ADVERTISEMENT

ವಿದೇಶದಲ್ಲಿ ಉದ್ಯೋಗ; ನಕಲಿ ಏಜಂಟರ ಬಗ್ಗೆ ಎಚ್ಚರಿಕೆ ವಹಿಸಿ: ಯಾಸೀರ್‌ ಅರಾಫತ್‌

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 2:27 IST
Last Updated 24 ಜುಲೈ 2025, 2:27 IST
ಯಾಸೀರ್‌ಅರಾಫತ್‌ ಮಕಾಂದಾರ್‌
ಯಾಸೀರ್‌ಅರಾಫತ್‌ ಮಕಾಂದಾರ್‌   

ಹಾನಗಲ್: ಉದ್ಯೋಗ ಕೊಡಿಸುವ ನಕಲಿ ಏಜಂಟರ ಜಾಲಕ್ಕೆ ಸಿಲುಕಿ ಮದ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಅತಂತ್ರ ಸ್ಥಿತಿಯಲ್ಲಿ ಸಂಕಷ್ಟ ಅನುಭವಿಸುವ ಭಾರತೀಯರ ನೆರವಿಗೆ ಏಮ್‌ ಇಂಡಿಯಾ ಫೋರಂ ಕೆಲಸ ಮಾಡುತ್ತದೆ ಎಂದು ಫೋರಂ ಕಾರ್ಯದರ್ಶಿ ಯಾಸೀರ್‌ ಅರಾಫತ್‌ ಮಕಾಂದಾರ್‌ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ನಾಲ್ಕು ವರ್ಷಗಳಿಂದ ಏಮ್‌ ಇಂಡಿಯಾ ಫೋರಂ ಸ್ವಯಂ ಸೇವಾ ಜಾಗತಿಕ ಸಂಸ್ಥೆಯಾಗಿ ವಿವಿಧ ಕಾರಣಕ್ಕಾಗಿ ವಿದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 4,534 ಭಾರತೀಯರನ್ನು ಸುರಕ್ಷಿತವಾಗಿ ಯಾತ್ನಾಡಿಗೆ ಕರೆತರುವ ಕಾರ್ಯ ಮಾಡಿದ್ದೇವೆ ಎಂದರು.

ಯುಎಇ, ಗಲ್ಫ್‌ ರಾಷ್ಟ್ರಗಳಿಗೆ ಭಾರತದಿಂದ ಸಾಕಷ್ಟು ಪ್ರಮಾಣದಲ್ಲಿ ಜನರು ಉದ್ಯೋಗ ಅರಸಿ ಹೋಗುತ್ತಾರೆ. ಇವರಲ್ಲಿ ಶೇ 80ರಷ್ಟು ಬ್ಲೂ ಕಾಲರ್‌ (ಶ್ರಮಿಕ ಕೆಲಸ) ಕೆಟಗರಿಯವರು ಇರುತ್ತಾರೆ. ಇಂತಹವರು ಹೆಚ್ಚಾಗಿ ಅನಕ್ಷರಸ್ಥರು, ತಿಳಿವಳಿಕೆ ಕಡಿಮೆ ಉಳ್ಳವರು ಇರುತ್ತಾರೆ. ಉದ್ಯೋಗ ಕೊಡಿಸುವ ನಕಲಿ ಏಜಂಟಿಂದ ಇಂಥವರು ಸುಲಭವಾಗಿ ಮೋಸ ಹೋಗುತ್ತಾರೆ. ಮೋಸದ ಜಾಲಕ್ಕೆ ಒಳಗಾದವರು ಆಹಾರ, ನೀರು, ಮೂಲ ಸೌಲಭ್ಯಗಳಿಲ್ಲದೇ ಸಾಕಷ್ಟು ಜನರು ಪರದಾಡುತ್ತಾರೆ. ಇವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರುವ ಕಾರ್ಯವನ್ನು ನಮ್ಮ ಫೋರಂ ಮಾಡುತ್ತಿದೆ ಎಂದು ಹೇಳಿದರು.

