
ರಾಣೆಬೆನ್ನೂರು: ಇಲ್ಲಿನ ಆರ್‌ಟಿಇಎಸ್ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಜ.12 ರಂದು ಮಧ್ಯಾಹ್ನ ಅವಧಿಗೆ ನಡೆಯಬೇಕಿದ್ದ ʻಸಮಗ್ರ ಅರ್ಥಶಾಸ್ತ್ರʼ ವಿಷಯದ ಪರೀಕ್ಷೆ ಬೆಳಿಗಿನ ಅವಧಿಗೆ ಪರೀಕ್ಷೆ ಮುಗಿದ್ದರಿಂದ ಪರೀಕ್ಷೆಯಿಂದ ವಂಚಿತರಾದ ನೂರಾರು ವಿದ್ಯಾರ್ಥಿಗಳು ಮತ್ತೊಂದು ಬಾರಿ ಪರೀಕ್ಷೆ ನಡೆಸಬೇಕೆಂದು ಒತ್ತಾಯಿಸಿ ಸೋಮವಾರ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಿಗೆ ಮನವಿ ಸಲ್ಲಿಸಿದರು.
ಧಾರವಾಡ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಪರೀಕ್ಷೆಗಳ ವೇಳಾಪತ್ರಿಕೆಯ ಬದಲಾವಣೆಯಿಂದ ವಿದ್ಯಾರ್ಥಿಗಳಿಗೆ ಸರಿಯಾದ ಮಾಹಿತಿ ಸಿಗದ ಕಾರಣ ಬೆಳಗಿನ ಅವಧಿಯ ಪರೀಕ್ಷೆಯನ್ನು ಅವರ ಪರೀಕ್ಷಾ ಹಾಲ್‌ಟಿಕೆಟ್ ವೇಳಾಪಟ್ಟಿಯಂತೆ ಮಧ್ಯಾಹ್ನದ ಅವಧಿಗೆ ಪರೀಕ್ಷೆ ಬರೆಯಲು ಬಂದಿದ್ದಾರೆ.
ಹಾವೇರಿ ಜಿಲ್ಲೆಯ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ತಾಲ್ಲೂಕಿನ ಶಿಗ್ಗಾಂವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ರಾಣೆಬೆನ್ನೂರಿನ ಆರ್‌ಟಿಇಎಸ್ ಕಾಲೇಜಿನಲ್ಲಿ ಎರಡು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಸಲಾಗುತ್ತಿದೆ. ಧಾರವಾಡ ವಿಶ್ವವಿದ್ಯಾಲಯದಿಂದ ಜ. 12 ರಂದು ನಡೆದ ಸಮಗ್ರ ಅರ್ಥಶಾಸ್ತ್ರ ವಿಷಯದ ಪರೀಕ್ಷೆ ಸಮಯ ಬದಲಾಗಿದ್ದರಿಂದ ಹಾಲ್‌ಟಿಕೆಟ್‌ನಲ್ಲಿ ಸಮಯ ಮಧ್ಯಾಹ್ನ 2 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ನಮೂದಾಗಿದೆ. ಆದರೆ ಮಧ್ಯಾಹ್ನ ನಡೆಸಬೇಕಾದ ಪರೀಕ್ಷೆ ಬೆಳಿಗ್ಗೆ 9 ಗಂಟೆಗೆ ಆರಂಭವಾಗಿದೆ. ಪರೀಕ್ಷೆ ಬರೆಯಲು ಮುಂದಾದ ವಿದ್ಯಾರ್ಥಿಗಳಿಗೆ ಸಮಯ ಬದಲಾವಣೆ ಮಾಡಿದ ಬಗ್ಗೆ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದವರಾಗಲಿ ಅಥವಾ ಪರೀಕ್ಷಾ ಕೇಂದ್ರದವರಾಗಲಿ ವಿದ್ಯಾರ್ಥಿಗಳಿಗೆ ಯಾವುದೇ ಮಾಹಿತಿ ತಿಳಿಸಿಲ್ಲ. ಹಾಗಾಗಿ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿದರು.
ಶೇ 90 ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದಾರೆ. ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗಿದೆ. ಕೂಡಲೇ ಸಂಬಂಧಿಸಿದ ಪರೀಕ್ಷಾ ವಿಭಾಗದ ಅಧಿಕಾರಿಗಳು ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂದು ಮನವಿ ಮಾಡಿದರು. ಪವನ ಮಣೇಗಾರ, ಶ್ರೀಧರ ಲಮಾಣಿ, ತಾರಕೇಶ ಎಲ್, ಪ್ರಜ್ವಲ್ ಹಳ್ಳಳ್ಳಿ, ಪರವೀನ ಯಲಗಚ್ಚ,ಶರತ್ ಎಸ್.ಕೆ, ಪುಟ್ಟರಾಜ ಯತ್ನಳ್ಳಿ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.