಹೇಳಿದರು.
‘ಹಲವು ಉದ್ಯೋಗದಾತರು, ನಮಗೆ ಮಾಹಿತಿ ನೀಡದೇ ಅಧಿಸೂಚನೆ ಹೊರಡಿಸುತ್ತಿದ್ದಾರೆ. ಇದರಿಂದಾಗಿ ನೋಂದಾಯಿತ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಇದನ್ನು ಮನಗಂಡು ರಾಜ್ಯ ಸರ್ಕಾರ, ಇದೀಗ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಂದಾಗಿದೆ. ಜಿಲ್ಲಾಧಿಕಾರಿ ಅವರ ಮಾರ್ಗದರ್ಶನದಲ್ಲಿ ಕಾಯ್ದೆ ಅನುಷ್ಠಾನವಾಗಲಿದೆ’ ಎಂದರು.
ಮೀಸಲಾತಿ, ಹಿರಿತನ ಪರಿಗಣನೆ: ‘ನೋಂದಾಯಿತ ಅಭ್ಯರ್ಥಿಗಳನ್ನು ಮೀಸಲಾತಿ ಹಾಗೂ ಹಿರಿತನದ ಆಧಾರದಲ್ಲಿ 1 ಹುದ್ದೆಗೆ ಐವರಂತೆ ನೇಮಕಾತಿಗೆ ಶಿಫಾರಸು ಮಾಡಲಾಗುವುದು. ಅಂಥ ಅಭ್ಯರ್ಥಿಗಳು, ಉದ್ಯೋಗದಾತರು ನಡೆಸುವ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡು, ಉದ್ಯೋಗ ಪಡೆಯಬಹುದು’ ಎಂದು ಚೈತನ್ಯಕುಮಾರ ಹೇಳಿದರು.
‘ಶಾಲಾ–ಕಾಲೇಜು ಕಲಿಯುತ್ತಿರುವವರು, ಕಲಿತು ಮುಗಿಸಿದವರು ಹಾಗೂ ಅನಕ್ಷರಸ್ಥರು ಎಲ್ಲರೂ ನೋಂದಣಿಗಾಗಿ ಅರ್ಜಿ ಸಲ್ಲಿಸಬಹುದು. ನೋಂದಾಯಿತರಿಗೆ ಕಾರ್ಡ್ ನೀಡಲಾಗುವುದು. ಎಲ್ಲರಿಗೂ ಕಾಲ ಕಾಲಕ್ಕೆ ಉದ್ಯೋಗದ ಮಾಹಿತಿ ನೀಡಲಾಗುವುದು. ಜೊತೆಗೆ, ಉದ್ಯೋಗ ಮೇಳ ನಡೆಸಿ ಕೆಲಸ ಕೊಡಿಸಲು ಅವಕಾಶ ಇರುತ್ತದೆ’ ಎಂದರು.
ಜಿಲ್ಲೆಯ ಪ್ರತಿಯೊಬ್ಬ ಉದ್ಯೋಗದಾತರು ತಮ್ಮ ಸಂಸ್ಥೆಯ ಖಾಲಿ ಹುದ್ದೆಗಳ ಬಗ್ಗೆ ವರದಿ ನೀಡುವುದು ಕಡ್ಡಾಯ. ನೋಂದಾಯಿತ ಅಭ್ಯರ್ಥಿಗಳಿಗೆ ಉದ್ಯೋಗ ಕೊಡಿಸಲು ವರದಿಯಿಂದ ಅನುಕೂಲವಾಗಲಿದೆಚೈತನ್ಯಕುಮಾರ ಮೋಹಿತೆ ಜಿಲ್ಲಾ ಉದ್ಯೋಗಾಧಿಕಾರಿ (ಪ್ರಭಾರ)
- ‘ಏಳು ತಿಂಗಳಿನಲ್ಲಿ 1223 ನೋಂದಣಿ’
ಹಾವೇರಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಜನವರಿಯಿಂದ ಜುಲೈವರೆಗೆ 1223 ಅಭ್ಯರ್ಥಿಗಳು ಉದ್ಯೋಗಕ್ಕಾಗಿ ನೋಂದಣಿ ಮಾಡಿಸಿದ್ದಾರೆ. 2024ರಲ್ಲಿ 2160 ಮಂದಿ ನೋಂದಣಿ ಮಾಡಿಸಿದ್ದರು. ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತದೆ. ಉಳಿದ ಉದ್ಯೋಗದಾತರ ಸ್ಥಳದಲ್ಲಿ ಖಾಲಿ ಇರುವ ಡಿ–ಗ್ರೂಪ್ ಚಾಲಕ ಸಹಾಯಕ ಸೇರಿದಂತೆ ಇತರೆ ಹುದ್ದೆಗಳ ನೇಮಕಾತಿಗೆ ನೋಂದಾಯಿತ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದು. ಜೊತೆಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ಪಡೆಯಲು ಸಹ ನೋಂದಣಿ ಅವಶ್ಯಕವಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.