ಶಿಗ್ಗಾವಿ: ಸುಮಾರು ವರ್ಷಗಳಿಂದ ತಾಲ್ಲೂಕಿನ ವಿವಿಧ ಗ್ರಾಮದಲ್ಲಿ ಕೃಷಿ ಕೂಲಿ ಮಾಡಿಕೊಂಡು ಬದುಕು ಸಾಗಿಸುವ ಕೃಷಿಕರ ಜಮೀನನ್ನು ಅಕ್ರಮ-ಸಕ್ರಮಗೊಳಿಸಬೇಕು. ಅದರಿಂದಾಗಿ ರೈತ ಕುಟುಂಬಗಳು ಬಾಳಿ ಬದುಕಲು ಸಾಧ್ಯವಾಗುತ್ತದೆ ಎಂದು ವಿವಿಧ ಗ್ರಾಮಗಳ ರೈತರು ಲೋಕಾಯುಕ್ತ ಅಧಿಕಾರಿಗಳು ಮನವಿ ಮೂಲಕ ಅಳಲು ವ್ಯಕ್ತಪಡಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಭವನದಲ್ಲಿ ಬುಧವಾರ ಲೋಕಾಯುಕ್ತ ಅಧಿಕಾರಿಗಳು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ಸಂದರ್ಭದಲ್ಲಿ ತಮ್ಮ ಅಹವಾಲು ವ್ಯಕ್ತಪಡಿಸಿದರು.
ತಾಲ್ಲೂಕಿನಲ್ಲಿ ಕಳೆದ ಮೂರು ವರ್ಷಗಳಿಂದ ಮನೆ ಬಿದ್ದು ಹೋಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಜಿಪಿಎಸ್ ಪೋಟೋ ಮಾಡಿಕೊಂಡು ಹೋಗಿದ್ದಾರೆ. ಆದರೆ ಇವರೆಗೆ ಪರಿಹಾರಧನ ನೀಡಿಲ್ಲ. ಹೀಗಾಗಿ ಮನೆ ಕಟ್ಟಿಕೊಳ್ಳಲು ಸಾಧ್ಯವಾಗಿಲ್ಲ. ಅಲ್ಲಿ, ಇಲ್ಲಿ ವಾಸಿಸುತ್ತಿದ್ದೇವೆ. ಜಮೀನಿಗೆ ಮತ್ತು ಖಾಲಿ ಜಾಗೆಗೆ ಪಹಣಿ ಪತ್ರದಲ್ಲಿನ ತಿದ್ದಪಡಿ ಮಾಡಿಕೊಡಬೇಕು ತಕ್ಷಣ ಪರಿಹಾರ ನೀಡುವಂತೆ ತಾಲ್ಲೂಕಿನ ವಿವಿಧ ಗ್ರಾಮಗಳ ಫಲಾನುಭವಿಗಳು ತಮ್ಮ ಮನವಿ ಸಲ್ಲಿಸಿದರು.
ತಾಲ್ಲೂಕಿನ ವನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಹಣ ದುರುಪಯೋಗವಾಗಿದ್ದು, 2023-24 ಮತ್ತು 2024-25ನೇ ಸಾಲಿನ 15ನೇ ಹಣಕಾಸಿನ ವಿವಿಧ ಕಾಮಗಾರಿಗಳಲ್ಲಿ ಹಣ ದುರುಪಯೋಗ ಮಾಡಿಕೊಂಡಿರುವುದು ಕಂಡು ಬಂದಿದ್ದು, ಸಂಪೂರ್ಣ ತನಿಖೆ ನಡೆಸಬೇಕು. ಸಕರ್ಾರದ ಹಣ ಮರಳಿ ಕಟ್ಟಿಸುವ ಮೂಲಕ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಸಮಾಜ ಸೇವಾ ಕಾರ್ಯಕರ್ತ ಮಂಜುನಾಥ ಶಿರಹಟ್ಟಿ ಲೋಕಾಯುಕ್ತ ಅಧಿಕಾರಿಗಳಿಗೆ ಮನವಿ ಮಾಡಿದರು.
