ADVERTISEMENT

ಹಾವೇರಿ: ಕೃಷಿ ಕಾರ್ಮಿಕರಿಗೆ ವಿಮಾನದಲ್ಲಿ ಪ್ರವಾಸ ಭಾಗ್ಯ!

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2024, 13:35 IST
Last Updated 20 ಫೆಬ್ರುವರಿ 2024, 13:35 IST
<div class="paragraphs"><p>ಶಿಗ್ಗಾವಿ ತಾಲ್ಲೂಕಿನ ಶ್ಯಾಡಂಬಿ ಗ್ರಾಮದ ಕೃಷಿ ಕಾರ್ಮಿಕರು ಆಗ್ರಾದ ತಾಜ್‌ಮಹಲ್‌ ಮುಂಭಾಗ ಕುಳಿತಿರುವ ದೃಶ್ಯ</p></div>

ಶಿಗ್ಗಾವಿ ತಾಲ್ಲೂಕಿನ ಶ್ಯಾಡಂಬಿ ಗ್ರಾಮದ ಕೃಷಿ ಕಾರ್ಮಿಕರು ಆಗ್ರಾದ ತಾಜ್‌ಮಹಲ್‌ ಮುಂಭಾಗ ಕುಳಿತಿರುವ ದೃಶ್ಯ

   

ತಡಸ (ಹಾವೇರಿ): ಶಿಗ್ಗಾವಿ ತಾಲ್ಲೂಕಿನ ಶ್ಯಾಡಂಬಿ ಗ್ರಾಮದ ಪ್ರಗತಿಪರ ರೈತ ವರುಣಗೌಡ ಪಾಟೀಲ ಅವರು ತಮ್ಮ ತೋಟದಲ್ಲಿ ಕೆಲಸ ಮಾಡುವ ಕೃಷಿ ಕಾರ್ಮಿಕರಿಗೆ ಸ್ವಂತ ಹಣದಲ್ಲಿ ವಿಮಾನದ ಮೂಲಕ ಪ್ರವಾಸ ಭಾಗ್ಯ ಕಲ್ಪಿಸಿದ್ದಾರೆ.

ದೀಪಾವಳಿಯಂದು ವಿಶೇಷ ಉಡುಗೊರೆ ಕೊಡುವ ತೋಟದ ಮಾಲೀಕರಾದ ವರುಣಗೌಡ ಮತ್ತು ಕಿರಣಗೌಡ ಅವರು, ಈ ಬಾರಿ ತೋಟದ ಏಳು ಕೃಷಿ ಕಾರ್ಮಿಕರಿಗೆ ಸುಮಾರು ₹3 ಲಕ್ಷ ಖರ್ಚು ಮಾಡಿ ಅವರಿಗೆ ಬಟ್ಟೆ ಊಟದ ವ್ಯವಸ್ಥೆ ಕಲ್ಪಿಸಿ, ಬೆಂಗಳೂರಿನಿಂದ ಭಾನುವಾರ ವಿಮಾನದಲ್ಲಿ ದೆಹಲಿ ಮೂಲಕ ಆಗ್ರಾ, ಜೈಪುರ, ಮಥುರಾ ಸೇರಿದಂತೆ ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳಿಗೆ ಕರೆದೊಯ್ದಿದ್ದಾರೆ.

ADVERTISEMENT

‘ನಮ್ಮ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಮನೆಯ ಸದಸ್ಯರಂತೆ ಕಾಣುತ್ತೇವೆ. ಅವರ ಕಷ್ಟ– ಸುಖಗಳಲ್ಲಿ ಭಾಗಿಯಾಗುತ್ತೇವೆ. ನಮ್ಮ ತಂದೆ ದಿವಂಗತ ಎಂ.ಸಿ.ಪಾಟೀಲ ಅವರ ಕಾಲದಿಂದಲೂ ಈ ಕಾರ್ಮಿಕರು ನಮ್ಮಲ್ಲಿ ಕೆಲಸ ಮಾಡುತ್ತಿದ್ದಾರೆ. ಕಾರ್ಮಿಕರ ಆಸೆಯಂತೆ ವಿಮಾನಯಾನದ ಮೂಲಕ ಪ್ರವಾಸ ಮಾಡಿಸುತ್ತಿದ್ದೇವೆ’ ಎಂದು ವರುಣಗೌಡ ಪಾಟೀಲ ಹೇಳಿದರು.

ಶಿಗ್ಗಾವಿ ತಾಲ್ಲೂಕಿನ ಶ್ಯಾಡಂಬಿ ಗ್ರಾಮದ ಕೃಷಿ ಕಾರ್ಮಿಕರನ್ನು ವಿಮಾನದ ಮೂಲಕ ಆಗ್ರಾ ಪ್ರವಾಸಕ್ಕೆ ಕಳುಹಿಸಿಕೊಟ್ಟ ತೋಟದ ಮಾಲೀಕ ವರುಣಗೌಡ ಪಾಟೀಲ

‘ನಾನು ಸುಮಾರು ವರ್ಷಗಳಿಂದ ಶ್ಯಾಡಂಬಿಯ ಎಂ.ಸಿ. ಪಾಟೀಲ ಅವರ ತೋಟದಲ್ಲಿ ಕೆಲಸ ಮಾಡುತ್ತಿದ್ದೇನೆ. ಅವರ ಪುತ್ರರಾದ ವರುಣಗೌಡ ಪಾಟೀಲ ಮತ್ತು ಕಿರಣಗೌಡ ಪಾಟೀಲ ಅವರು ವಿಮಾನದಲ್ಲಿ ನಮ್ಮನ್ನು ಪ್ರವಾಸ ಮಾಡಿಸುವ ಮೂಲಕ ನಮ್ಮ ಆಸೆಯನ್ನು ಪೂರೈಸಿದ್ದಾರೆ. ಹೊಸ ಲೋಕಕ್ಕೆ ಬಂದ ಅನುಭವವಾಗಿದೆ’ ಎಂದು ಕೃಷಿ ಕಾರ್ಮಿಕ ಮಾಲತೇಶ ಓಲೇಕಾರ ಸಂತಸ ಹಂಚಿಕೊಂಡರು.

‘ಪ್ರತಿ ವರ್ಷ ದೀಪಾವಳಿ ಹಬ್ಬಕ್ಕೆ ವಿಶೇಷ ಉಡೂಗೂರೆ ಮತ್ತು ಪ್ರವಾಸಕ್ಕೆ ಕಳುಹಿಸುವ ಸಂಪ್ರದಾಯ ನಮ್ಮ ಸಾಹುಕಾರರದ್ದು. ಆದರೆ ಈ ಬಾರಿ ನಮ್ಮನ್ನು ಆಗ್ರಾ, ಜೈಪುರದ ಪ್ರವಾಸ ಮಾಡಿಸುತ್ತಿರುವುದು ನಮ್ಮ ಪೂರ್ವ ಜನ್ಮದ ಪುಣ್ಯ’ ಎಂದು ಟ್ರ್ಯಾಕ್ಟರ್‌ ಚಾಲಕ ಸುರೇಶ ಭೀಮನವರ ಖುಷಿ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.