ADVERTISEMENT

ವೃದ್ಧಾಶ್ರಮದಲ್ಲಿ ಕಣ್ಣು, ಕೈ ಇಲ್ಲದ ಅಪ್ಪಂದಿರು!

ಮಕ್ಕಳ ಬರುವಿಕೆಯ ಎದುರು ನೋಡುತ್ತಿರುವ 20 ವೃದ್ಧರು

ಎಂ.ಸಿ.ಮಂಜುನಾಥ
Published 15 ಜೂನ್ 2019, 17:46 IST
Last Updated 15 ಜೂನ್ 2019, 17:46 IST
ಇಂದಾದರೂ ಬರುವರೇ ಮಕ್ಕಳು... ‘ಶ್ರೀ ಶಕ್ತಿ ಅಸೋಸಿಯೇಶನ್’ ವೃದ್ಧಾಶ್ರಮದಲ್ಲಿರುವ ಹಿರಿಯರು 
ಇಂದಾದರೂ ಬರುವರೇ ಮಕ್ಕಳು... ‘ಶ್ರೀ ಶಕ್ತಿ ಅಸೋಸಿಯೇಶನ್’ ವೃದ್ಧಾಶ್ರಮದಲ್ಲಿರುವ ಹಿರಿಯರು    

ಹಾವೇರಿ: ಹೆಸರು ರಾಜಪ್ಪ. ವಯಸ್ಸು 76. ಒಂದು ಕಣ್ಣಿಲ್ಲ. ಹಾವೇರಿ ಜಿಲ್ಲೆಯ ಕನಕಾಪುರದ ಇವರು ಎರಡು ರ್ಷಗಳಿಂದ ವೃದ್ಧಾಶ್ರಮದಲ್ಲಿದ್ದಾರೆ. ಮೂವರು ಗಂಡು ಮಕ್ಕಳು ಕೈತುಂಬ ಸಂಪಾದನೆ ಮಾಡುತ್ತಿದ್ದರೂ, ಅವರಿಗೆ ಅಪ್ಪನನ್ನು ನೋಡಿಕೊಳ್ಳಲು ಪುರುಸೊತ್ತಿಲ್ಲ!

ಇನ್ನೊಬ್ಬರು, ಚಿಕ್ಕಮಗಳೂರಿನ ಹಾಲಮತ್ತೂರು ಗ್ರಾಮದವರು. ಇಬ್ಬರು ಹೆಣ್ಣು ಮಕ್ಕಳು ಮದುವೆಯಾಗಿ ಗಂಡನ ಮನೆಗೆ ಹೋದ ನಂತರ ಒಂಟಿಯಾಗಿ ವೃದ್ಧಾಶ್ರಮ ಸೇರಿದ್ದಾರೆ. ಹರಪ್ಪನಹಳ್ಳಿ ತಾಲ್ಲೂಕಿನ 67 ವರ್ಷದ ಕಳಕಪ್ಪ ಸಹ ಮಕ್ಕಳ ವರ್ತೆನಯಿಂದ ಬೇಸತ್ತು ನಾಲ್ಕು ತಿಂಗಳ ಹಿಂದೆ ಮನೆ ತೊರೆದಿದ್ದಾರೆ.‌

ಇಂತಹ ಹತ್ತು ಹಲವು ಸಮಸ್ಯೆಗಳ ಸುಳಿಯಲ್ಲಿ ಸಿಕ್ಕ 20 ಜನ ವಯೋವೃದ್ಧರು (7 ಪುರುಷರು, 13 ಮಹಿಳೆಯರು) ಹಾವೇರಿ ನಗರದ ನಾಗೇಂದ್ರನಮಟ್ಟಿಯ ‘ಶ್ರೀ ಶಕ್ತಿ ಅಸೋಸಿಯೇಶನ್’ ವೃದ್ಧಾಶ್ರಮದಲ್ಲಿದ್ದಾರೆ. ಭಾನುವಾರ ‘ವಿಶ್ವ ಅಪ್ಪಂದಿರ ದಿನ’. ಇಷ್ಟು ದಿನ ತಮ್ಮನ್ನು ನೋಡದ ಮಕ್ಕಳು, ಆ ವಿಶೇಷ ದಿನದಂದಾದರೂ ಕಾಣಲು ಬರುತ್ತಾರೆ, ಪ್ರೀತಿಯಿಂದ ಮಾತನಾಡಿಸುತ್ತಾರೆ ಎಂದು ಅಷ್ಟೂ ಮಂದಿ ಅವರ ಆಗಮನವನ್ನು ಎದುರು ನೋಡುತ್ತಿದ್ದಾರೆ.‌

