ADVERTISEMENT

ಕಣ್ಮರೆಯಾದ ‘ಸಗಣಿ ಕಣ’: ನನಸಾಗದ ‘ಕಾಂಕ್ರಿಟ್ ಕಣ’

* ಬೀದಿಯಲ್ಲಿ ರೈತರ ಕೃಷಿ ಉತ್ಪನ್ನ ಒಕ್ಕಲು * ರಾಷ್ಟ್ರೀಯ– ರಾಜ್ಯ ಹೆದ್ದಾರಿಯಲ್ಲಿ ಬೆಳೆ ರಾಶಿ * ಗ್ರಾಮಕ್ಕೊಂದು ಕಣ ನಿರ್ಮಾಣಕ್ಕೆ ಒತ್ತಾಯ

ಸಂತೋಷ ಜಿಗಳಿಕೊಪ್ಪ
Published 7 ಏಪ್ರಿಲ್ 2025, 6:33 IST
Last Updated 7 ಏಪ್ರಿಲ್ 2025, 6:33 IST
ಹಾವೇರಿಯಲ್ಲಿ ರೈತರು ತಾವು ಬೆಳೆದ ಬೆಳೆಯನ್ನು ರಾಷ್ಟ್ರೀಯ– ರಾಜ್ಯ ಹೆದ್ದಾರಿಗಳಲ್ಲಿ ಒಕ್ಕಲು ಮಾಡುತ್ತಿರುವುದು ಕಂಡು ಬಂತು
ಹಾವೇರಿಯಲ್ಲಿ ರೈತರು ತಾವು ಬೆಳೆದ ಬೆಳೆಯನ್ನು ರಾಷ್ಟ್ರೀಯ– ರಾಜ್ಯ ಹೆದ್ದಾರಿಗಳಲ್ಲಿ ಒಕ್ಕಲು ಮಾಡುತ್ತಿರುವುದು ಕಂಡು ಬಂತು   

ಹಾವೇರಿ: ರೈತಾಪಿ ನಾಡಾಗಿರುವ ಹಾವೇರಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ‘ಸಗಣಿ ಕಣಗಳು’ ಕಣ್ಮರೆಯಾಗುತ್ತಿದ್ದು, ರೈತರು ತಾವು ಬೆಳೆದ ಬೆಳೆಯನ್ನು ರಾಷ್ಟ್ರೀಯ– ರಾಜ್ಯ ಹೆದ್ದಾರಿಗಳಲ್ಲಿ ಒಕ್ಕಲು ಮಾಡುತ್ತಿದ್ದಾರೆ. ಗ್ರಾಮಕ್ಕೊಂದು ‘ಕಾಂಕ್ರಿಟ್ ಕಣ’ ನಿರ್ಮಿಸಬೇಕೆಂಬ ರೈತರ ಆಗ್ರಹ, ಹಲವು ವರ್ಷಗಳಿಂದ ಕನಸಾಗಿಯೇ ಉಳಿದಿದೆ.

ಜಿಲ್ಲೆಯಲ್ಲಿ ಗೋವಿನಜೋಳ, ಸೋಯಾಬಿನ್, ಭತ್ತ, ಕಡಲೆ, ಹೆಸರು ಸೇರಿದಂತೆ ಹಲವು ಬೆಳೆಗಳನ್ನು ರೈತರು ಬೆಳೆಯುತ್ತಿದ್ದಾರೆ. ಬೆಳೆಯ ಫಸಲು ಕೈಗೆ ಬರುತ್ತಿದ್ದಂತೆ, ಬೆಳೆಯನ್ನು ಎಲ್ಲಿ ಒಣಗಿಸಬೇಕೆಂಬ ಚಿಂತೆ ರೈತರನ್ನು ಕಾಡುತ್ತಿದೆ. ಜಾನುವಾರು ಸಾಕಿರುವ ಕೆಲವರು ಹಳೇ ಪದ್ಧತಿ ಪ್ರಕಾರ, ಸಗಣಿ ಕಣಗಳನ್ನು ನಿರ್ಮಿಸಿ ಬೆಳೆ ಸಂಸ್ಕರಣೆ ಮಾಡುತ್ತಿದ್ದಾರೆ. ಉಳಿದವರು, ರಾಷ್ಟ್ರೀಯ– ರಾಜ್ಯ ಹಾಗೂ ಇತರೆ ರಸ್ತೆಗಳನ್ನೇ ಕಣವನ್ನಾಗಿ ಮಾಡಿಕೊಂಡಿದ್ದಾರೆ.

