ADVERTISEMENT

ಕೇಂದ್ರದ ವಿರುದ್ಧ ರೈತರ ಆಕ್ರೋಶ

‘ಭಾರತ್‌ ಬಂದ್‌’ಗೆ ಜಿಲ್ಲೆಯಾದ್ಯಂತ ನೀರಸ ಪ್ರತಿಕ್ರಿಯೆ: ಮೆಕ್ಕೆಜೋಳ ಸುಟ್ಟು ಅನ್ನದಾತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2020, 12:54 IST
Last Updated 8 ಡಿಸೆಂಬರ್ 2020, 12:54 IST
‘ಭಾರತ್‌ ಬಂದ್’‌ ಬೆಂಬಲಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ವತಿಯಿಂದ ಹಾವೇರಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಯಿತು. ರೈತ ಮುಖಂಡರಾದ ರಾಮಣ್ಣ ಕೆಂಚಳ್ಳೇರ, ಮಲ್ಲಿಕಾರ್ಜುನ ಬಳ್ಳಾರಿ, ಮಾಲತೇಶ ಪೂಜಾರ ಇದ್ದಾರೆ
‘ಭಾರತ್‌ ಬಂದ್’‌ ಬೆಂಬಲಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ವತಿಯಿಂದ ಹಾವೇರಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಯಿತು. ರೈತ ಮುಖಂಡರಾದ ರಾಮಣ್ಣ ಕೆಂಚಳ್ಳೇರ, ಮಲ್ಲಿಕಾರ್ಜುನ ಬಳ್ಳಾರಿ, ಮಾಲತೇಶ ಪೂಜಾರ ಇದ್ದಾರೆ   

ಹಾವೇರಿ: ನೂತನ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ರೈತ ಸಂಘಟನೆಗಳು ಕರೆ ನೀಡಿದ್ದ ‘ಭಾರತ್‌ ಬಂದ್‌’ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಮಾತ್ರ ಪ್ರತಿಭಟನೆಗಳ ಕಾವು ಜೋರಾಗಿತ್ತು.

ಹಾವೇರಿ ನಗರದಲ್ಲಿ ಬಸ್‌ ಮತ್ತು ಆಟೊಗಳ ಸಂಚಾರ ಎಂದಿನಂತೆಯೇ ಇತ್ತು. ಪ್ರತಿಭಟನೆಯ ಹಿನ್ನೆಲೆಯಲ್ಲಿ ವಾಹನಗಳ ಸಂಚಾರಕ್ಕೆ ಪ್ರಮುಖ ವೃತ್ತಗಳಲ್ಲಿ ಮಾರ್ಗಗಳನ್ನು ಬದಲಿಸಲಾಗಿತ್ತು. ಅಂಗಡಿ ಮತ್ತು ವಾಣಿಜ್ಯ ಸಂಕೀರ್ಣಗಳಲ್ಲಿ ವ್ಯಾಪಾರ ವಹಿವಾಟಿನ ಮೇಲೆ ಬಂದ್‌ ಅಷ್ಟಾಗಿ ಪರಿಣಾಮ ಬೀರಲಿಲ್ಲ. ಜನಜೀವನ ಸಹಜವಾಗಿತ್ತು. ರೈತ ಮುಖಂಡರು ಧ್ವನಿ ವರ್ಧಕದ ಮೂಲಕ ‘ಅಂಗಡಿಗಳನ್ನು ಮುಚ್ಚಿ, ಬಂದ್‌ ಬೆಂಬಲಿಸಿ’ ಎಂದು ಮನವಿ ಮಾಡಿದರು.

ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ರೈತಸಂಘ ಹಾಗೂ ಹಸಿರು ಸೇನೆ, ಎಸ್‌ಎಫ್‌ಐ, ಡಿವೈಎಫ್‌ಐ, ಹಾವೇರಿ ಜಿಲ್ಲಾ ಕಾಂಗ್ರೆಸ್‌, ವಕೀಲರು ಹಾಗೂ ವಿವಿಧ ಸಂಘಟನೆಗಳು ಒಗ್ಗೂಡಿ ಪ್ರತಿಭಟನೆ ನಡೆಸಿದವು.ರೈತರ ಹೆಣದ ಮೇಲೆ ಹಣ ಮಾಡಲು ಹೊರಟಿರುವ ಕೇಂದ್ರ ಸರ್ಕಾರಕ್ಕೆ ಧಿಕ್ಕಾರ, ಬಂಡವಾಳ ಶಾಹಿಗಳ ಪರ ನಿಂತಿರುವ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆಗಳನ್ನು ಮೊಳಗಿಸಿದರು. ಮೆಕ್ಕೆಜೋಳವನ್ನು ರಸ್ತೆಗೆ ಸುರಿದು, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು

