ADVERTISEMENT

ಕೃಷಿ ಆಧಾರಿತ ಕೈಗಾರಿಕೆ ಸ್ಥಾಪಿಸಿ

ಕೃಷಿ ಉತ್ಪನ್ನವನ್ನು ಮೌಲ್ಯವರ್ಧಿತಗೊಳಿಸಿ ರಫ್ತು ಮಾಡಿ: ಸೋಮಶೇಖರ ಮೆಳ್ಳಳ್ಳಿ ಸಲಹೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 14:41 IST
Last Updated 24 ಸೆಪ್ಟೆಂಬರ್ 2021, 14:41 IST
ಆಜಾದಿ ಕಾ ಅಮೃತ ಮಹೋತ್ಸವ ಆಚರಣೆ ಅಂಗವಾಗಿ ಹಾವೇರಿ ನಗರದಲ್ಲಿ ಶುಕ್ರವಾರ ವಾಣಿಜ್ಯ ಸಪ್ತಾಹ ರಫ್ತುದಾರರ ಸಮಾವೇಶವನ್ನು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸೋಮಶೇಖರ ಮುಳ್ಳಳ್ಳಿ ಉದ್ಘಾಟಿಸಿದರು 
ಆಜಾದಿ ಕಾ ಅಮೃತ ಮಹೋತ್ಸವ ಆಚರಣೆ ಅಂಗವಾಗಿ ಹಾವೇರಿ ನಗರದಲ್ಲಿ ಶುಕ್ರವಾರ ವಾಣಿಜ್ಯ ಸಪ್ತಾಹ ರಫ್ತುದಾರರ ಸಮಾವೇಶವನ್ನು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸೋಮಶೇಖರ ಮುಳ್ಳಳ್ಳಿ ಉದ್ಘಾಟಿಸಿದರು    

ಹಾವೇರಿ: ರೈತ ಬೆಳೆದ ಬೆಳೆಗೆ ಮೌಲ್ಯವರ್ಧಿತ ರೂಪ ಕಲ್ಪಿಸಿ, ರಫ್ತು ಮಾಡಿದರೆ ರೈತರ ಆದಾಯ ದ್ವಿಗುಣಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳ ಸ್ಥಾಪನೆಗೆ ಮುಂದಾಗಬೇಕು ಎಂದು ಜಿಲ್ಲಾ ಪಂಚಾಯಿತಿಉಪ ಕಾರ್ಯದರ್ಶಿ ಸೋಮಶೇಖರ ಮುಳ್ಳಳ್ಳಿ ಹೇಳಿದರು.

ಆಜಾದಿ ಕಾ ಅಮೃತ ಮಹೋತ್ಸವ ಆಚರಣೆ ಅಂಗವಾಗಿ ಕೈಗಾರಿಕಾ ಕೇಂದ್ರದಿಂದ ಹಾವೇರಿ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ವಾಣಿಜ್ಯ ಸಪ್ತಾಹ ರಫ್ತುದಾರರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿ ಪ್ರಧಾನವಾದ ಹಾವೇರಿ ಜಿಲ್ಲೆಯಲ್ಲಿ ರೈತ ಕೇಂದ್ರೀಕೃತ ಕೈಗಾರಿಕೆಗಳು ಅಭಿವೃದ್ಧಿಗೊಳ್ಳಬೇಕು. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೊಳಿಸಿ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಇದಕ್ಕೆ ಅಗತ್ಯವಾದ ತಾಂತ್ರಿಕ ಹಾಗೂ ವ್ಯವಹಾರಿಕ ಮಾರ್ಗದರ್ಶನ, ಸಂಪರ್ಕ ತರಬೇತಿಗಳನ್ನು ಸ್ಥಳೀಯ ಕೈಗಾರಿಕಾ ಸಂಸ್ಥೆಗಳಿಗೆ ನೀಡಬೇಕೆಂದು ಸಲಹೆ ನೀಡಿದರು.