ಸಗಣಿ ಲಭ್ಯವಿದ್ದವರು ತಮ್ಮದೇ ಹೊಲದ ಜಾಗದಲ್ಲಿ ಸಗಣಿ ಕಣ ಮಾಡುತ್ತಿದ್ದಾರೆ. ಜಾನುವಾರು ಸಾಕದ ರೈತರು, ಬೇರೆ ಕಡೆಯಿಂದ ಸಗಣಿ ತಂದು ಕಣ ಮಾಡಲು ಪ್ರಯತ್ನಿಸುತ್ತಿಲ್ಲ. ಅವರೆಲ್ಲೂ ಡಾಂಬರ್ ರಸ್ತೆಯನ್ನೇ ಕಣ ಮಾಡಿಕೊಂಡು, ತಮ್ಮ ಬೆಳೆಗಳನ್ನು ಒಕ್ಕಲು ಮಾಡಿ ಒಣಗಿಸಿ ಮಾರುಕಟ್ಟೆಗೆ ಕೊಂಡೊಯ್ಯುತ್ತಿದ್ದಾರೆ.

ADVERTISEMENT

ಬೆಳೆ ಒಣಗಿಸಲು ಡಾಂಬರ್ ರಸ್ತೆಗಳು ಸೂಕ್ತವೆನಿಸಿದರೂ ಇದು ಹೆಚ್ಚು ಅಪಾಯಕಾರಿ. ವಾಹನಗಳ ಸಂಚರಿಸುವ ಜಾಗದಲ್ಲಿ ಬೆಳೆಗಳನ್ನು ಹಾಕಿದರೆ, ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಜೊತೆಗೆ, ಬೆಳೆಗಳನ್ನು ಹಗಲು–ರಾತ್ರಿ ಕಾಯಬೇಕು. ಇದಕ್ಕಾಗಿ ರೈತರು ರಾತ್ರಿಯೂ ರಸ್ತೆ ಬದಿಯಲ್ಲಿ ಮಲಗಬೇಕು. ಇಂಥ ಸಂದರ್ಭದಲ್ಲಿ ವಾಹನಗಳು ಅಡ್ಡಾದಿಡ್ಡಿಯಾಗಿ ಸಂಚರಿಸಿದರೆ, ರೈತರ ಪ್ರಾಣಕ್ಕೆ ಕುತ್ತು ಉಂಟಾಗುವ ಸಂಭವವಿರುತ್ತದೆ.

ಸಗಣಿ ಕಣಕ್ಕೆ ಹೆಚ್ಚು ಖರ್ಚು: ಹೊಲದಲ್ಲಿ ಸಗಣಿ ಕಣ ಮಾಡಲು ಹೆಚ್ಚಿನ ವೆಚ್ಚವಾಗುತ್ತದೆ. ಜೊತೆಗೆ, ಕಾರ್ಮಿಕರ ಅಗತ್ಯವಿರುತ್ತದೆ. ಆದರೆ, ಡಾಂಬರ್ ರಸ್ತೆಗೆ ಯಾವುದೇ ಖರ್ಚು ಇಲ್ಲ. ಬೆಳೆಯನ್ನು ನೇರವಾಗಿ ರಸ್ತೆಗೆ ಕೊಂಡೊಯ್ದ ಒಣಗಲು ಹಾಕಿದರೆ ರೈತರ ಕೆಲಸ ಮುಗಿದಂತೆ. ಇದೇ ಕಾರಣಕ್ಕೆ ರೈತರು, ಸಗಣಿ ಕಣಕ್ಕಿಂತಲೂ ಡಾಂಬರ್ ರಸ್ತೆಯನ್ನೇ ಕಣವನ್ನಾಗಿ ಹೆಚ್ಚು ಬಳಸಿಕೊಳ್ಳುತ್ತಿದ್ದಾರೆ.

