ADVERTISEMENT

ಕೇಂದ್ರ, ರಾಜ್ಯ ಸರ್ಕಾರ ವಿರುದ್ಧ ರೈತರ ಗುಡುಗು: ಖರೀದಿ ಕೇಂದ್ರ ತೆರೆಯಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 2:59 IST
Last Updated 25 ನವೆಂಬರ್ 2025, 2:59 IST
<div class="paragraphs"><p>ಪ್ರತಿ ಕ್ವಿಂಟಲ್ ಮೆಕ್ಕೆಜೋಳಕ್ಕೆ ₹3,000 ನೀಡಬೇಕು ಎಂದು ಒತ್ತಾಯಿಸಿ ಹಾವೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ರೈತರು</p></div>

ಪ್ರತಿ ಕ್ವಿಂಟಲ್ ಮೆಕ್ಕೆಜೋಳಕ್ಕೆ ₹3,000 ನೀಡಬೇಕು ಎಂದು ಒತ್ತಾಯಿಸಿ ಹಾವೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ರೈತರು

   

ಹಾವೇರಿ: ‘ಹಾವೇರಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬೆಳೆಯುವ ಮೆಕ್ಕೆಜೋಳವನ್ನು ಖರೀದಿಸಲು ಖರೀದಿ ಕೇಂದ್ರಗಳನ್ನು ತೆರೆಯಬೇಕು. ಪ್ರತಿ ಕ್ವಿಂಟಲ್‌ಗೆ ಕನಿಷ್ಠ ₹ 3,000 ನೀಡಬೇಕು’ ಎಂದು ಒತ್ತಾಯಿಸಿ ಸೋಮವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿರುವ ರೈತರು, ಬೇಡಿಕೆ ಈಡೇರಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದರು.

‘ಪ್ರಸಕ್ತ ಸಾಲಿನಲ್ಲಿ ಮೆಕ್ಕೆಜೋಳದ ಬೆಲೆ ಹೆಚ್ಚಿನ ಪ್ರಮಾಣದಲ್ಲಿ ಕುಸಿದಿದ್ದು, ಮೆಕ್ಕೆಜೋಳ ಬೆಳೆದಿದ್ದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಶುಗಳ ಆಹಾರ, ಎಥನಾಲ್ ಹಾಗೂ ವಿವಿಧ ಉತ್ಪನ್ನಗಳ ತಯಾರಿಸಲು ಮೆಕ್ಕೆಜೋಳ ಬಳಸುತ್ತಿರುವ ಕಂಪನಿಗಳೇ ಬೆಲೆ ನಿಗದಿಯಲ್ಲಿ ಆಟವಾಡುತ್ತಿವೆ. ಇದರಿಂದ ಮೆಕ್ಕೆಜೋಳ ಬೆಳೆದವರಿಗೆ ಅನ್ಯಾಯವಾಗುತ್ತಿದೆ’ ಎಂದು ರೈತರು ಆರೋಪಿಸುತ್ತಿದ್ದಾರೆ.

ADVERTISEMENT

ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಹಾಗೂ ಮೆಕ್ಕೆಜೋಳಕ್ಕೆ ಪ್ರತಿ ಕ್ವಿಂಟಲ್‌ಗೆ ₹3,000 ದರ ನಿಗದಿಪಡಿಸುವಂತೆ ಸರ್ಕಾರವನ್ನು ಒತ್ತಾಯಿಸಲು ‘ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ’ಯ ಜಿಲ್ಲಾ ಘಟಕದಿಂದ ಅನಿರ್ದಿಷ್ಟಾವಧಿ ಧರಣಿಗೆ ಕರೆ ನೀಡಲಾಗಿದೆ.