ADVERTISEMENT

ಕೂತರೆ ಎದ್ದು ನಿಲ್ಲಲಾಗದ, ಸರಿಯಾಗಿ ಕಿವಿಯೂ ಕೇಳದ, ಹೊರಗೆ ಹೋಗಬೇಕೆಂದರೆ ಇನ್ನೊಬ್ಬರ ಸಹಾಯದ ಅಗತ್ಯವಿರುವ ಈ ವೃದ್ಧರು ಸಕ್ಕರೆ ಕಾಯಿಲೆ, ರಕ್ತದೊತ್ತಡ (ಬಿ.ಪಿ) ಸೇರಿದಂತೆ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಎಲ್ಲೆಲ್ಲಿಂದಲೋ ಬಂದು ತಮ್ಮದೇ ಆದ ಒಂದು ಕುಟುಂಬ ಕಟ್ಟಿಕೊಂಡಿದ್ದಾರೆ. ‘ಮನೆ ಬಿಟ್ಟ ಮೇಲೆ ಎಷ್ಟೇ ಆದರೂ ನಾವು ಬೀದಿ ಹೆಣ. ಇದ್ದಷ್ಟು ದಿನ ಹೇಗೋ ಬದುಕುತ್ತೇವೆ’ ಎನ್ನುವಾಗ ಅವರ ಕಣ್ಣಾಲಿಗಳು ತುಂಬಿದ್ದವು.

‘ಅಪ‍್ಪಂದಿರ ದಿನ’ದ ಬಗ್ಗೆ ಅವರ‍್ಯಾರಿಗೂ ಅರಿವಿಲ್ಲ. ಈ ವಿಚಾರವನ್ನು ಗಮನಕ್ಕೆ ತಂದ ಕೂಡಲೇ, ‘ಹಾಗಾದ್ರೆ, ಭಾನುವಾರ ನಮ್ಮ ಮಕ್ಕಳು ಇಲ್ಲಿಗೆ ಬರಬಹುದಾ’ ಎಂದು ಕೆಲವರು ಪರಸ್ಪರ ಪ‍್ರಶ್ನೆ ಮಾಡಿಕೊಂಡರು. ಆಗ ರಾಜಪ್ಪ, ‘ಅಷ್ಟೊಂದು ಪ್ರೀತಿ ಮಮಕಾರ ಇದ್ದಿದ್ದರೆ, ನಮ್ಮನ್ನೇಕೆ ವೃದ್ಧಾಶ್ರಮದಲ್ಲಿ ಬಿಡುತ್ತಿದ್ದರು. ನಾನು ಚಾಲೆಂಜ್ ಮಾಡ್ತೀನಿ. ಯಾರ ಮಕ್ಕಳೂ ಬರಲ್ಲ’ ಎಂದರು.