‘ಮನೆಯಲ್ಲಿ ದನ–ಕರುಗಳು ಇದ್ದರೆ, ಸಗಣಿ ಸಿಗುತ್ತದೆ. ಅದರಿಂದ ಕಣವನ್ನು ಮಾಡಬಹುದು. ಇಂಥ ಕಣ ಮಾಡಲು ಖರ್ಚು ಹೆಚ್ಚಾಗುತ್ತದೆ. ಆದರೆ, ದನಕರುಗಳು ಇಲ್ಲದಿದ್ದರೆ ಸಗಣಿ ಇಲ್ಲ. ಹೀಗಾಗಿ, ಬಹುತೇಕರು ಡಾಂಬರ್ ರಸ್ತೆ ಕಣಗಳ ಮೊರೆ ಹೋಗುತ್ತಿದ್ದಾರೆ’ ಎಂದು ದೇವಗಿರಿ ಗ್ರಾಮದ ರೈತ ಚನ್ನಬಸಪ್ಪ ಹೇಳಿದರು.

‘ಸಗಣಿ ಕಣದಲ್ಲೂ ಬೆಳೆಯನ್ನು ಒಣಗಿಸಿ, ಸಂಸ್ಕರಣೆ ಮಾಡಬಹುದು. ಅದೇ ರೀತಿಯಲ್ಲಿ ಡಾಂಬರ್ ಕಣದಲ್ಲೂ ಎಲ್ಲ ಕೆಲಸಗಳನ್ನು ಮಾಡಬಹುದು. ಹೊಲದಿಂದ ಬೆಳೆಯನ್ನು ರಸ್ತೆಗೆ ಸಾಗಿಸಲು ತೊಂದರೆಯಾಗುತ್ತದೆ. ಆದರೆ, ಡಾಂಬರ್ ರಸ್ತೆಗೆ ಹೋದ ನಂತರ ಅಲ್ಲಿಂದ ಮಾರುಕಟ್ಟೆಗೆ ಬೆಳೆಯನ್ನು ಕೊಂಡೊಯ್ಯುವುದು ಸುಲಭ’ ಎಂದರು.

‘ಇತ್ತೀಚಿನ ದಿನಗಳಲ್ಲಿ ಕೆಲವರಷ್ಟೇ ಸಗಣಿ ಕಣ ಮಾಡುತ್ತಿದ್ದಾರೆ. ಅದರಲ್ಲೂ ಭತ್ತ ಬೆಳೆಯುವವರು ಹೆಚ್ಚಾಗಿ, ಸಗಣಿ ಕಣಗಳ ಮೊರೆ ಹೋಗುತ್ತಿದ್ದಾರೆ. ಆದರೆ, ಕೆಲವೇ ದಿನಗಳಲ್ಲಿ ಸಗಣಿ ಕಣಗಳು ಸಂಪೂರ್ಣ ಕಣ್ಮರೆಯಾಗಲಿವೆ’ ಎಂದು ಹೇಳಿದರು.

ಅಪಘಾತಗಳಿಗೆ ದಾರಿ: ಜಿಲ್ಲೆಯ ರಾಣೆಬೆನ್ನೂರು, ಮೋಟೆಬೆನ್ನೂರು, ಹಾವೇರಿ, ಬಂಕಾಪುರ, ಶಿಗ್ಗಾವಿ, ತಡಸ ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ಜಿಲ್ಲೆಯ ಹಲವು ಕಡೆಗಳಲ್ಲಿ ರಾಜ್ಯ ಹೆದ್ದಾರಿಗಳಿವೆ. ಜೊತೆಗೆ, ಹಲವು ಗ್ರಾಮದ ರಸ್ತೆಗಳು ಉತ್ತಮವಾಗಿದೆ. ಈ ಎಲ್ಲ ಕಡೆಗಳಲ್ಲೂ ರೈತರ ಬೆಳೆಯ ರಾಶಿಗಳು ಕಂಡುಬರುತ್ತಿವೆ.

