ADVERTISEMENT

ಹಾವೇರಿ: ಬೆಳೆವಿಮೆ ಗೊಂದಲಕ್ಕೆ ಅಂತ್ಯ ಹಾಡಿ -ಜಿಲ್ಲಾಧಿಕಾರಿ

'ರೈತರ ಖಾತೆಗೆ ಕೂಡಲೇ ಹಣ ಪಾವತಿಸಿ'

​ಪ್ರಜಾವಾಣಿ ವಾರ್ತೆ
Published 6 ಜುಲೈ 2021, 15:25 IST
Last Updated 6 ಜುಲೈ 2021, 15:25 IST
ಬೆಳೆವಿಮೆ ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಹಾವೇರಿ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು ಅಧಿಕಾರಿಗಳ ಸಭೆ ನಡೆಸಿದರು
ಬೆಳೆವಿಮೆ ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಹಾವೇರಿ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು ಅಧಿಕಾರಿಗಳ ಸಭೆ ನಡೆಸಿದರು   

ಹಾವೇರಿ: ಬೆಳೆ ವಿಮೆಗೆ ಸಂಬಂಧಿಸಿದಂತೆ 2015-16ನೇ ಸಾಲಿನ ಮುಂಗಾರು ಬೆಳೆವಿಮೆ ಬಾಕಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ಇತ್ಯರ್ಥಪಡಿಸಿ 15 ದಿನದೊಳಗಾಗಿ ರೈತ ಖಾತೆಗೆ ಹಣ ಜಮಾ ಮಾಡಬೇಕು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು.

ಬೆಳೆವಿಮೆ ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೃಷಿ, ತೋಟಗಾರಿಕೆ, ಸಹಕಾರಿ ಬ್ಯಾಂಕ್ ಹಾಗೂ ವಿಮಾ ಕಂಪನಿಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವಿಮಾ ಪಾವತಿಗೆ ಅನುದಾನದ ಕೊರತೆ ಇಲ್ಲ. ಪಾವತಿಗೆ ಬಾಕಿ ಇರುವ ರೈತರ ಪ್ರಕರಣಗಳ ಪೈಕಿ ಅರ್ಹರ ಪಟ್ಟಿಯನ್ನು ತಯಾರಿಸಿ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.

2015-16ನೇ ಸಾಲಿನಲ್ಲಿ ಪಾವತಿಗೆ ಬಾಕಿ ಇರುವ ರೈತರ ದಾಖಲೆಗಳ ಕ್ರಮಬದ್ಧತೆಯನ್ನು ಜಿಲ್ಲಾ ಲೀಡ್‌ ಬ್ಯಾಂಕಿನ ವ್ಯವಸ್ಥಾಪಕರು, ನೋಂದಾಯಿತ ವಿಮಾ ಕಂಪನಿ, ಕರ್ನಾಟಕ ಸೆಂಟ್ರಲ್ ಕೋ ಆಪ್ ಬ್ಯಾಂಕ್‍ಗಳು ಪ್ರತಿ ಪ್ರಕರಣಗಳನ್ನು ವಿವರವಾಗಿ ಪರಿಶೀಲಿಸಿ ತ್ವರಿತವಾಗಿ ವರದಿ ಸಲ್ಲಿಸಬೇಕು ಎಂದರು.

ADVERTISEMENT

ವಿವಿಧ ತಾಂತ್ರಿಕ ಕಾರಣಗಳಿಗಾಗಿ ಪಾವತಿಯಾಗದೇ ಉಳಿದಿರುವ ಪ್ರಕರಣಗಳನ್ನು ಪರಿಶೀಲನೆ ನಡೆಸಿ ಅರ್ಹರನ್ನು ಗುರುತಿಸಿ ಅಂಥವರಿಗೆ ವಿಮೆ ಹಣ ಹಂಚಿಕೆ ಪ್ರಕ್ರಿಯೆ ತ್ವರಿತವಾಗಿ ಆರಂಭಿಸುವ ಮೂಲಕ ಬೆಳೆವಿಮೆ ಗೊಂದಲಕ್ಕೆ ಅಂತ್ಯ ಹಾಡಬೇಕು. ಸಾಧ್ಯವಾದಷ್ಟು ಆದ್ಯತೆ ನೀಡಿ ಮಾಹಿತಿ ಸಂಗ್ರಹಿಸಿ ಪರಿಶೀಲನೆ ನಡೆಸಿ ಎಂದು ಸೂಚನೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌. ಯೋಗೇಶ್ವರ, ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ, ಜಿಲ್ಲಾ ಲೀಡ್‌ ಬ್ಯಾಂಕ್ ವ್ಯವಸ್ಥಾಪಕ ಪ್ರಭುದೇವ, ಕೃಷಿ ಜಂಟಿ ನಿರ್ದೇಶಕ ಬಿ. ಮಂಜುನಾಥ, ತೋಟಗಾರಿಕೆ ಉಪನಿರ್ದೇಶಕ ಎಲ್‌. ಪ್ರದೀಪ, ಸಹಕಾರಿ ಇಲಾಖೆ ಸುಣಗಾರ, ಎಐಸಿ ವಿಮಾ ಕಂಪನಿ ಪ್ರತಿನಿಧಿ ಪ್ರವೀಣ, ಕೆಸಿಸಿ ಬ್ಯಾಂಕ್ ವ್ಯವಸ್ಥಾಪಕ ಪೂಜಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.