ADVERTISEMENT

ದುಬೈನಲ್ಲಿ ಉದ್ಯೋಗಿಯಾಗಿರುವ ಭಟ್ಕಳದ ಶಿರಾಲಿ ಶೇಖ್‌ ಮುಜಫರ್‌ ಈ ಫೋರಂನ ಸಂಸ್ಥಾಪಕ ಅಧ್ಯಕ್ಷರು. ಭಾರತೀಯ ಮೂಲದ ಒಟ್ಟು 12 ಜನ ಈ ಫೋರಂನಲ್ಲಿ ಕೆಲಸ ಮಾಡುತ್ತಿದ್ದೇವೆ. ನಾನು ಮತ್ತು ಭೋಪಾಲ್‌ನ ಸೈಯ್ಯದ್‌ ಆಬೀದ್‌ ಹುಸೇನ್‌ ಇಲ್ಲಿನ ರಾಯಭಾರ ಕಚೇರಿ ಪ್ರಕ್ರಿಯೆಗಳ ವ್ಯವಸ್ಥೆ ನೋಡಕೊಳ್ಳುತ್ತೇವೆ. ಉಳಿದವರು ವಿವಿಧ ದೇಶಗಳಲ್ಲಿ ನೆಲೆಸಿದ್ದಾರೆ. ನೊಂದ ಭಾರತೀಯ ನಾಗರಿಕರಿಗಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಯುಎಇ, ಬಹರೇನ್‌, ಸೌದಿ ಅರೇಬಿಯಾ, ಇರಾನ್‌ ಇರಾಕ್‌, ಲಿಬೇರಿಯಾ ದೇಶಗಳಲ್ಲಿ ವಿವಿಧ ಕಾರಣಕ್ಕೆ ಸಂಕಷ್ಟಕ್ಕೆ ಸಿಲುಕಿದವರ ರಕ್ಷಣೆ ಮಾಡಲಾಗಿದೆ. ಅಲ್ಲದೆ, ಸಣ್ಣಪುಟ್ಟ ಅಪರಾಧಕ್ಕಾಗಿ ವಿದೇಶಿ ಜೈಲು ವಾಸಿಯಾದವರಿಗೆ ಕಾನೂನು ನೆರವು ನೀಡಿ ಹೊರ ತರಲಾಗಿದೆ. ವಿದೇಶದಲ್ಲಿ ಅಸುನೀಗದ ಭಾರತೀಯರ ಪಾರ್ಥಿವ ಶರೀರವನ್ನು ತಾಯ್ನಾಡಿಗೆ ತರುವ ಮಾನವೀಯ ಕೆಲಸವನ್ನೂ ಫೋರಂ ಮಾಡುತ್ತಿದೆ ಎಂದರು. ವಿದೇಶದಲ್ಲಿ ಉದ್ಯೋಗದ ಭರವಸೆ ನೀಡುವ ಏಜನ್ಸಿಗಳ ಪ್ರಾಮಾಣಿಕತೆಯ ಬಗ್ಗೆ ಮನವರಿಕೆ ಮಾಡಿಕೊಂಡು ಹೆಜ್ಜೆ ಇಡಬೇಕು ಎಂದು ಅವರು ಸಲಹೆ ನಿಡಿದರು.

ಮಧ್ಯಪ್ರದೇಶ, ಉತ್ತರ ಪ್ರದೇಶ, ಜಾರ್ಖಂಡ, ಪಶ್ಚಿಮ ಬಂಗಾಲ, ತೆಲಂಗಾಣ ರಾಜ್ಯಗಳಿಂದ ಹೆಚ್ಚು ಸಂಖ್ಯೆಯಲ್ಲಿ ಗಲ್ಫ್‌ ರಾಷ್ಟ್ರಗಳಿಗೆ ಜನರು ಉದ್ಯೋಗಕ್ಕಾಗಿ ಹೋಗುತ್ತಾರೆ. ಈ ರಾಜ್ಯಗಳಲ್ಲಿ ಜಾಗೃತಿ ಅಭಿಯಾನ ಕೈಗೊಳ್ಳುವ ಉದ್ದೇಶವನ್ನು ಫೋರಂ ಹೊಂದಿದೆ ಎಂದರು.

ಸಂಕಷ್ಟದಲ್ಲಿರುವವರು ನಮ್ಮನ್ನು ಸಂಪರ್ಕಿಸಿದರೆ ಭಾರತೀಯ ರಾಯಭಾರ ಕಚೇರಿ ಮತ್ತು ಇಲ್ಲಿನ ವಿದೇಶಿ ವ್ಯವಹಾರಗಳ ಮಂತ್ರಾಲಯದ ಸಹಯೋಗದಲ್ಲಿ ನೆರವು ನೀಡುತ್ತೇವೆ. ಯುಎಇನಲ್ಲಿ ವಿವಿಧ ಜನಜಾಗೃತಿ ಶಿಬಿರಗಳಲ್ಲಿ ಭಾಗಿಯಾಗಿ ಆರ್ಥಿಕ ಅಪರಾಧಗಳು, ಸಿಮ್‌ ಕಾರ್ಡ್‌ ಮೋಸ, ಅನಧಿಕೃತ ಮತ್ತು ಸುಳ್ಳು ಉದ್ಯೋಗ ಕೊಡಿಸುವ ಏಜನ್ಸಿಗಳು, ಏಜಂಟರ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ. ಬ್ಲೂ ಕಾಲರ್‌ ಕಾರ್ಮಿಕ ಕಲ್ಯಾಣ ಕಾರ್ಯಕ್ರಮಗಳಲ್ಲಿ ಏಮ್‌ ಇಂಡಿಯಾ ಫೋರಂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದೆ ಎಂದು ಯಾಸೀರ್‌ಅರಾಫತ್‌ ಹೇಳಿದರು. ಸಂಕಷ್ಟದಲ್ಲಿದ್ದವರು ಮೊ: 9902223229, 98886827691 ಸಂಕಷ್ಟದಲ್ಲಿರುವವರು ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.