ಬ್ಯಾಡಗಿ: ತಾಲ್ಲೂಕಿನ ಗುಡ್ಡದ ಮಲ್ಲಾಪುರ ಗ್ರಾಮದಲ್ಲಿ ನಿರಂತರ ಮಳೆಯಿಂದಾಗಿ ಶಿಥಿಲಗೊಂಡಿದ್ದ ಗೋಡೆ ಕುಸಿದು ಕೃಷಿ ಕಾರ್ಮಿಕ ಗದಿಗೆಪ್ಪ ಮಲ್ಲಪ್ಪ ಕೊಪ್ಪದ (65) ಎಂಬುವವರು ಮೃತಪಟ್ಟಿದ್ದಾರೆ.
‘ಗುಡ್ಡದ ಮಲ್ಲಾಪುರದ ನಿವಾಸಿ ಗದಿಗೆಪ್ಪ, ಗ್ರಾಮದಲ್ಲಿರುವ ಹುಚ್ಚಯ್ಯಸ್ವಾಮಿ ದಾಸೋಹ ಮಠದಲ್ಲಿರುವ ದನಗಳ ಆರೈಕೆ ಮಾಡುತ್ತಿದ್ದರು. ಇವರ ಸಾವಿನ ಸಂಬಂಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಕಾಗಿನೆಲೆ ಠಾಣೆ ಪೊಲೀಸರು ತಿಳಿಸಿದರು.
‘ಗದಿಗೆಪ್ಪ ಅವರು ಸುಮಾರು 25 ವರ್ಷಗಳಿಂದ ಮಠದಲ್ಲಿ ಕೆಲಸ ಮಾಡುತ್ತಿದ್ದರು. ಜಾನುವಾರುಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಅವರದ್ದಾಗಿತ್ತು. ಶನಿವಾರ (ಜುಲೈ 17) ಸಂಜೆ ಎಂದಿನಂತೆ ದನದ ಕೊಟ್ಟಿಗೆಯಲ್ಲಿ ಗದಿಗೆಪ್ಪ ಅವರು ಕೆಲಸ ಮಾಡುತ್ತಿದ್ದರು.’
‘ಗುಡ್ಡದ ಮಲ್ಲಾಪುರ ಗ್ರಾಮದಲ್ಲಿ ಕೆಲ ದಿನಗಳಿಂದ ಬಿಡುವು ನೀಡುತ್ತಲೇ ಮಳೆ ಸುರಿಯುತ್ತಿದೆ. ಈ ಮಳೆಯಿಂದಾಗಿ ಗೋಡೆ ಶಿಥಿಲಗೊಂಡಿತ್ತು. ಶನಿವಾರ ಏಕಾಏಕಿ ಕುಸಿದ ಗೋಡೆ, ಗದಿಗೆಪ್ಪ ಹಾಗೂ ಆಕಳುಗಳ ಮೇಲೆ ಬಿದ್ದಿತ್ತು. ಅವಶೇಷಗಳಡಿ ಸಿಲುಕಿ ತೀವ್ರ ಗಾಯಗೊಂಡಿದ್ದ ಗದಿಗೆಪ್ಪ ಅವರನ್ನು ಸ್ಥಳೀಯರೇ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಗದಿಗೆಪ್ಪ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು’ ಎಂದು ಮಾಹಿತಿ ನೀಡಿದರು.
₹ 5 ಲಕ್ಷ ಪರಿಹಾರದ ಆದೇಶ ಪ್ರತಿ: ಗೋಡೆ ಕುಸಿದು ಮೃತಪಟ್ಟ ಗದಿಗೆಪ್ಪ ಅವರ ಅವಲಂಬಿತರಿಗೆ ₹ 5 ಲಕ್ಷ ಪರಿಹಾರ ಘೋಷಿಸಲಾಗಿದ್ದು, ಇದರ ಆದೇಶ ಪ್ರತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ಭಾನುವಾರ ವಿತರಿಸಿದರು.
ಪ್ರತಿ ವಿತರಿಸಿ ಮಾತನಾಡಿದ ಸಚಿವ, ‘ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗುತ್ತಿದೆ. ಶಿಥಿಲಾವಸ್ಥೆಯಲ್ಲಿರುವ ಮನೆಗಳಲ್ಲಿ ವಾಸಿಸುವ ಜನರು ಜಾಗೃತಿಯಿಂದ ಇರಬೇಕು‘ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.