‘ಪ್ರಜಾವಾಣಿ’ ಜತೆ ಮಾತನಾಡಿದ ರಾಜಪ್ಪ, ‘ಕಷ್ಟಪಟ್ಟು ಸಾಕಿ ಸಲಹಿದ ತಂದೆಯನ್ನೇ ಮಕ್ಕಳು ಮನೆಯಿಂದ ಹೊರ ಹಾಕುವುದಕ್ಕಿಂತ, ನಮಗೆ ಬೇರೆ ನೋವಿನ ಸಂಗತಿ ಏನಿದೆ? ಮುಪ್ಪು ಆವರಿಸುತ್ತ ಹೋದಂತೆ ನಾವೂ ಮಕ್ಕಳಂತೆ ಆಗಿಬಿಡುತ್ತೇವೆ. ಸಣ್ಣ–ಪುಟ್ಟ ಚೇಷ್ಟೆಗಳನ್ನು ಮಾಡುತ್ತೇವೆ. ಮನೆ ಗಲೀಜು ಮಾಡುತ್ತೇವೆ. ಅದನ್ನೆಲ್ಲ ಅವರಿಗೆ ಸಹಿಸಿಕೊಳ್ಳಲು ಆಗುವುದಿಲ್ಲ. ನನ್ನ ಇಂದಿನ ವೃದ್ಧಾಶ್ರಮ ವಾಸ ಅವೆಲ್ಲವುಗಳ ಫಲಿತಾಂಶ. ಇಷ್ಟೊಂದು ನೋವು ಇಟ್ಟುಕೊಂಡು ವಯಸ್ಸಾದ ಮೇಲೆ ಬದುಕಿರಬಾರದು’ ಎನ್ನುತ್ತ ಬಿಕ್ಕಿ ಬಿಕ್ಕಿ ಅತ್ತರು.

‘ನಾನು ಮನೆಯಿಂದ ಹೊರಬಿದ್ದ ಮೇಲೆ ಗ್ರಾಮದ ಜನ ನನ್ನನ್ನು ಹುಚ್ಚನೆಂದರು. ಮಕ್ಕಳು ಕಲ್ಲಿನಿಂದ ಹೊಡೆದರು. ಕೊನೆಗೆ ಹೋಟೆಲ್‌ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡೆ. ನನ್ನ ಸ್ಥಿತಿ ನೋಡಲಾಗದೆ ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರು ಈ ವೃದ್ಧಾಶ್ರಮಕ್ಕೆ ತಂದು ಬಿಟ್ಟರು. ಎರಡು ಮನೆಗಳ ಮಾಲೀಕನಾಗಿದ್ದ ನಾನು, ಈಗ ₹ 500 ವೃದ್ಧಾಪ್ಯ ವೇತನದಲ್ಲಿ ಖರ್ಚುಗಳನ್ನು ಕಳೆಯುತ್ತ ಬದುಕುತ್ತಿದ್ದೇನೆ’ ಎಂದರು.

ಮಕ್ಕಳಿಂದ ಹೊಡೆಸ್ಕೋಬಾರ್ದು

‘ನಾನು ಮೊದ್ಲು ವ್ಯವಸಾಯ ಮಾಡ್ತಿದ್ದೆ. ಈಗ ದುಡಿಯೋಕೆ ಶಕ್ತಿ ಇಲ್ಲ. ಇದೇ ಕಾರಣಕ್ಕೆ ಮಕ್ಕಳಿಂದ ಸಿಕ್ತಿದ್ದ ಮರ್ಯಾದೆ ಕಡಿಮೆ ಆಯ್ತು. ಕೀಳಾಗಿ ಕಾಣೋಕೆ ಪ್ರಾರಂಭಿಸಿದ್ರು. ಬುದ್ಧಿ ಹೇಳೋಕೆ ಹೋದ್ರೆ ಹೊಡೆಯೋಕೆ ಬಂದ್ರು. ನೆಮ್ಮದಿ ಇಲ್ಲದ ಜಾಗದಲ್ಲಿ ಇರಬಾರ್ದು. ಮಕ್ಕಳಿಂದ ಹೊಡೆಸಿಕೊಳ್ಳುವ ಸ್ಥಿತಿ ತಂದುಕೊಳ್ಬಾರ್ದು. ಎಂದಿದ್ದರೂ ಒಂದು ದಿನ ನಾನು ಬೀದಿ ಹೆಣ ಆಗೋನು ಅಂದ್ಕೊಂಡು 3 ತಿಂಗಳ ಹಿಂದೆ ಮನೆಯಿಂದ ಆಚೆ ಬಂದೆ‌’ ಎಂದರು ಹರಪನಹಳ್ಳಿ ತಾಲ್ಲೂಕಿನ ಕಳಕಪ್ಪ.