ADVERTISEMENT

ಬಹಿರಂಗ ಚರ್ಚೆಗೆ ಬರಲಿ

ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತಾನಾಡಿ, ‘ಈ ಹಿಂದಿನ ಸರ್ಕಾರ ದೇಶವನ್ನು ಒತ್ತೆ ಇಡಲು ಹೊರಟಿತ್ತು. ಈಗಿನ ಬಿಜೆಪಿ ಸರ್ಕಾರ ದೇಶವನ್ನು ಮಾರಾಟ ಮಾಡಲು ಹೊರಟಿದೆ. 32 ಸಂಘಟನೆಯಲ್ಲಿರುವ ಯಾರೂ ರೈತರಲ್ಲವಾ? ಕೇಂದ್ರ ಸರ್ಕಾರ ಬಹಿರಂಗ ಚರ್ಚೆಗೆ ಬರಲಿ’ ಎಂದು ಸವಾಲು ಹಾಕಿದರು.

ಮುಖಂಡರಾದ ಮಲ್ಲಿಕಾರ್ಜುನ ಬಳ್ಳಾರಿ, ಮಾಲತೇಶ ಪೂಜಾರ ಮಾತನಾಡಿ ‘ರೈತ ಚಳವಳಿಯನ್ನು ಹತ್ತಿಕ್ಕಲು ಅನ್ನದಾತರ ಮೇಲೆ ಲಾಠಿ ಪ್ರಯೋಗ, ಜಲಫಿರಂಗಿ, ಅಶ್ರುವಾಯು ಸಿಡಿತವಾಗುತ್ತಿದೆ. ರೈತರ ಸಮಸ್ಯೆಗಳಿಗೆ ಸ್ಪಂದಿಸುವುದನ್ನು ಬಿಟ್ಟು, ಹಠಮಾರಿ ಧೋರಣೆಯನ್ನು ಕೇಂದ್ರ ಸರ್ಕಾರ ತೋರುತ್ತಿದೆ. ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು, ಹಾವೇರಿ ಜಿಲ್ಲೆಯಲ್ಲಿ ಕೂಡಲೇ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಇಲ್ಲದಿದ್ದರೆ ನಮ್ಮ ಹೋರಾಟವನ್ನು ಇನ್ನೂ ತೀವ್ರಗೊಳಿಸುತ್ತೇವೆ’ ಎಂದು ಗುಡುಗಿದರು.

ರೈತರ ಉಳಿವಿಗಾಗಿ ಹೋರಾಟ

ಮಾಜಿ ಸಚಿವ ಬಸವರಾಜ ಶಿವಣ್ಣನವರ ಮಾತಾನಾಡಿ, ರೈತರ ಉಳಿವಿಗಾಗಿ ಈ ಹೋರಾಟ ನಡೆಸುತ್ತಿದ್ದೇವೆ. ಕೇಂದ್ರ ಸರ್ಕಾರ ಹಠಕ್ಕೆ ಬಿದ್ದು ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರುತ್ತಿದೆ. ಎಪಿಎಂಸಿ ಕಾನೂನು ತಿದ್ದುಪಡಿ ತಂದು ರೈತರನ್ನು ದಿವಾಳಿ ಎಬ್ಬಿಸಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಮುಖಂಡರಾದ ಅಡಿವೆಪ್ಪ ಆಲದಕಟ್ಟಿ, ಮರಿಗೌಡ ಪಾಟೀಲ, ಮಂಜುಳಾ ಅಕ್ಕಿ, ರುದ್ರಗೌಡ ಕಾಡನಗೌಡ್ರ, ಪ್ರಭುಗೌಡ ಪ್ಯಾಟಿ, ಕಾಂಗ್ರೆಸ್‌ ಮುಖಂಡರಾದಎಂ.ಎಂ.ಹಿರೇಮಠ, ಸಂಜೀವ ನೀರಲಗಿ, ಏಕನಾಥ ಬಾನುವಳ್ಳಿ, ಬಸವರಾಜ ಶಿವಣ್ಣನವರ,ಎಸ್‌ಎಫ್‌ಐ ಮತ್ತು ಡಿವೈಎಫ್‌ಐ ಮುಖಂಡರು, ಲೈಂಗಿಕ ಅಲ್ಪಸಂಖ್ಯಾತರ ವೇದಿಕೆಯ ಅಕ್ಷತಾ ಹಾಗೂ ವಕೀಲರ ಸಂಘದ ಪದಾಧಿಕಾರಿಗಳು ಮುಂತಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.