ADVERTISEMENT

ಹಾವೇರಿ |ಹಾವೆಮುಲ್ ಸಿಬ್ಬಂದಿಗೆ ಕಿರುಕುಳ ಸುಳ್ಳು: ಸ್ಪಷ್ಟನೆ

ನಕಲಿ ಪತ್ರ ಸೃಷ್ಟಿ; ಪೊಲೀಸರಿಗೆ ದೂರು ನೀಡಲು ಹಾವೆಮುಲ್ ತಯಾರಿ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 4:05 IST
Last Updated 8 ಆಗಸ್ಟ್ 2025, 4:05 IST
ಮಂಜನಗೌಡ ಪಾಟೀಲ
ಮಂಜನಗೌಡ ಪಾಟೀಲ   

ಹಾವೇರಿ: ‘ಹಾವೇರಿ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ (ಹಾವೆಮುಲ್) ಅಧ್ಯಕ್ಷ ಮಂಜನಗೌಡ ಪಾಟೀಲ ಅವರು ಮಹಿಳಾ ಸಿಬ್ಬಂದಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ’ ಎಂದು ಆರೋಪಿಸಿ ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕರಿಗೆ (ಎಂ.ಡಿ) ಬರೆಯಲಾಗಿದೆ ಎನ್ನಲಾದ ಪತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಆರೋಪ ತಳ್ಳಿ ಹಾಕಿರುವ ಅಧ್ಯಕ್ಷ ಮಂಜನಗೌಡ, ‘ಈ ಪತ್ರವೇ ನಕಲಿ. ಇದೊಂದು ವಿರೋಧಿಗಳ ಅಪಪ್ರಚಾರ. ಪತ್ರ ಸೃಷ್ಟಿಸಿರುವವರ ವಿರುದ್ಧ ಠಾಣೆಗೆ ದೂರು ನೀಡುತ್ತೇನೆ’ ಎಂದು ಹೇಳಿದ್ದಾರೆ.

‘ಧಾರವಾಡ ಹಾಲು ಒಕ್ಕೂಟದಿಂದ ವಿಭಜನೆಗೊಂಡು, ಹಾವೆಮುಲ್ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ 41 ನೌಕರರ ಪೈಕಿ 8 ಮಂದಿ ಮಹಿಳೆಯರಿದ್ದೇವೆ. ಒತ್ತಡದ ನಡುವೆ ಕೆಲಸ ಮಾಡುತ್ತಿದ್ದೇವೆ. ಹೊಸದಾಗಿ ಅಧ್ಯಕ್ಷರಾದ ಮಂಜನಗೌಡ ಅವರು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಏಕವಚನದಲ್ಲಿ ಮಾತನಾಡುತ್ತಾರೆ. ಅದನ್ನು ಪ್ರಶ್ನಿಸಿದರೆ, ಅಮಾನತುಗೊಳಿಸುವುದಾಗಿ ಬೆದರಿಸುತ್ತಿದ್ದಾರೆ. ನಮಗೆ ರಕ್ಷಣೆ ಒದಗಿಸುವಂತೆ ಕೇಳಿಕೊಳ್ಳುತ್ತಿದ್ದೇವೆ’ ಎಂದು ಪತ್ರದಲ್ಲಿ ಬರೆಯಲಾಗಿದೆ. ಅದರಲ್ಲಿ ಐವರು ಮಹಿಳಾ ಉದ್ಯೋಗಿಯ ಹೆಸರುಗಳನ್ನೂ ಉಲ್ಲೇಖಿಸಲಾಗಿದೆ.

ಪತ್ರದ ಮಾಹಿತಿ ತಿಳಿಯುತ್ತಿದ್ದಂತೆ ಒಕ್ಕೂಟದ 8 ಮಹಿಳಾ ಉದ್ಯೋಗಿಗಳು, ‘ಈ ಪತ್ರಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಯಾರೋ ಕಿಡಿಗೇಡಿಗಳು ನಮ್ಮ ಹೆಸರು ಉಲ್ಲೇಖಿಸಿ ನಕಲಿ ಪತ್ರ ಸೃಷ್ಟಿಸಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

ಅಧ್ಯಕ್ಷ ಮಂಜನಗೌಡ ಸಹ ಪತ್ರದ ಬಗ್ಗೆ ಆಡಳಿತ ಮಂಡಳಿ ಸದಸ್ಯರ ಜೊತೆ ಚರ್ಚಿಸಿದರು. ‘ಒಕ್ಕೂಟದ ಏಳಿಗೆ ಸಹಿಸದ ಕೆಲವರು ನಕಲಿ ಪತ್ರದ ಮೂಲಕ ಅಪಪ್ರಚಾರ ಮಾಡುತ್ತಿದ್ದಾರೆ. ಇದರಲ್ಲಿ ರಾಜಕೀಯವೂ ಸೇರಿದೆ. ಇದರ ವಿರುದ್ಧ ಕಾನೂನು ಹೋರಾಟ ನಡೆಸಬೇಕು. ತಪ್ಪಿತಸ್ಥರಿಗೆ ಪಾಠ ಕಲಿಸಬೇಕು’ ಎಂದು ಕೋರಿದರು. ಅದಕ್ಕೆ ಸದಸ್ಯರೂ ಒಪ್ಪಿಗೆ ಸೂಚಿಸಿದರು.

