ADVERTISEMENT

ಹಾವೇರಿ: ರೈತರಿಗೆ ವಿತರಿಸಲು 4 ಲಕ್ಷ ಸಸಿ ಸಿದ್ಧ

ಅರಣ್ಯ ಇಲಾಖೆಯ ಕರಜಗಿ ಸಸ್ಯಪಾಲನಾಲಯದಲ್ಲಿ ಒಟ್ಟು 15 ಲಕ್ಷ ವಿವಿಧ ಜಾತಿಯ ಗಿಡಗಳ ಆರೈಕೆ

ಸಿದ್ದು ಆರ್.ಜಿ.ಹಳ್ಳಿ
Published 9 ಮೇ 2020, 20:00 IST
Last Updated 9 ಮೇ 2020, 20:00 IST
ಹಾವೇರಿ ವಿಭಾಗದ ಅರಣ್ಯ ಇಲಾಖೆಯ ಕರಜಗಿ ಸಸ್ಯಪಾಲನಾಲಯದಲ್ಲಿ ಮಳೆಗಾಲದಲ್ಲಿ ನೆಡಲು ಸಿದ್ಧವಾಗಿರುವ ವಿವಿಧ ಜಾತಿಯ ಸಸಿಗಳು  –ಪ್ರಜಾವಾಣಿ ಚಿತ್ರ  
ಹಾವೇರಿ ವಿಭಾಗದ ಅರಣ್ಯ ಇಲಾಖೆಯ ಕರಜಗಿ ಸಸ್ಯಪಾಲನಾಲಯದಲ್ಲಿ ಮಳೆಗಾಲದಲ್ಲಿ ನೆಡಲು ಸಿದ್ಧವಾಗಿರುವ ವಿವಿಧ ಜಾತಿಯ ಸಸಿಗಳು  –ಪ್ರಜಾವಾಣಿ ಚಿತ್ರ     

ಹಾವೇರಿ: ಈ ಬಾರಿ ಮಳೆಗಾಲದಲ್ಲಿ ಅರಣ್ಯ ಜಮೀನು, ಡೀಮ್ಡ್‌ ಫಾರೆಸ್ಟ್‌, ರಸ್ತೆ ಬದಿ ಹಾಗೂ ಶಾಲಾವನ ಸೇರಿದಂತೆ ಒಟ್ಟು ಎರಡು ಸಾವಿರ ಹೆಕ್ಟೇರ್‌ನಲ್ಲಿ 10.78 ಲಕ್ಷ ಸಸಿಗಳನ್ನು ಬೆಳೆಸಲು ಹಾವೇರಿ ಪ್ರಾದೇಶಿಕ ಅರಣ್ಯ ವಿಭಾಗ ಗುರಿ ಇಟ್ಟುಕೊಂಡಿದೆ.

ಅಷ್ಟೇ ಅಲ್ಲದೆ, ಕೃಷಿ ಜಮೀನಿನಲ್ಲಿ ಬೆಳೆಸಲಿ ಎಂಬ ಉದ್ದೇಶದಿಂದ ರೈತರಿಗೆ ಕನಿಷ್ಠ ದರದಲ್ಲಿ (₹1ರಿಂದ ₹3) ವಿತರಿಸಲು ಒಟ್ಟು 4.35 ಲಕ್ಷ ಸಸಿಗಳನ್ನು ಬೆಳೆಸಲಾಗಿದೆ. ಒಟ್ಟು 15 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ಹಾವೇರಿ ತಾಲ್ಲೂಕು ಕರಜಗಿ ಸಸ್ಯಪಾಲನಾಲಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಆರೈಕೆ ಮಾಡುತ್ತಿದ್ದಾರೆ.

ತರಹೇವಾರಿ ಸಸಿಗಳು

ADVERTISEMENT

ಹೆಬ್ಬೇವು, ಮಹಾಗನಿ, ಸಾಗುವಾನಿ (ತೇಗ) ಈ ಜಾತಿಯ ಸಸಿಗಳು ತಲಾ ಒಂದು ಲಕ್ಷ ಹಾಗೂ ಸಿಲ್ವರ್‌, ನೇರಳೆ, ಹಲಸು, ಹೊಂಗೆ, ಸಂಪಿಗೆ, ಬಿದಿರು ಸೇರಿದಂತೆ ಒಂದು ಲಕ್ಷ ಸಸಿಗಳನ್ನು ಬೆಳೆಸಲಾಗಿದೆ. ಜತೆಗೆ 37 ಸಾವಿರ ಶ್ರೀಗಂಧ ಸಸಿಗಳು ಕೂಡ ಸಸ್ಯಪಾಲನಾಲಯದಲ್ಲಿ ನಳನಳಿಸುತ್ತಿವೆ. ಈ ಎಲ್ಲ ಸಸಿಗಳನ್ನು ರೈತರಿಗೆ ಶೀಘ್ರದಲ್ಲೇ ವಿತರಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

ಜಿಲ್ಲೆಯಲ್ಲಿ 48 ಸಾವಿರ ಹೆಕ್ಟೇರ್‌ ಅರಣ್ಯ ಪ್ರದೇಶವಿದ್ದು, ಜಿಲ್ಲೆಯ ಒಟ್ಟು ಭೂಭಾಗದಶೇ 9ರಷ್ಟು ಪ್ರದೇಶವನ್ನು ಹೊಂದಿದೆ. ಹಾವೇರಿ ವಿಭಾಗದಲ್ಲಿ ರಾಣೆಬೆನ್ನೂರು, ಹಾವೇರಿ, ಬ್ಯಾಡಗಿ, ದುಂಡಶಿ, ಹಾನಗಲ್‌, ಹಿರೇಕೆರೂರು ಎಂಬ ಆರು ವಲಯಗಳಿವೆ. ಜತೆಗೆ, ರಾಣೆಬೆನ್ನೂರಿನ ಕೃಷ್ಣಮೃಗ ವನ್ಯಜೀವಿಧಾಮ ಕೂಡ ಇದೆ.