‘ನಮ್ಮ ಕಾಳಜಿ ಒಂದು ದಿನದ್ದಾಗಿರಲಿಲ್ಲ’

‘ನಮ್ಮ ಯೌವ್ವನದಲ್ಲಿ ಮಕ್ಕಳನ್ನು ಬೆಳೆಸಲು ಪಟ್ಟಂತಹ ಕಷ್ಟಗಳು, ನಾವು ಪೋಷಕರನ್ನು ನೋಡಿಕೊಳ್ಳುತ್ತಿದ್ದ ರೀತಿಗಳ ಬಗ್ಗೆಯೇ ಮಾತನಾಡಿಕೊಳ್ಳುತ್ತ ಕೊನೆ ದಿನಗಳನ್ನು ಎಣಿಸುತ್ತಿದ್ದೇವೆ. ನಮಗೆ ಅಪ್ಪಂದಿರ ದಿನ, ಅಮ್ಮಂದಿರ ದಿನಗಳು ಗೊತ್ತಿರಲಿಲ್ಲ. ಅವರ ಕೊನೆಯುಸಿರಿನವರೆಗೂ, ಯಾವುದೇ ತೊಂದರೆ ಆಗದಂತೆ ತುಂಬ ಜೋಪಾನ ಮಾಡಿದ್ದೆವು. ಈಗ ಕಾಲ ಬದಲಾಗಿದೆ. ಅಪ್ಪ–ಅಮ್ಮನ ದಿನಾಚರಣೆ ಒಂದು ದಿನಕ್ಕಷ್ಟೇ ಸೀಮಿತವಾಗಿದೆ’ ಎಂದರು 70 ವರ್ಷದ ವಿಠ್ಠಲ್ ರಾವ್.

‘ಅಪ್ಪ–ಮಗನನ್ನು ಒಟ್ಟಿಗೆನೋಡಿದಾಗ..’

‘ಯಾರಾದರೂ ಅಪ್ಪ–ಮಗ ಜೊತೆಗೆ ಹೋಗುತ್ತಿರುವುದನ್ನು ನೋಡಿದಾಗ ಸಂತೋಷವಾಗುತ್ತದೆ. ನನ್ನ ಬದುಕು ಹಾಗಿಲ್ಲವಲ್ಲ ಎಂದು ನೋವೂ ಆಗುತ್ತದೆ. ಎಲ್ಲ ಚೆನ್ನಾಗಿದ್ದಿದ್ದರೆ, ನಾನು ಮೊಮ್ಮಕ್ಕಳನ್ನು ಆಟವಾಡಿಸಿಕೊಂಡು ಖುಷಿಯಿಂದ ಇರಬಹುದಿತ್ತು. ನನ್ನ ಹಣೆಯಲ್ಲಿ ಅದು ಬರೆದಿಲ್ಲ. ಮಕ್ಕಳಿಗೆ ಜನ್ಮ ನೀಡಿದ್ದೇ ನಮ್ಮ ತಪ್ಪಾ’ ಎಂದು ಪ್ರಶ್ನಿಸುತ್ತ ಕೊಪ್ಪ ಜಿಲ್ಲೆಯ ವೃದ್ಧ ಕಣ್ಣೀರಿಟ್ಟರು.

‘ಯಾರದ್ದೋ ತಪ್ಪಿಗೆ ನಾನು ಕೈ ಕಳೆದುಕೊಂಡೆ. ಆರು ಸಲ ಶಸ್ತ್ರಚಿಕಿತ್ಸೆ ಮಾಡಿಸಿದರೂ, ಅದು ಸರಿ ಹೋಗಲಿಲ್ಲ. ನನಗೆ ಆಸರೆಯಾಗಿ ಮಕ್ಕಳೂ ಇಲ್ಲ, ಕೈ ಕೂಡ ಇಲ್ಲ. ನೋಡೋಣ ನಾಳೆ ಮಗಳು ಬರಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.