ಪೊಲೀಸ್ ಎಸ್‌ಪಿ ಭೇಟಿ: ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಹಾಗೂ 8 ಮಹಿಳಾ ಉದ್ಯೋಗಿಗಳು ಜಿಲ್ಲಾ ಪೊಲೀಸ್ ಎಸ್‌ಪಿ ಯಶೋಧಾ ವಂಟಗೋಡಿ ಅವರನ್ನು ಗುರುವಾರ ಸಂಜೆ ಭೇಟಿಯಾದರು. ‘ನಕಲಿ ಪತ್ರ ಸೃಷ್ಟಿಸಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಿ’ ಎಂದು ಕೋರಿದರು.

ಅದಕ್ಕೆ ಪ್ರತಿಕ್ರಿಯಿಸಿದ ಎಸ್‌ಪಿ, ‘ಹಾವೇರಿ ಶಹರ ಠಾಣೆಗೆ ಹೋಗಿ ದೂರು ನೀಡಿ’ ಎಂದರು. ಅದರಂತೆ ಎಲ್ಲರೂ ಠಾಣೆಗೆ ಹೋಗಿದ್ದರು. ‘ಅಧ್ಯಕ್ಷರ ಹೆಸರಿನಲ್ಲಿ ಪತ್ರವಿದೆ. ಹೀಗಾಗಿ, ಅವರಿಂದ ವೈಯಕ್ತಿಕವಾಗಿ ದೂರು ನೀಡಿದರೆ ಎಫ್‌ಐಆರ್ ದಾಖಲಿಸಿಕೊಳ್ಳಲಾಗುವುದು’ ಎಂದು ಪೊಲೀಸರು ತಿಳಿಸಿದರು. ಶುಕ್ರವಾರ ಅಧ್ಯಕ್ಷರ ಮೂಲಕವೇ ದೂರು ನೀಡುವುದಾಗಿ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ. 

‘ಲಾಭದತ್ತ ಒಕ್ಕೂಟ; ರಾಜಕೀಯ ಕೈವಾಡ’:

‘ನಷ್ಟದಲ್ಲಿದ್ದ ಒಕ್ಕೂಟ ನಿಧಾನವಾಗಿ ಲಾಭದತ್ತ ಸಾಗಿದೆ. ನನ್ನ ಕೆಲಸ ಸಹಿಸದವರು ನಕಲಿ ಪತ್ರದ ಮೂಲಕ ಅಪಪ್ರಚಾರ ಮಾಡುತ್ತಿದ್ದಾರೆ. ಇದರಲ್ಲಿ ರಾಜಕೀಯ ಕೈವಾಡವೂ ಇದೆ’ ಎಂದು ಹಾವೆಮುಲ್ ಅಧ್ಯಕ್ಷ ಮಂಜನಗೌಡ ಪಾಟೀಲ ಹೇಳಿದರು. ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ‘ಒಕ್ಕೂಟದ ಬಗ್ಗೆ ಪದೇ ಪದೇ ಅಪಪ್ರಚಾರ ಮಾಡಲಾಗುತ್ತಿದೆ. ಇದನ್ನು ನಾವು ಸುಮ್ಮನೇ ಬಿಡುವುದಿಲ್ಲ. ಕಾನೂನಿನ ಮೂಲಕ ಉತ್ತರ ನೀಡುತ್ತೇವೆ’ ಎಂದರು. ‘ಒಕ್ಕೂಟದಲ್ಲಿ ಕೆಲಸ ಮಾಡುವ ಮಹಿಳೆಯರ ಹೆಸರಿನಲ್ಲಿ ನಕಲಿ ಪತ್ರ ಸೃಷ್ಟಿಸಿ ಅವರ ಹೆಸರಿಗೂ ಚ್ಯುತಿ ಉಂಟು ಮಾಡಲಾಗಿದೆ. ಇದಕ್ಕೆ ನಾನು ಹೆದರುವುದಿಲ್ಲ. ಕಾನೂನು ಬದ್ಧವಾದ ರೀತಿಯಲ್ಲಿ ಒಕ್ಕೂಟದ ಅಭಿವೃದ್ಧಿಗಾಗಿ ನನ್ನ ಕೆಲಸ ಮುಂದುವರಿಸುವೆ’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.