‘ಈ ಬಾರಿ ಹಾವೇರಿ ನಗರವವನ್ನು ‘ಹಸಿರೀಕರಣ’ ಮಾಡುವ ಉದ್ದೇಶದಿಂದ 3 ಸಾವಿರ ಸಸಿಗಳನ್ನು ವಿವಿಧೆಡೆ ನೆಡಲು ಕ್ರಿಯಾಯೋಜನೆ ರೂಪಿಸಿದ್ದು, ಗುಂಡಿ ತೆಗೆಯುವ ಕಾರ್ಯ ಪ್ರಗತಿಯಲ್ಲಿದೆ. ಹದವಾದ ಮಳೆ ಬಿದ್ದ ನಂತರ ಸಸಿ ನೆಡುವ ಕಾರ್ಯ ಕೈಗೊಳ್ಳುತ್ತೇವೆ’ ಎಂದು ವಲಯ ಅರಣ್ಯಾಧಿಕಾರಿ ಉಮರ್‌ಬಾಷಾ ತಿಳಿಸಿದರು

ಕೃಷಿ ಪ್ರೋತ್ಸಾಹಧನ

‘ಹಾವೇರಿ ವಿಭಾಗದಲ್ಲಿ ಕೃಷಿ ಪ್ರೋತ್ಸಾಹಧನ ಯೋಜನೆಯಡಿ 2015ರಿಂದ 2020ರವರೆಗೆ ಒಟ್ಟು 2,615 ಫಲಾನುಭವಿ ರೈತರಿಗೆ 12.59 ಲಕ್ಷ ಸಸಿಗಳನ್ನು ಇದುವರೆಗೂ ವಿತರಿಸಲಾಗಿದೆ. ಅಷ್ಟೇ ಅಲ್ಲದೆ, ಒಟ್ಟು ₹3.20 ಕೋಟಿ ಪ್ರೋತ್ಸಾಧನವನ್ನೂ ನೀಡಲಾಗಿದೆ. ಈ ಯೋಜನೆಯಡಿ ₹10 ಕೊಟ್ಟು ರೈತರು ನೋಂದಣಿಯಾದರೆ, ಅವರು ನೆಟ್ಟ ಸಸಿಗಳು ಬದುಕುಳಿದರೆ ಮೊದಲನೇ ವರ್ಷ ₹30, ಎರಡನೇ ವರ್ಷ ₹30 ಹಾಗೂ ಮೂರನೇ ವರ್ಷ ₹40 ತಲಾ ಸಸಿಗೆ ಅರಣ್ಯ ಇಲಾಖೆಯಿಂದ ಪ್ರೋತ್ಸಾಧನ ನೀಡಲಾಗುತ್ತದೆ. ಅಂದರೆ, ಒಂದು ಸಸಿಯನ್ನು ಆರೈಕೆ ಮಾಡಿ ಕಾಪಾಡಿಕೊಂಡರೆ ಒಟ್ಟು 100 ಪ್ರೋತ್ಸಾಹಧನ ಸಿಗುತ್ತದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್‌.ಇ.ಕ್ರಾಂತಿ ತಿಳಿಸಿದರು.

ಅರ್ಜಿ ಸಲ್ಲಿಸಿ, ಸಸಿ ಪಡೆಯಿರಿ

ಪ್ರತಿ ಹೆಕ್ಟೇರ್‌ಗೆ (ಎರಡೂವರೆ ಎಕರೆ) 400 ಸಸಿಗಳನ್ನು ಬೆಳೆಸಲು ‘ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ’ಯಡಿ ಪ್ರೋತ್ಸಾಹಧನ ಕೊಡಲಾಗುತ್ತದೆ. ಎಕರೆಗೆ 160 ಗಿಡಗಳಿಗೆ ಮಾತ್ರ ಪ್ರೋತ್ಸಾಹಧನ ಲಭ್ಯವಿರುತ್ತದೆ. ಸಸಿಗಳು ಬೇಕಾದ ರೈತರು ಅರ್ಜಿಯೊಂದಿಗೆ, ಫೋಟೊ, ಆಧಾರ್‌ಕಾರ್ಡ್‌, ಪಹಣಿ ಪತ್ರ, ಬ್ಯಾಂಕ್‌ ಖಾತೆಯ ವಿವರವನ್ನು ಸಲ್ಲಿಸಬೇಕು. ಮಾಹಿತಿಗೆ ಹತ್ತಿರದ ವಲಯ ಅರಣ್ಯ ಇಲಾಖೆ ಕಚೇರಿಗಳನ್ನು ಸಂಪರ್ಕಿಸಬಹುದು (ಮೊ:08375–298936).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.