ಶಿಗ್ಗಾವಿ: ಡಿಎಪಿ ರಸಗೊಬ್ಬರ ಕೊರತೆ ಆಗಿರುವ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಹಸಿರು ಸೇನೆ ಹಾಗೂ ತಾಲ್ಲೂಕಿನ ವಿವಿಧ ರೈತ ಸಂಘಟನೆಗಳ ಪದಾಧಿಕಾರಿಗಳು ಶಿಗ್ಗಾವಿ ಪಟ್ಟಣದ ತಹಶೀಲ್ದಾರ್ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಹಾಗೂ ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಮುಂಗಾರು ಮಳೆ ಋತುಮಾನಕ್ಕೆ ತಕ್ಕಂತೆ ಆರಂಭವಾಗಿದ್ದು, ಹದಬರಿತವಾದ ಮಳೆಯಾದ ಕಾರಣ ಇಡೀ ರೈತ ಸಮೂಹ ಬಿತ್ತನೆ ಕಾರ್ಯದಲ್ಲಿ ನಿರತರಾಗಿದ್ದಾರೆ. ಅವರಿಗೆ ಸರಿಯಾದ ಸಮಯಕ್ಕೆ ಬೀಜ, ಗೊಬ್ಬರ ವಿತರಣೆ ಮಾಡುವುದು ಅವಶ್ಯವಾಗಿದೆ. ಆದರೆ ತಾಲ್ಲೂಕಿಗೆ ವಾಡಿಕೆ ಪ್ರಕಾರ ಡಿಎಪಿ ಗೊಬ್ಬರ ಬಂದಿಲ್ಲ. ಹೀಗಾಗಿ ರೈತರು ಗೊಬ್ಬರಕ್ಕಾಗಿ ಪರದಾಡುತ್ತಿದ್ದಾರೆ. ಗೊಬ್ಬರ ಮಾರಾಟ ಅಂಗಡಿ ಮಾಲೀಕರು ದರ ಪಟ್ಟಿಹಾಕಿಲ್ಲ. ಬೇಕಾಬಿಟ್ಟಿ ದರ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.
ಗೊಬ್ಬರ ಖರೀದಿಸಿದ ಕುರಿತು ಮೂಲ ರಸೀದಿ ನೀಡುತ್ತಿಲ್ಲ. ಹೊರ ತಾಲ್ಲೂಕಿನ ರೈತರಿಗೆ ಗೊಬ್ಬರ ವಿತರಣೆಯಾಗುತ್ತಿದೆ. ಕೆಲವು ಗೊಬ್ಬರ ಅಂಗಡಿ ಮಾಲೀಕರು ಗೊಬ್ಬರ ಇದ್ದರು ಸಹ ಕೃತಕ ಅಭಾವ ತೋರುತ್ತಿದ್ದಾರೆ. ಜಿಂಕ್ ಪೌಂಡರನ್ನು ಗೊಬ್ಬರದೊಂದಿಗೆ ಲಿಂಕ್ ಮಾಡುವ ಮೂಲಕ ಹೆಚ್ಚಿನ ಹಣ ರೈತರಿಂದ ಪಡೆಯುತ್ತಿದ್ದಾರೆ. ತಕ್ಷಣ ಮೇಲಧಿಕಾರಿಗಳು ಈ ಕಡೆ ಗಮನ ಹರಿಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ತಹಶೀಲ್ದಾರ್ ರವಿ ಕೊರವರ, ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕ ಕೊಟ್ರೇಶ ಗೆಜ್ಲಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ, ದರ ಪಟ್ಟಿ ಹಾಕುವಂತೆ ಅಂಗಡಿ ಮಾಲೀಕರಿಗೆ ತಿಳಿಸಲಾಗಿದೆ. ದರಕ್ಕಿಂತ ಹೆಚ್ಚಿನ ಬೆಲೆ ಮಾರಾಟಗಾರರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತಿದೆ. ತಕ್ಷಣ ಹೆಚ್ಚುವರಿ ಗೊಬ್ಬರ ಬರಲಿದ್ದು, ರೈತರಿಗೆ ವಿತರಿಸಲಾಗುತ್ತದೆ ಎಂಬ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು.
ರೈತ ಮುಖಂಡರಾದ ಶಿವಾನಂದ ಮ್ಯಾಗೇರಿ, ಆನಂದ ಕೆಳಗಿಮನಿ, ಶಂಕರಗೌಡ ಪಾಟೀಲ, ಈರಣ್ಣ ಸಮಗೊಂಡ, ಪಂಚಾಕ್ಷರಯ್ಯ ಹಿರೇಮಠ, ಮುತ್ತಣ್ಣ ಗುಡಿಗೇರಿ, ಬಸವರಾಜ ಗೊಬ್ಬಿ, ಮಂಜುನಾಥ ಹಾವೇರಿ, ಮಂಜುನಾಥ ಕಂಕನವಾಡ, ರವಿ ಪಾಟೀಲ, ಚಂದ್ರಣ್ಣ ಕರೆಕನ್ನಮ್ಮನವರ, ಮಾಲತೇಶ ಬಾಕರ್ಿ, ನಿಂಗನಗೌಡ ರಾಯಗೌಡ್ರ, ದೇವರಾಜ ದೊಡ್ಡಮನಿ, ಶಿವಾನಂದ ಜಡಿಮಠ ಸೇರಿದಂತೆ ಅನೇಕ ರೈತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.