ಗ್ರಾಮ ಪಂಚಾಯಿತಿಗಳಲ್ಲಿ ಇ-ಸ್ವತ್ತು ಉತಾರಕ್ಕೆ ದರ ನಿಗದಿ ಪಡಿಸಬೇಕು. ತಾಲ್ಲೂಕಿನ ಗಂಗ್ಯಾನೂರ ಗ್ರಾಮಕ್ಕೆ ಸ್ಮಶಾನ ನೀಡಬೇಕು. ವಿವಿಧ ಗ್ರಾಮ ಪಂಚಾಯ್ತಿಯಲ್ಲಿ ಸುಮಾರು ವರ್ಷಗಳಿಂದ ಒಂದೇ ಕಡೆ ಕೆಲಸ ಮಾಡುತ್ತಿರುವ ಬಿಲ್ ಸಂಗ್ರಹಕಾರ ಮತ್ತು ಕಂಪ್ಯೂಟರ್ ಆಫರೇಟರಗಳನ್ನು ವರ್ಗಾಯಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇವೆ ತಾಲ್ಲೂಕು ಘಟಕದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಲೋಕಾಯುಕ್ತ ಅಧಿಕಾರಿ ಮಂಜುನಾಥ ಪಂಡಿತ್ ಮಾತನಾಡಿ, ಅರ್ಜಿ ಸಲ್ಲಿಸಿದ ಪ್ರತಿಯೊಂದನ್ನು ಪರಿಶೀಲಿಸಿ ಪರಿಹಾರ ನೀಡಲಾಗುತ್ತಿದೆ. ಕೆಲವು ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಕಾನೂನು ಮೂಲಕ ಶಿಕ್ಷೆ, ದಂಡ ನೀಡಲಾಗುತ್ತಿದೆ. ಅಂತಹ ಪ್ರಕರಣಗಳು, ದೂರಗಳಿದ್ದರೆ ಸಾರ್ವಜನಿಕರು ಸಲ್ಲಿಸಿರಿ ಎಂದರು.
ಲೋಕಾಯುಕ್ತ ಡಿ.ವೈ.ಎಸ್.ಪಿ ಮಧುಸೂಧನ ಸಿ., ಅಧಿಕಾರಿಗಳಾದ ವಿಶ್ವನಾಥ ಕಬ್ಬೂರಿ, ದಾದಾವಲಿ ಕೆ.ಎಚ್., ತಹಶೀಲ್ದಾರ್ ಯಲ್ಲಪ್ಪ ಗೋಣೆಣ್ಣವರ, ಉಪತಹಶೀಲ್ದಾರ್ ವೆಂಕಟೇಶ, ಶಿರಸ್ತೆದಾರರಾದ ವಿಶ್ವನಾಥ ತತ್ತಿ, ವಿಲ್ಸನ್ ಚಾರ್ಜ, ತಾಲ್ಲೂಕು ಪಂಚಾಯಿತಿ ಯೋಜನಾಧಿಕಾರಿ ಶಿವಾನಂದ ಸಣ್ಣಕ್ಕಿ, ಲೋಕಾಯುಕ್ತ ಸಿಬ್ಬಂದಿಗಳಾದ ಸಿ.ಎಂ.ಬಾರ್ಕರ್, ಬಿ.ಎಂ.ಲಕ್ಷ್ಮೇಶ್ವರ, ಆರ್.ವೈ.ಗೆಜ್ಜೆಹಳ್ಳಿ, ಆನಂದ ಶೆಟ್ಟರ, ಬಸವರಾಜ ಸಂಕಣ್ಣವರ, ನಿರಂಜನ ಪಾಟೀಲ ಸೇರಿದಂತೆ ತಾಲ್ಲುಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
10 ಅರ್ಜಿಗಳು ಸ್ವೀಕಾರ
ಲೋಕಾಯುಕ್ತ ಅಧಿಕಾರಿಗಳು ಒಂದು ದಿನ ಕಳೆದರೂ ತಾಲ್ಲೂಕಿನಾದ್ಯಂತ ಬರೀ 10 ಅರ್ಜಿಗಳು ಮಾತ್ರ ಸ್ವೀಕೃತವಾಗಿವೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಈ ಕುರಿತು ಪ್ರಚಾರದ ಕೊರತೆಯಾಗಿದೆ. ಅದರಿಂದಾಗಿ ಅದೇಷ್ಟು ನೆೆನಗುದಿಗೆ ಬಿದ್ದಿರುವ ಸಮಸ್ಯೆಗಳಿವೆ. ಅವುಗಳ ಮಾಹಿತಿ ನೀಡುವಲ್ಲಿ ಸಾರ್ವಜನಿಕರಿಗೆ ಆಗಲಿಲ್ಲ. ಅದರಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವಾಗಿದೆ ಎಂದು ರೈತ ಸಂಘದ ಪದಾಧಿಕಾರಿಗಳು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.