ಬೃಹತ್ ಮೆರವಣಿಗೆ: ಧರಣಿಯ ಭಾಗವಾಗಿ ಹಾವೇರಿಯಲ್ಲಿ ರೈತರು ಬೃಹತ್ ಮೆರವಣಿಗೆ ನಡೆಸಿದರು. ಕಾಗಿನೆಲೆ ರಸ್ತೆಯಲ್ಲಿರುವ ಮುರುಘಾಮಠದಿಂದ ಆರಂಭವಾದ ಮೆರವಣಿಗೆ, ಹೊಸಮನಿ ಸಿದ್ದಪ್ಪ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಯವರೆಗೂ ಸಾಗಿತು. ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಸಿದ್ದಪ್ಪ ವೃತ್ತದಲ್ಲಿ ಕೆಲ ನಿಮಿಷ ಬಹಿರಂಗ ಸಭೆ ನಡೆಸಿದ ರೈತರು, ಸರ್ಕಾರಗಳ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು. ಹಸಿರು ಶಾಲುಗಳನ್ನು ಬೀಸಿದ ರೈತರು, ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಎಚ್ಚರಿಕೆ ರವಾನಿಸಿದರು. ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಎದುರು ಸಾಗಿದ ರೈತರು, ಅಲ್ಲಿಯೇ ಬಹಿರಂಗ ಸಭೆ ಮುಂದುವರಿಸಿದರು.

‘ಮೆಕ್ಕೆಜೋಳ ಖರೀದಿಸಲು ಎಫ್‌ಆರ್‌ಪಿ ಪ್ರಕಾರ ಕೇಂದ್ರ ಸರ್ಕಾರದಿಂದ ₹2,400 ನೀಡಬೇಕು. ರಾಜ್ಯ ಸರ್ಕಾರವು ತನ್ನ ಪಾಲಿನಿಂದ ₹ 600 ನೀಡಬೇಕು. ಮೆಕ್ಕೆಜೋಳ ಖರೀದಿಸಲು ಕೇಂದ್ರಗಳನ್ನು ತ್ವರಿತವಾಗಿ ಪ್ರಾರಂಭಿಸಬೇಕು’ ಎಂದು ರೈತರು ಒತ್ತಾಯಿಸಿದರು.

‘ಅತಿವೃಷ್ಟಿ ಮಳೆಯಿಂದ ಬೆಳೆ ಕಳೆದುಕೊಂಡ ರೈತರಿಗೆ ಪ್ರತಿ ಎಕರೆಗೆ ₹25,000 ಪರಿಹಾರ ನೀಡಬೇಕು. ವರದಾ ಹಾಗೂ ಬೇಡ್ತಿ ನದಿ ಜೋಡಣೆ ಮಾಡಬೇಕು. ಹೆಸ್ಕಾಂ ಕಂಪನಿಯವರು, ವಿದ್ಯುತ್ ಕಂಬ ಹಾಗೂ ತಂತಿಯನ್ನು ರೈತರೇ ಖರೀದಿಸುವಂತೆ ನಿಯಮ ಮಾಡಿದೆ. ಈ ನಿಯಮ ರದ್ದುಪಡಿಸಬೇಕು. ಹೆಸ್ಕಾಂ ಕಂಪನಿಯವರು ವಿಧಿಸುತ್ತಿರುವ ಶುಲ್ಕ ದುಬಾರಿಯಾಗಿದ್ದು, ಅದನ್ನು ಕೈ ಬಿಡಬೇಕು. ಬೆಳೆ ವಿಮೆಯಲ್ಲಾದ ತಾರತಮ್ಯ ಸರಿಪಡಿಸಬೇಕು’ ಎಂದು ರೈತರು ಆಗ್ರಹಿಸಿದರು.

ಸ್ವಾಮೀಜಿಗಳು ಭಾಗಿ: ರೈತರ ಹೋರಾಟದಲ್ಲಿ ಪಾಲ್ಗೊಂಡಿದ್ದ ಜಿಲ್ಲೆಯ ವಿವಿಧ ಮಠಗಳ ಸ್ವಾಮೀಜಿಗಳು, ‘ಜಗತ್ತಿಗೆ ಅನ್ನ ಹಾಕುತ್ತಿರುವ ರೈತರ ಬೇಡಿಕೆಗಳನ್ನು ಸರ್ಕಾರಗಳು ತ್ವರಿತವಾಗಿ ಈಡೇರಿಸಬೇಕು’ ಎಂದು ಒತ್ತಾಯಿಸಿದರು.

ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ, ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ, ಮಣಕವಾಡದ ಮೃತ್ಯುಂಜಯ ಸ್ವಾಮೀಜಿ, ಗುಬ್ಬಿ ಅಜ್ಜನವರು, ಅಗಡಿಯ ಗುರುಲಿಂಗ ಸ್ವಾಮೀಜಿ, ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ, ಸವಣೂರಿನ ಚನ್ನಬಸವ ಸ್ವಾಮೀಜಿ, ಕರ್ಜಗಿಯ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಅಡವಿ ಸೋಮಾಪುರದ ಕುಮಾರ ಸ್ವಾಮೀಜಿ, ಕಲ್ಮಠದ ಗುರುಸಿದ್ಧ ಸ್ವಾಮೀಜಿ ಪ್ರತಿಭಟನೆಯಲ್ಲಿದ್ದರು.

‘ಬೇಡಿಕೆ ಈಡೇರುವವರೆಗೂ ಧರಣಿ’

‘ಹಾವೇರಿ ಜಿಲ್ಲೆ ಮಾತ್ರವಲ್ಲದೇ ದೇಶದಾದ್ಯಂತ ರೈತರು ಮೆಕ್ಕೆಜೋಳ ಬೆಳೆಯುತ್ತಿದ್ದಾರೆ. ಎಲ್ಲ ರೈತರ ಪರವಾಗಿ ಈ ಧರಣಿ ಆರಂಭಿಸಲಾಗಿದೆ. ಬೇಡಿಕೆ ಈಡೇರಿಸುವ ಬಗ್ಗೆ ಸರ್ಕಾರ ಘೋಷಣೆ ಮಾಡುವವರೆಗೂ ನಮ್ಮ ಧರಣಿ ಮುಂದುವರಿಯಲಿದೆ’ ಎಂದು ‘ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ’ಯ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಹೇಳಿದರು. ಪ್ರತಿಭಟನೆಯಲ್ಲಿ ಮಾತನಾಡಿದ ಅವರು ‘ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದಾಗಿ ಬೆಳೆ ಹಾನಿ ಅನುಭವಿಸುತ್ತಿರುವ ರೈತರು ಆರ್ಥಿಕವಾಗಿ ಕಂಗಾಲಾಗಿದ್ದಾರೆ. ಮೆಕ್ಕೆಜೋಳ ಬೆಳೆಯೂ ಹಾಳಾಗಿದ್ದು ಇಳುವರಿಯೂ ಕಡಿಮೆಯಾಗಿದೆ. ಅಲ್ಪಸ್ವಲ್ಪ ಮೆಕ್ಕೆಜೋಳಕ್ಕೆ ಸರಿಯಾದ ಬೆಲೆಯಿಲ್ಲ. ಇದರಿಂದ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ತಿಳಿಸಿದರು. ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ‘ಮೆಕ್ಕೆಜೋಳ ಖರೀದಿಗೆ ಬೆಂಬಲ ಬೆಲೆ ಕೇಂದ್ರ ಆರಂಭಿಸುವ ಬಗ್ಗೆ ಹೇಳುತ್ತಿರುವ ಸರ್ಕಾರಗಳ ಭರವಸೆ ಪ್ರಕಟಣೆಗೆ ಮಾತ್ರ ಸೀಮಿತಲಾಗಿದೆ. ಹಾವೇರಿಯಲ್ಲಿ ರೈತರು ದೊಡ್ಡ ಮಟ್ಟದ ಹೋರಾಟ ಆರಂಭಿಸಿದ್ದು ಸೋಮವಾರ ರಾತ್ರಿಯವರೆಗೂ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಮಂಗಳವಾರವೂ ನಮ್ಮ ಧರಣಿ ಮುಂದುವರಿಯಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.