ADVERTISEMENT

ಎಸ್‌ಆರ್‌ಪಿಸಿ ಪರೀಕ್ಷೆಗೆ ನಕಲಿ ಅಭ್ಯರ್ಥಿ ಹಾಜರು

ಸರ್ಕಾರಿ ಕೆಲಸ ಪಡೆಯಲು ವಂಚನೆ: ದಾಖಲಾತಿ ಪರಿಶೀಲನೆ ಸಮಯದಲ್ಲಿ ಪ್ರಕರಣ ಬೆಳಕಿಗೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2021, 15:56 IST
Last Updated 15 ಜುಲೈ 2021, 15:56 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

ಹಾವೇರಿ: ಸ್ಪೆಷಲ್‌ ರಿಸರ್ವ್‌ ಪೊಲೀಸ್‌ ಕಾನ್‌ಸ್ಟೆಬಲ್‌ (ಎಸ್‌ಆರ್‌ಪಿಸಿ) ಹುದ್ದೆಗೆ ನಕಲಿ ಅಭ್ಯರ್ಥಿಯಿಂದ ಲಿಖಿತ ಪರೀಕ್ಷೆ ಬರೆಸಿ, ವಂಚಿಸಿರುವ ಪ್ರಕರಣ ದಾಖಲಾತಿ ಪರಿಶೀಲನೆ ಸಮಯದಲ್ಲಿ ಬೆಳಕಿಗೆ ಬಂದಿದೆ.

ಬೆಳಗಾವಿ ಜಿಲ್ಲೆ ಗೋಕಾಕ ತಾಲ್ಲೂಕಿನ ಬಳೋಬಾಳ ಗ್ರಾಮದ ರಾಘವೇಂದ್ರ ಧರೆಪ್ಪ ಬೆಳವಿ (24) ವಂಚಿಸಿರುವ ಅಭ್ಯರ್ಥಿ ಎಂದು ಗುರುತಿಸಲಾಗಿದೆ.

2020ರ ನವೆಂಬರ್‌ 22ರಂದು ‘ಎಸ್‌ಆರ್‌ಪಿಸಿ’ ಹುದ್ದೆಯ ಲಿಖಿತ ಪರೀಕ್ಷೆಯು ಬೆಂಗಳೂರಿನಲ್ಲಿ ನಡೆದಿತ್ತು. ಪರೀಕ್ಷೆ ಬರೆಯಬೇಕಿದ್ದ ರಾಘವೇಂದ್ರ ತನ್ನ ಬದಲಾಗಿ ಮತ್ತೊಬ್ಬನಿಂದ ಪರೀಕ್ಷೆ ಬರೆಸಿ, ಉತ್ತೀರ್ಣನಾಗಿದ್ದಾನೆ. ನಂತರ 2021ರ ಜೂನ್‌ 16ರಂದು ದಾಖಲಾತಿ ಪರಿಶೀಲನೆಗಾಗಿ ರಾಘವೇಂದ್ರ ಹಾಜರಾದ ಸಮಯದಲ್ಲಿ, ಮೆಡಿಕಲ್‌ ನಾಮಿನಲ್‌ ರೂಲ್‌ ಭಾವಚಿತ್ರ ಮತ್ತು ದಾಖಲಾತಿ ಪರಿಶೀಲನೆ ಸಮಯದಲ್ಲಿ ಸಲ್ಲಿಸಿದ ಭಾವಚಿತ್ರ ತಾಳೆಯಾಗಿಲ್ಲ.

ADVERTISEMENT

ರಾಘವೇಂದ್ರನ ಬೆರಳು ಮುದ್ರೆ ಪಡೆದು ಪರಿಶೀಲನೆ ನಡೆಸಿದಾಗ ಹೊಂದಾಣಿಕೆಯಾಗಿಲ್ಲ. ಲಿಖಿತ ಪರೀಕ್ಷೆ ಮತ್ತು ದೈಹಿಕ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಬೇರೆ ಬೇರೆ ಎಂಬುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶಿಗ್ಗಾವಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

***

ಸೋಲಾರ್‌ ಪಂಪ್‌ಸೆಟ್‌: ₹1.74 ಲಕ್ಷ ವಂಚನೆ

ಹಾವೇರಿ: ಸೋಲಾರ್‌ ಪಂಪ್‌ಸೆಟ್‌ ಮತ್ತು ಸಬ್ಸಿಡಿ ಹಣ ಕೊಡಿಸುವ ನೆಪದಲ್ಲಿ ₹1.74 ಲಕ್ಷ ಹಣವನ್ನು ನೆಟ್‌ ಬ್ಯಾಂಕಿಂಗ್‌ ಮತ್ತು ಫೋನ್‌ಪೇ ಮೂಲಕ ವರ್ಗಾವಣೆ ಮಾಡಿಸಿಕೊಂಡು ವಂಚಿಸಿರುವ ಪ್ರಕರಣ ಸಿಇಎನ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

ರಾಣೆಬೆನ್ನೂರು ತಾಲ್ಲೂಕು ಬೆನಕನಗೊಂಡ ಗ್ರಾಮದ ಮಹೇಶಪ್ಪ ಬೆನ್ನೂರ ಹಣ ಕಳೆದುಕೊಂಡವರು. ಇವರು ರಾಣೆಬೆನ್ನೂರು ನಗರದ ಗುರು ಜೆರಾಕ್ಸ್‌ ಆನ್‌ಲೈನ್‌ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದು, ಅನಾಮಧೇಯ ವ್ಯಕ್ತಿ ಇವರಿಗೆ ಕರೆ ಮಾಡಿ, ಪಿ.ಎಂ. ಕುಸುಮ ಯೋಜನೆಯಡಿ ಸೋಲಾರ್‌ ಪಂಪ್‌ಸೆಟ್‌ ಮತ್ತು ಸಬ್ಸಿಡಿ ಕೊಡಿಸುತ್ತೇವೆ ಎಂದು ನಂಬಿಸಿದ್ದಾರೆ.

ಮಹೇಶಪ್ಪ ಅವರ ಕಡೆಯಿಂದ ಲೀಗಲ್‌ ರಿಜಿಸ್ಟ್ರೇಷನ್‌ ಶುಲ್ಕ ₹5600, ಜಿಎಸ್‌ಟಿ ತೆರಿಗೆ ₹19,150, ನೆಫ್ಟ್‌ ಟ್ರಾನ್ಸಫರ್‌ ಶುಲ್ಕ ₹22.355, ಆರ್‌ಬಿಐ ಹೋಲ್ಡ್‌ ಶುಲ್ಕ₹32,430, ಸಿಎಂಟಿ ಮತ್ತು ಆರ್‌ಬಿಐ ಲೆಟ್‌ ಶುಲ್ಕ ₹45,150, ಎನ್‌ಒಸಿ ಟ್ಯಾಕ್ಸ್‌ ಶುಲ್ಕ₹49,999 ಸೇರಿ ಒಟ್ಟು ₹1.74 ಲಕ್ಷವನ್ನು ಅಕೌಂಟ್‌ಗೆ ಹಾಕಿಸಿಕೊಂಡು ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.