ಬಹುತೇಕ ರಸ್ತೆಗಳಲ್ಲಿ ಅಡ್ಡವಾಗಿ ಹಾಕಿರುವ ಬೆಳೆಗಳಿಂದ ಅಪಘಾತಗಳು ಸಂಭವಿಸುತ್ತಿರುವ ಘಟನೆಗಳು ವರದಿಯಾಗುತ್ತಿವೆ. ಇದೇ ಕಾರಣಕ್ಕೆ ರಸ್ತೆಯಲ್ಲಿ ಗಸ್ತು ತಿರುಗುತ್ತಿರುವ ಪೊಲೀಸರು, ರಸ್ತೆಯಲ್ಲಿ ಬೆಳೆ ಹಾಕುವ ರೈತರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಗ್ರಾಮದಲ್ಲಿಯೇ ಕಣಗಳನ್ನು ನಿಗದಿಪಡಿಸಿಕೊಂಡು, ಅಲ್ಲಿಯೇ ಒಕ್ಕಲು ಮಾಡಿ ಒಣಗಲು ಹಾಕುವಂತೆ ಕೋರುತ್ತಾರೆ. ಆದರೆ, ಗ್ರಾಮದಲ್ಲಿ ಕಣದ ಕೊರತೆ ಇರುವುದರಿಂದಲೇ ರಸ್ತೆಗೆ ಬಂದಿರುವುದಾಗಿ ರೈತರು ಉತ್ತರಿಸುತ್ತಿದ್ದಾರೆ.

ರಸ್ತೆ ಮಾತ್ರವಲ್ಲದೇ ಬಸ್‌ ನಿಲ್ದಾಣ, ಸರ್ಕಾರಿ ಕಚೇರಿ ಆವರಣ, ಆಟದ ಮೈದಾನ... ಹೀಗೆ ಸಮತಟ್ಟಾದ ಪ್ರದೇಶಗಳನ್ನು ರೈತರು ಕಣವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಇಂಥ ಸ್ಥಳಗಳಲ್ಲಿ ವಾಹನಗಳು ಓಡಾಡುವುದರಿಂದ, ಅಪಘಾತದ ಭಯವೂ ಕಾಡುತ್ತಿದೆ.

ಗ್ರಾಮಕ್ಕೊಂದು ಕಾಂಕ್ರಿಟ್ ಕಣ: ಸಗಣಿ ಕಣಗಳಿಗೆ ಪರ್ಯಾಯವಾಗಿ ಗ್ರಾಮಕ್ಕೊಂದು ಕಾಂಕ್ರಿಟ್ ಕಣ ನಿರ್ಮಾಣ ಮಾಡುವಂತೆ ಜಿಲ್ಲೆಯ ರೈತರು ಹಲವು ವರ್ಷಗಳಿಂದ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ರೈತ ಸಂಘಗಳ ಮುಖಂಡರು ಹಾಗೂ ರೈತರು, ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಆದರೆ, ಕಾಂಕ್ರಿಟ್ ಕಣ ನಿರ್ಮಾಣದ ಕನಸು ಮಾತ್ರ ನನಸಾಗಿಲ್ಲ.

‘ಆಧುನಿಕ ಯುಗಕ್ಕೆ ತಕ್ಕಂತೆ ಕೃಷಿ ಪದ್ಧತಿಯೂ ಬದಲಾಗುತ್ತಿದೆ. ಸಗಣಿ ಕಣ ಮಾಡುವಷ್ಟು ಸಮಯ ಯಾರ ಬಳಿಯೂ ಇಲ್ಲ. ಬೆಳೆಯನ್ನು ಕಟಾವು ಮಾಡುವ ರೈತರು, ತಮ್ಮೂರಿನ ಸಮೀಪದ ರಸ್ತೆಗೆ ಕೊಂಡೊಯ್ಯುತ್ತಿದ್ದಾರೆ. ಅಲ್ಲಿಯೇ ಒಣಗಿಸಿ ಮಾರುಕಟ್ಟೆಗೆ ಸಾಗಿಸುತ್ತಿದ್ದಾರೆ. ಇಂಥ ರೈತರು ಅನುಕೂಲಕ್ಕಾಗಿ ಪ್ರತಿ ಗ್ರಾಮದಲ್ಲೂ ಕಾಂಕ್ರಿಟ್ ಕಣದ ಅಗತ್ಯವಿದೆ’ ಎಂದು ರೈತ ಮುಖಂಡ ಭುವನೇಶ್ವರ ಶಿಡ್ಲಾಪೂರ ಹೇಳಿದರು.

