ADVERTISEMENT

ಮರಗಳ ಕಟಾವ್‌ಗೆ ನಿಯಮ ಸರಳಗೊಳ್ಳಲಿ: ರೈತ ಸಂಘದಿಂದ ಮನವಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 3:18 IST
Last Updated 13 ಜನವರಿ 2026, 3:18 IST
ಹಾನಗಲ್‌ನಲ್ಲಿ ಸೋಮವಾರ ಮನವಿ ಸಲ್ಲಿಸಿದ ಅಖಂಡ ಕರ್ನಾಟಕ ರೈತ ಸಂಘದವರು, ಕೃಷಿ ಜಮೀನಿನಲ್ಲಿರುವ ಮರಗಳ ಕಟಾವ್‌ಗೆ ಸರಳ ನಿಯಮ ರೂಪಿಸಲು ಒತ್ತಾಯಿಸಿದರು.
ಹಾನಗಲ್‌ನಲ್ಲಿ ಸೋಮವಾರ ಮನವಿ ಸಲ್ಲಿಸಿದ ಅಖಂಡ ಕರ್ನಾಟಕ ರೈತ ಸಂಘದವರು, ಕೃಷಿ ಜಮೀನಿನಲ್ಲಿರುವ ಮರಗಳ ಕಟಾವ್‌ಗೆ ಸರಳ ನಿಯಮ ರೂಪಿಸಲು ಒತ್ತಾಯಿಸಿದರು.   

ಹಾನಗಲ್: ಕೃಷಿ ಭೂಮಿಯಲ್ಲಿನ ಮರಗಳ ಕಟಾವಿಗೆ ಸರಳ ನಿಯಮಗಳನ್ನು ರೂಪಿಸಿ ರೈತರ ಗೋಳನ್ನು ತಪ್ಪಿಸಬೇಕು, ರೈತರ ಪಾಲಿಗೆ ಮುಳುವಾದ ಈ ಕಾನೂನು ಬದಲಾಗಬೇಕು ಎಂದು ಅಖಂಡ ಕರ್ನಾಟಕ ರೈತ ಸಂಘದಿಂದ ಸೋಮವಾರ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ರೈತನ ಸ್ವಂತ ಜಮೀನಿನಲ್ಲಿನ ಗಿಡಗಳನ್ನು ಕಟಾವು ಮಾಡಿ ಕೃಷಿ ಕಾರ್ಯಕ್ಕೆ ಅನುಕೂಲ ಮಾಡಿಕೊಳ್ಳಲು ಈಗಿರುವ ಅರಣ್ಯ ಇಲಾಖೆಯ ಕಾನೂನು ರೈತರನ್ನು ಉಸಿರುಗಟ್ಟಿಸುತ್ತಿದೆ. ಕಟಾವಿಗೆ ಪರವಾನಿಗೆ ಪಡೆಯಲು ವರ್ಷಗಳೇ ಬೇಕು. ಪರವಾನಿಗೆ ಪಡೆದ ಮೇಲೂ ಅದನ್ನು ಸಾಗಣೆ ಮಾಡಲು ಮತ್ತೆ ಅರಣ್ಯ ಇಲಾಖೆಯ ಮರ್ಜಿ ಕಾಯಬೇಕು. ಇಲ್ಲಸಲ್ಲದ ಪ್ರಕ್ರಿಯೆಗಳನ್ನು ಹೇರಿ ರೈತನಿಗೆ ಕಣ್ಣೀರು ತರಿಸುತ್ತಿರುವ ಕಾನೂನುಗಳು ಬದಲಾಗಿ ಸರಳ ನಿಯಮಗಳಲ್ಲಿ ಕೃಷಿ ಭೂಮಿಯಲ್ಲಿ ಗಿಡಗಳ ಕಟಾವಿಗೆ ಅನುಮತಿ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಕೃಷಿ ಭೂಮಿ ಹಂಚಿಕೆಯಾಗಿ ಇಂದು ಕೃಷಿ ಕುಟುಂಬಗಳು ಚಿಕ್ಕದಾಗಿವೆ. ಇರುವ ಭೂಮಿಯಲ್ಲಿ ಕಾಡು ಮರಗಳು ಬೆಳೆದು ನಿಂತಿವೆ. ಇದರಿಂದ ಕೃಷಿಗೆ ಅನಾನುಕೂಲವಾಗಿದೆ. ಈ ಮರಗಳಡಿ ಬೆಳೆ ಬೆಳೆಯುತ್ತಿಲ್ಲ. ಕೃಷಿಗೂ ಅನಾನುಕೂಲ. ಮರಗಳ ತೆರವಿಗೆ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಗಳು ಹಳೆ ನಿಯಮಗಳನ್ನು ಬದಲಿಸಿ, ಕೃಷಿಕನಿಗೆ ಅನಾನುಕೂಲವಾಗುವುದನ್ನು ತಪ್ಪಿಸಿ ಸುಲಭವಾಗಿ ಒಂದೇ ವಾರದಲ್ಲಿ ಮರ ಕಟಾವಿಗೆ ಪರವಾನಿಗೆ ಕೊಡುವಂತಾಗಬೇಕು. ತನ್ನ ಕೃಷಿ ಜಮೀನಿನಲ್ಲಿ ಬೆಳೆದ ಮರಗಳನ್ನು ತೆರವುಗೊಳಿಸಲು ಮುಂದಾಗಿ ಅರಣ್ಯ ಅಥವಾ ಇತರ ಇಲಾಖೆಗಳ ಕೈ ಸಿಕ್ಕರೆ ರೈತನ ವಾಹನವೂ ಸೆರೆಯಾಗಿ ರೈತನೂ ಸೆರೆಯಾಗಿ ದಿವಾಳಿಯಾಗುವ ಸ್ಥಿತಿ ಇದೆ ಎಂದು ಮನವಿಯಲ್ಲಿ ಹೇಳಲಾಗಿದೆ.

ADVERTISEMENT

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸದಾನಂದಗೌಡ ಪಾಟೀಲ, ಕೃಷಿಕ ಸಮಾಜದ ಮಾಜಿ ಅಧ್ಯಕ್ಷ ಬಸವರಾಜ ಯಲಿ, ಪ್ರಮುಖರಾದ ಪಮ್ಮಣ್ಣ ಮಂತಗಿ, ಅರುಣಕುಮಾರ ಪಾಟೀಲ, ಪ್ರಹ್ಲಾದಬಾಬು ಗೌಳಿ, ಗುಡ್ಡಪ್ಪ ಚನ್ನಮ್ಮನವರ, ಕೃಷ್ಣ ಡೊಳ್ಳೇಶ್ವರ, ಮಾರುತಿ ಶಿಡ್ಲಾಪೂರ, ಶಿವಪ್ಪ ಹಾವಣಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.