ADVERTISEMENT

ಅನ್ನದಾತರ ತಟ್ಟೆಗೆ ಕೈ ಹಾಕಿದ ಮೋದಿ: ರೈತ ಮುಖಂಡ ಕೆ.ಟಿ.ಗಂಗಾಧರ

ಕೃಷಿ ತಿದ್ದುಪಡಿ ಕಾಯ್ದೆಗಳಿಗೆ ವಿರೋಧ: ಹಾವೇರಿಯಲ್ಲಿ ಮಾರ್ಚ್‌ 21ರಂದು ‘ರೈತ ಜಾಗೃತಿ ಸಮಾವೇಶ’

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2021, 14:21 IST
Last Updated 26 ಫೆಬ್ರುವರಿ 2021, 14:21 IST
ಕೆ.ಟಿ. ಗಂಗಾಧರ್‌, ರೈತ ಮುಖಂಡ 
ಕೆ.ಟಿ. ಗಂಗಾಧರ್‌, ರೈತ ಮುಖಂಡ    

ಹಾವೇರಿ: ‘ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿಗೆ ಸಂಬಂಧಿಸಿದ ಮೂರು ಕರಾಳ ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ, ಭೂಮಿ, ಮಾರುಕಟ್ಟೆ, ವಿದ್ಯುತ್‌ ಎಲ್ಲವನ್ನು ಬಂಡವಾಳಶಾಹಿಗಳ ಪಾಲು ಮಾಡುತ್ತಿದ್ದಾರೆ. ಅನ್ನದಾತರ ತಟ್ಟೆಗೆ ಕೈ ಹಾಕಿದ್ದಾರೆ, ದುಡಿಯುವ ಕೈಗಳನ್ನು ಕಟ್ಟಿ ಹಾಕಲು ಹೊರಟಿದ್ದಾರೆ’ ಎಂದು ರೈತ ಮುಖಂಡ ಕೆ.ಟಿ.ಗಂಗಾಧರ ಕಿಡಿಕಾರಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಎಪಿಎಂಸಿ, ಭೂಸುಧಾರಣೆ ಕಾಯ್ದೆ ಹಾಗೂ ವಿದ್ಯುತ್‌ ವಲಯ ಖಾಸಗೀಕರಣ ಈ ಮೂರು ತಿದ್ದುಪಡಿ ಕಾಯ್ದೆಗಳಿಂದ ದೇಶದ ಶೇ 70ರಷ್ಟು ಜನರ ಮೇಲೆ ನೇರವಾಗಿ ದುಷ್ಪರಿಣಾಮ ಬೀರುತ್ತದೆ. ದೇಶದ ಆಹಾರ ಸ್ವಾವಲಂಬನೆಯನ್ನು ಬಂಡವಾಳಶಾಹಿಗಳಿಗೆ ಹಸ್ತಾಂತರಿಸುವ ಹುನ್ನಾರ ಮಾಡಿದ್ದಾರೆ’ ಎಂದು ಆರೋಪಿಸಿದರು.

ಹಿಂದಿನ ಸರ್ಕಾರಗಳು ಸಂಘಟನೆ, ಹೋರಾಟಗಳನ್ನು ಮುರಿಯಲು ಗೋಲಿಬಾರ್‌, ಬಂಧನ ಮುಂತಾದ ಅಸ್ತ್ರಗಳನ್ನು ಬಳಸುತ್ತಿದ್ದವು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ‘ಅಘೋಷಿತ ತುರ್ತುಪರಿಸ್ಥಿತಿ’ ಹೇರಿ ಎಲ್ಲರ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ. ರೈತರ ಹೋರಾಟವನ್ನು ಬೆಂಬಲಿಸಿದ ದಿಶಾ ರವಿ ಅವರನ್ನು ಬಂಧಿಸಿ, ‘ದೇಶದ್ರೋಹ’ದ ಪಟ್ಟ ಕಟ್ಟುತ್ತಾರೆ. ಈ ಅನಿಷ್ಟ ಕಾಯ್ದೆಗಳು ತೊಲಗುವವರೆಗೆ ಭಾರತೀಯರಿಗೆ ನೆಮ್ಮದಿ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಸುಗ್ರೀವಾಜ್ಞೆ ಅಗತ್ಯವೇನಿತ್ತು?

ರೈತರ ಉದ್ಧಾರಕ್ಕಾಗಿಯೇ ಕಾಯ್ದೆಗಳನ್ನು ತಿದ್ದುಪಡಿ ಮಾಡಿದ್ದರೆ, ಸುಗ್ರೀವಾಜ್ಞೆ ಮೂಲಕ ತರಾತುರಿಯಲ್ಲಿ ಜಾರಿಗೊಳಿಸುವ ಅಗತ್ಯವೇನಿತ್ತು. ಕೇಂದ್ರದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವಿದೆ. ಹೀಗಾಗಿ ಸಂಸತ್‌ನಲ್ಲಿ ಮಸೂದೆಗಳನ್ನು ಮಂಡಿಸಿ, ಚರ್ಚೆ ನಡೆಸಿ ಜಾರಿಗೊಳಿಸಬಹುದಿತ್ತು. ಆದರೆ ಕಾಯ್ದೆಗಳ ಬಗ್ಗೆ ಮೋದಿಗೇ ಸ್ಪಷ್ಟ ಅರಿವಿಲ್ಲ ಎಂದು ಟೀಕಿಸಿದರು.

‘ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ಯಾರೂ ಕೃಷಿ ಉತ್ಪನ್ನಗಳನ್ನು ಖರೀದಿಸಬಾರದು. ಖರೀದಿಸಿದರೆ, ಅದು ಶಿಕ್ಷಾರ್ಹ ಅಪರಾಧ’ ಎಂಬ ಕಾನೂನನ್ನು ಕೇಂದ್ರ ಸರ್ಕಾರ ಜಾರಿಗೆ ತರಬೇಕು. ‘ವಿಶ್ವ ವಾಣಿಜ್ಯ ಒಪ್ಪಂದ’ಕ್ಕೆ ಹಿಂದಿನ ಪ್ರಧಾನಿ ಮನಮೋಹನ್‌ಸಿಂಗ್‌ ಸಹಿ ಹಾಕಿದ ದಿನವೇ ಭಾರತೀಯರ ಮೇಲೆ ತೂಗುಗತ್ತಿ ಆರಂಭವಾಯಿತು’ ಎಂದು ಹೇಳಿದರು.

‘ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಬೇಕು ಹಾಗೂ ಎಪಿಎಂಸಿ ಮಾರುಕಟ್ಟೆಗಳ ಅಸ್ತಿತ್ವವನ್ನು ಕಾಪಾಡಬೇಕು’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮತ್ತು ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.