‘ಜಿಲ್ಲೆಯ ಪ್ರತಿ ಗ್ರಾಮದಲ್ಲೂ ರೈತರಿದ್ದಾರೆ. ಕೃಷಿ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ವರ್ಷಪೂರ್ತಿ ಹೊಲದಲ್ಲಿ ದುಡಿಮೆ ಮಾಡಿ ಬೆಳೆ ಬೆಳೆಯುತ್ತಿದ್ದಾರೆ. ಇಂಥ ಬೆಳೆಯನ್ನು ಕಟಾವು ಮಾಡಿದ ನಂತರ, ಅದನ್ನು ಸಂಸ್ಕರಣೆ ಮಾಡಲು ಸೂಕ್ತ ಜಾಗ ಬೇಕು. ಅದೇ ಕಾರಣಕ್ಕೆ ಗ್ರಾಮಕ್ಕೊಂಡು ಕಾಂಕ್ರಿಟ್ ಕಣ ಮಾಡುವಂತೆ ಹಲವು ವರ್ಷಗಳಿಂದ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ’ ಎಂದು ಅವರು ತಿಳಿಸಿದರು.

‘ಗ್ರಾಮದಲ್ಲಿರುವ ಸರ್ಕಾರದ ಜಾಗವನ್ನೇ ಕಾಂಕ್ರಿಟ್ ಕಣಕ್ಕೆ ಮೀಸಲಿಡಬೇಕು. ಸರ್ಕಾರ ಜಾಗವಿಲ್ಲದಿದ್ದರೆ, ಖಾಸಗಿ ಜಾಗವನ್ನು ಖರೀದಿಸಬೇಕು. ನಿರ್ದಿಷ್ಟ ಅಳತೆಯ ಕಣಗಳನ್ನು ಮಾಡಿ ರೈತರಿಗೆ ಬಳಸಲು ನೀಡಬೇಕು. ಈ ರೀತಿಯಾದರೆ, ರೈತರು ರಸ್ತೆಗೆ ಹೋಗುವುದು ತಪ್ಪುತ್ತದೆ. ಅಪಘಾತದ ಭಯವೂ ಇರುವುದಿಲ್ಲ’ ಎಂದು ಹೇಳಿದರು.

ರಾಣೆಬೆನ್ನೂರು: ತಾಲ್ಲೂಕಿನ ಚಳಗೇರಿ, ಕಮಡೋಡ, ಕಾಕೋಳ, ಹುಲಿಹಳ್ಳಿ, ಮಕನೂರ ಕ್ರಾಸ್, ಹಲಗೇರಿ ರಸ್ತೆ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ರೈತರು ಮೆಕ್ಕೆಜೋಳ, ತೊಗರಿ, ಹುರುಳಿ, ಮಡಿಕೆ ಮುಂತಾದ ಬೆಳೆಗಳನ್ನು ಒಕ್ಕಲು ಮಾಡುತ್ತಿದ್ದಾರೆ.

