ADVERTISEMENT

ಹಾವೇರಿ | ಸಿದ್ದರಾಮಯ್ಯ, ಶ್ರೀರಾಮುಲು ವಿರುದ್ಧ ಪ್ರಕರಣ ದಾಖಲು: ಸಿಎಂ ಮೇಲೆ ದೂರು

ಮಾದರಿ ನೀತಿ ಸಂಹಿತೆ ಉಲ್ಲಂಘನೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2019, 13:33 IST
Last Updated 3 ಡಿಸೆಂಬರ್ 2019, 13:33 IST
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ   

ಹಾವೇರಿ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಶ್ರೀರಾಮುಲು ವಿರುದ್ಧದ ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ಆರು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಜಿ. ದೇವರಾಜ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಣೆಬೆನ್ನೂರು ಮತ್ತು ಹಿರೇಕೆರೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿಮತದಾರರಿಗೆ ಆಮಿಷವೊಡ್ಡುವ ರೀತಿಯಲ್ಲಿ ಆಶ್ವಾಸನೆ, ಭರವಸೆ, ಹೇಳಿಕೆಗಳನ್ನು ನೀಡಿದವರ ವಿರುದ್ಧ ಫ್ಲೈಯಿಂಗ್ ಸ್ಕ್ವಾಡ್‌ ದೂರು ನೀಡಿದೆ. ಅಧಿಕಾರಿಗಳ ವಿರುದ್ಧ ಸ್ವೀಕೃತವಾದ ಎರಡು ದೂರಗಳನ್ನು ಪರಿಶೀಲನೆ ಮಾಡಿ, ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಹಿರೇಕೆರೂರು ಕ್ಷೇತ್ರದಲ್ಲಿ ‘ಬಾಂಬೆ ನೋಟು, ಬನ್ನಿಕೋಡಗೆ ಓಟು’ ಎಂದು ಈಚೆಗೆ ಹೇಳಿಕೆ ನೀಡಿರುವ ವಿರುದ್ಧ ಪ್ರಕರಣ ದಾಖಲಾಗಿದೆ. ಶ್ರೀರಾಮುಲು ಅವರು, ಕುಮಾರಪಟ್ಟಣಂನಲ್ಲಿ ಪರಿಶಿಷ್ಟ ಜಾತಿಗೆ 7.5 ಮೀಸಲಾತಿ ಭರವಸೆ ನೀಡಿರುವ ಸಂಬಂಧ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದರು.

ADVERTISEMENT

ಸಿಎಂ ವಿರುದ್ಧವೂ ದೂರು:ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು, ‘ನಾವು ಗೆದ್ದರೆ ಹೆಚ್ಚಿನ ಅನುದಾನ ತಂದು ರಟ್ಟಿಹಳ್ಳಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇವೆ’ ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಫ್ಲೈಯಿಂಗ್‌ ಸ್ಕ್ವಾಡ್‌ ದೂರು ನೀಡಿತ್ತು. ಆದರೆ ಎಷ್ಟು ಅನುದಾನವನ್ನು ನೀಡುತ್ತೇವೆ ಎಂದು ಸ್ಪಷ್ಟವಾಗಿ ಮುಖ್ಯಮಂತ್ರಿ ಹೇಳಿಲ್ಲ. ಹಾಗಾಗಿ ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಎಸ್ಪಿ ದೇವರಾಜ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.