ADVERTISEMENT

ಸಿಡಾಕ್ ನಿರ್ದೇಶಕ ಡಾ.ಎಸ್.ಎಚ್. ವೀರಣ್ಣ ಅವರು, ‘ರಫ್ತು ಮತ್ತು ನೋಂದಣಿಗೆ ಬೇಕಾಗುವ ದಾಖಲೆಗಳು ಮತ್ತು ಮಾಹಿತಿ ನೀಡಿದ ಅವರು, ನಮ್ಮ ದೇಶದ ಪ್ರತಿಯೊಂದು ಜಿಲ್ಲೆಯು ರಫ್ತು ಕೇಂದ್ರಗಳಾಗಬೇಕು. ನಮ್ಮ ನೆಲದಿಂದ ಹೊರ ದೇಶದ ನೆಲಕ್ಕೆ ನಾವು ಉತ್ಪಾದಿಸಿದ ವಸ್ತುಗಳನ್ನು ರಫ್ತು ಮಾಡಬೇಕು. ಇದಕ್ಕೆ ಅಗತ್ಯವಾದ ಮಾಹಿತಿಗಳನ್ನು ನೀಡುವ ಕೆಲಸವನ್ನು ಕೈಗಾರಿಕೆ ಇಲಾಖೆ ಮಾಡಬೇಕಾಗಿದೆ’ ಎಂದು ಹೇಳಿದರು.

ಹಾವೇರಿಯ ಚೇಂಬರ್‌ ಆಫ್ ಕಾಮರ್ಸ್ ಉಪಾಧ್ಯಕ್ಷ ರವಿ ಮೆಣಸಿನಕಾಯಿ ಮಾತನಾಡಿ, ‘ಹಾವೇರಿ ಜಿಲ್ಲೆಗೆ ಬೃಹತ್ ಕೈಗಾರಿಕೆಗಳ ಸ್ಥಾಪನೆಗೆ ಸೂಕ್ತವಾದಂತಹ ಅವಕಾಶಗಳಿವೆ. ತ್ವರಿತವಾಗಿ ಕೈಗಾರಿಕಾ ಸ್ಥಾಪನೆಗೆ ಬೇಕಾದ ಭೂಮಿಯನ್ನು ನೀಡಿ ಮೂಲಸೌಕರ್ಯಗಳನ್ನು ಕಲ್ಪಿಸಬೇಕು. ಈಗಾಗಲೇ ಕೈಗಾರಿಕಾ ಕಾರಿಡಾರ್ ಸ್ಥಾಪನೆಗೆ ಜಿಲ್ಲೆಯಲ್ಲಿ ಒಂದು ಸಾವಿರ ಎಕರೆ ಜಾಗವನ್ನು ಗುರುತಿಸಲಾಗಿದೆ. ಈ ಪೈಕಿ 800 ಎಕರೆ ಪ್ರದೇಶಕ್ಕೆ ಬೇಡಿಕೆ ಸಲ್ಲಿಕೆಯಾಗಿದೆ’ ಎಂದು ತಿಳಿಸಿದರು.

ವಾಣಿಜ್ಯ ತೆರಿಗೆ ಇಲಾಖೆ (ಜಿ.ಎಸ್.ಟಿ)ಯ ಯೋಜನೆಗಳ ಮಾಹಿತಿ ಕುರಿತು ವಾಣಿಜ್ಯ ಮತ್ತು ತೆರಿಗೆ ಇಲಾಖೆ ಸಹಾಯಕ ಕಮಿಷನರ್ ರುಕ್ಸಾನಾ ಗುಡಗೇರಿ ಹಾಗೂ ನಬಾರ್ಡ್‍ನ ವಿಭಾಗೀಯ ವ್ಯವಸ್ಥಾಪಕ ಮಹಾದೇವ ಕೀರ್ತಿ, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎಂ.ವಿ.ಹೊಂಬರಡಿ, ಸಣ್ಣ ಕೈಗಾರಿಕೆಗಳ ಸಂಘದ ಕಾರ್ಯದರ್ಶಿ ರಮೇಶ ಬಳ್ಳಾರಿ, ಜಿಲ್ಲಾ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕ ಪ್ರಭುದೇವ, ಸಾಂಬಾರು ಮಂಡಳಿಯ ಬಾಪುಗೌಡ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರ ಉಪನಿರ್ದೇಶಕ ವಿನಾಯಕ ಜೋಶಿ, ಸಹಾಯಕ ನಿರ್ದೇಶಕ ತಾರಕೇಶ್ವರ, ವಿವಿಧ ಸಂಘಗಳ ಸದಸ್ಯರು, ಕೈಗಾರಿಕೆ ಇಲಾಖೆಯ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.