ಆಧುನಿಕತೆ ಮತ್ತು ಯಂತ್ರಗಳ ಬಳಕೆಯಿಂದ ಒಕ್ಕಲು ಸಗಣಿ ಕಣಗಳು ಗ್ರಾಮೀಣ ಪ್ರದೇಶದಲ್ಲಿ ಮಾಯವಾಗಿವೆ. ಕೂಡು ಕುಟುಂಬಗಳು ನೇಪತ್ಯಕ್ಕೆ ಸರಿದು, ಚಿಕ್ಕ ಕುಟುಂಬಗಳಾಗಿವೆ. ರೈತರು ಏಕ ಬೆಳೆ ಪದ್ಧತಿ ಅನುಸರಿಸುತ್ತಿದ್ದರಿಂದ ಯಂತ್ರಗಳು ಹೊಲಗಳಿಗೆ ಕಾಲಿಟ್ಟಿವೆ. ಬೆಳೆಗಳನ್ನು ರಸ್ತೆಯಲ್ಲಿ ಹಾಕಿ ಒಕ್ಕಲು ಮಾಡಿ ನೇರವಾಗಿ ಎಪಿಎಂಸಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಕಣ ಮಾಯವಾಗಿದ್ದರಿಂದ, ಹೆದ್ದಾರಿ ಬಳಿ ಒಣಗಲು ಹಾಕುತ್ತಾರೆ. ಇದರಿಂದ ಅಪಘಾತಗಳು ಸಂಭವಿಸಿ ಪ್ರಾಣ ಹಾನಿಯಾದ ಘಟನೆಗಳು ನಡೆದಿವೆ. ಈರುಳ್ಳಿ, ಬೆಳ್ಳುಳ್ಳಿ ಮುಂತಾದ ಬೆಳೆಗಳನ್ನು ಮನೆ ಮುಂದೆ ಅಥವಾ ದೇವಸ್ಥಾನ, ಶಾಲಾ ಆವರಣದಲ್ಲಿ ಒಕ್ಕಲು ಮಾಡುತ್ತಿದ್ದಾರೆ. ಗ್ರಾಮ ಪಂಚಾಯಿತಿಯಿಂದ ಒಕ್ಕಲು ಕಣ ನಿರ್ಮಾಣ ಮಾಡಲು ಅವಕಾಶವಿತ್ತು. ಅನುದಾನ ಕೊರತೆಯಿಂದ, ಕಣ ನಿರ್ಮಾಣವನ್ನು ಕೈಬಿಡಲಾಗಿದೆ.

ಸವಣೂರು: ಕೃಷಿಯನ್ನೇ ನಂಬಿಕೊಂಡು ಬಂದಿರುವ ರೈತರು ತಮ್ಮ ಜಮೀನುಗಳಲ್ಲಿ ಬಂದ ಫಸಲನ್ನು ಕಣದಲ್ಲಿ ಒಕ್ಕಣೆ ಮಾಡುವ ಸಂಪ್ರದಾಯ ತಾಲ್ಲೂಕಿನಲ್ಲಿ ಮರೆಯಾಗಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ವಿಸ್ ರಸ್ತೆಯಲ್ಲಿ ಒಕ್ಕಲು ಮಾಡುವಂತ ಸ್ಥಿತಿ ನಿರ್ಮಾಣವಾಗಿದೆ.

ತಾಲ್ಲೂಕಿನ ತವರಮೇಳ್ಳಿಹಳ್ಳಿ, ಕುಣಿಮೆಳ್ಳಿಹಳ್ಳಿ ಗ್ರಾಮಗಳ ರೈತರು ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ವಿಸ್ ರಸ್ತೆಯಲ್ಲಿ ಒಕ್ಕಣೆ ಮಾಡಿದರೆ, ಇನ್ನು ಉಳಿದ ಹಲವರು ಗ್ರಾಮಗಳ ದೇವಸ್ಥಾನ ಮುಂಭಾಗ, ತಮ್ಮ ಮನೆಯ ಅಂಗಳ ಸೇರಿದಂತೆ ರಸ್ತೆ ಪಕ್ಕದಲ್ಲಿ ಒಕ್ಕಣೆ ಮಾಡುತ್ತಿದ್ದಾರೆ.

‘ನಮ್ಮ ಪೂರ್ವಜರು ಬೆಳೆಗಳನ್ನು ಒಕ್ಕಲು ಮಾಡಲು ಗ್ರಾಮದ ಪಕ್ಕದಲ್ಲಿರುವ ಖಾಲಿ ಜಾಗೆಯಲ್ಲಿ ಕಣ ಮಾಡುತ್ತಿದ್ದರು. ಆದರೆ, ಈಗ ಗ್ರಾಮದ ಪಕ್ಕದಲ್ಲಿರುವ ಖಾಲಿ ಜಾಗೆಗಳಲ್ಲಿ ಮನೆಗಳು ನಿರ್ಮಾಣವಾಗಿವೆ. ಜಾಗೆಯ ಸಮಸ್ಯೆ ಮತ್ತು ಮನೆಯ ಪಕ್ಕದಲ್ಲಿರುವ ಸ್ವಲ್ಪ ಜಾಗೆಯಲ್ಲಿ ಕಣ ನಿರ್ಮಾಣ ಮಾಡಿಕೊಂಡರೆ ದೂಳು ಹೆಚ್ಚಾಗುತ್ತಿದೆ. ಹೀಗಾಗಿ, ರಸ್ತೆಯಲ್ಲಿ, ದೇವಸ್ಥಾನದ ಅಂಗಳದಲ್ಲಿ ಒಕ್ಕಲು ಮಾಡುತ್ತಿದ್ದೇವೆ’ ಎಂದು ರೈತರು ಹೇಳುತ್ತಿದ್ದಾರೆ.

(ಪೂರಕ ಮಾಹಿತಿ: ಮುಕ್ತೇಶ್ವರ ಕೂರಗುಂದಮಠ, ಗಣೇಶಗೌಡ ಪಾಟೀಲ)

ಹಾವೇರಿಯಲ್ಲಿ ರೈತರು ತಾವು ಬೆಳೆದ ಬೆಳೆಯನ್ನು ರಾಷ್ಟ್ರೀಯ– ರಾಜ್ಯ ಹೆದ್ದಾರಿಗಳಲ್ಲಿ ಒಕ್ಕಲು ಮಾಡಲು ಹಾಕಿರುವುದು
ಪ್ರತಿಯೊಂದು ಗ್ರಾಮದಲ್ಲೂ ಕಾಂಕ್ರಿಟ್ ಕಣ ನಿರ್ಮಿಸುವಂತೆ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಲಾಗಿದ್ದು ಇದುವರೆಗೂ ಬೇಡಿಕೆ ಈಡೇರಿಲ್ಲ
ಭುವನೇಶ್ವರ ಶಿಡ್ಲಾಪೂರ ರೈತ ಮುಖಂಡ
‘ಕಣ ನಿರ್ಮಾಣಕ್ಕೆ ನರೇಗಾ ಬಳಸಿ’
‘ಗ್ರಾಮೀಣ ಮಟ್ಟದಲ್ಲಿ ಜನರು ಅಭಿವೃದ್ಧಿಯಾಗಬೇಕಾದರೆ ಅವರು ಬೆಳೆದಿರುವ ಬೆಳೆಯನ್ನು ಸಂಸ್ಕರಣೆ ಮಾಡಲು ಸೂಕ್ತ ಜಾಗದ ವ್ಯವಸ್ಥೆಯಾಗಬೇಕು. ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆ (ನರೇಗಾ) ಬಳಸಿಕೊಂಡು ಕಾಂಕ್ರಿಟ್ ಕಣ ನಿರ್ಮಿಸಲು ಕ್ರಮ ಕೈಗೊಳ್ಳಬೇಕು’ ಎಂದು ರೈತರು ಆಗ್ರಹಿಸಿದರು. ‘ನರೇಗಾ ಯೋಜನೆಯಡಿ ಈಗಾಗಲೇ ಹಲವು ಕೆಲಸಗಳನ್ನು ಮಾಡಲಾಗುತ್ತಿದೆ. ಕಣ ನಿರ್ಮಾಣದ ಕೆಲಸವನ್ನೂ ನರೇಗಾ ಪಟ್ಟಿಯಲ್ಲಿ ಸೇರಿಸಬೇಕು. ಸರ್ಕಾರ ಅಥವಾ ಖಾಸಗಿ ಜಾಗಗಳನ್ನು ಗುರುತಿಸಿ ಅಲ್ಲಿಯೇ ಕಾಂಕ್ರಿಟ್ ಕಣ ನಿರ್ಮಾಣಕ್ಕೆ ಸರ್ಕಾರ ಮುಂದಾಗಬೇಕು. ಕಾಂಕ್ರಿಟ್ ಕಣ ನಿರ್ಮಾಣವಾದರೆ ರೈತರಿಗೆ ಹೆಚ್ಚು ಅನುಕೂಲವಾಗಲಿದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.