ADVERTISEMENT

ಜಮೀನು ಅತಿಕ್ರಮಣ ವಿಚಾರ: ಶಿಗ್ಗಾವಿ ಶಾಸಕ ಪಠಾಣ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2025, 17:26 IST
Last Updated 2 ಅಕ್ಟೋಬರ್ 2025, 17:26 IST
   

ಹಾವೇರಿ: ಜಮೀನು ಅತಿಕ್ರಮಣ ವಿಚಾರವಾಗಿ ಶಿಗ್ಗಾವಿ ಶಾಸಕ ಯಾಸೀರ ಅಹ್ಮದ್ ಖಾನ್ ಪಠಾಣ ಸೇರಿದಂತೆ ಐವರು ಆರೋಪಿಗಳ ವಿರುದ್ಧ ಹಾನಗಲ್ ಪೊಲೀಸ್ ಠಾಣೆಯಲ್ಲಿ ಸೆ. 29ರಂದು ಎಫ್‌ಐಆರ್ ದಾಖಲಾಗಿದೆ.

‘2025ರ ಜೂನ್ 5ರಂದು ನಡೆದಿದ್ದ ಕೃತ್ಯದ ಬಗ್ಗೆ ವಕೀಲ ಫಕ್ಕೀರಗೌಡ ವೀರನಗೌಡ ಪಾಟೀಲ ಅವರು ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ಹೂಡಿದ್ದರು. ಅದರ ವಿಚಾರಣೆ ನಡೆಸಿದ್ದ ನ್ಯಾಯಾಲಯ ನೀಡಿರುವ ನಿರ್ದೇಶದಂತೆ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಹಾನಗಲ್ ಠಾಣೆ ಪೊಲೀಸರು ಹೇಳಿದರು.

‘ಆರೋಪಿಗಳಾದ ಯಾಸೀರ ಅಹ್ಮದ್ ಖಾನ್ ಪಠಾಣ, ಮಖ್ಬುಲ್ ಅಹ್ಮದ್‌ಖಾನ್ ಪಠಾಣ, ಸರ್ವೇ ಇಲಾಖೆಯ ಮುಖ್ಯ ಅಧಿಕಾರಿ ಜಗದೀಶ ವೈ.ಕೆ., ಎಡಿಎಲ್‌ಆರ್ ಸತ್ಯನಾರಾಯಣಪ್ಪ ಡಿ., ತಾಲ್ಲೂಕು ಸರ್ವೇಯರ್ ಮಂಜುನಾಥ ಮೂಲಿಮನಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಸಾಮಾನ್ಯ ಉದ್ದೇಶದಿಂದ ಕೃತ್ಯ (ಬಿಎನ್‌ಎಸ್‌ 3(5), ಮಾಲೀಕರ ಅನುಮತಿ ಇಲ್ಲದೇ ಚರಾಸ್ತಿಯನ್ನು ಅಪ್ರಮಾಣಿಕವಾಗಿ ತೆಗೆದುಕೊಳ್ಳುವುದು (ಬಿಎನ್‌ಎಸ್‌ 303 (1), ಕ್ರಿಮಿನಲ್ ಅತಿಕ್ರಮಣ (ಬಿಎನ್‌ಎಸ್ 329 (3) ಹಾಗೂ ವ್ಯಕ್ತಿಗೆ ತೊಂದರೆಯಾಗುವ ಉದ್ದೇಶದಿಂದ ಆಸ್ತಿ ನಾಶಪಡಿಸಿದ (ಬಿಎನ್‌ಎಸ್‌ 324 (4) ಆರೋಪದಡಿ ಪ್ರಕರಣ ದಾಖಲಾಗಿದೆ’ ಎಂದು ಹೇಳಿದರು.

ಘಟನೆ ವಿವರ: ‘ದೂರುದಾರ ಫಕ್ಕೀರಗೌಡ ಅವರು ಹಾನಗಲ್ ತಾಲ್ಲೂಕಿನ ಹಳೇಕೋಟಿ ಹೋಬಳಿಯಲ್ಲಿ 12 ಎಕರೆ 22 ಗುಂಟೆ ಜಮೀನು ಹೊಂದಿದ್ದಾರೆ. ಇದೇ ಜಮೀನಿನಲ್ಲಿ 25 ವರ್ಷಗಳ ಮಾವಿನ ಗಿಡಗಳಿದ್ದವು. ದೂರುದಾರರ ಜಮೀನಿಗೆ ಹೊಂದಿಕೊಂಡು ಸಂಬಂಧಿಕರಿಗೆ ಸೇರಿದ್ದ ಜಮೀನಿದೆ. ಸಂಬಂಧಿಕರ ಜಮೀನಿನಲ್ಲಿ 4 ಎಕರೆ 32 ಗುಂಟೆ ಜಮೀನನ್ನು 2017ರ ಮೇ 29ರಂದು ಯಾಸೀರ್ ಅಹ್ಮದ್ ಖಾನ್ ಪಠಾಣ ಹಾಗೂ ಮಖ್ಬುಲ್‌ ಅವರು ಖರೀದಿಸಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಯಾಸೀರ್ ಅಹ್ಮದ್ ಖಾನ್ ಪಠಾಣ ಹಾಗೂ ಮಖ್ಬುಲ್ ಸೂಚನೆಯಂತೆ ಉಳಿದ ಆರೋಪಿಗಳು, 2025ರ ಜೂನ್‌ 5ರಂದು ಜಮೀನು ಅಳತೆ ಮಾಡಿದ್ದರು. ಇದೇ ಸಂದರ್ಭದಲ್ಲಿ ಆರೋಪಿಗಳು, ದೂರುದಾರರ ಜಮೀನಿನೊಳಗೆ ಅಕ್ರಮವಾಗಿ ಪ್ರವೇಶಿಸಿದ್ದರು. ಜೆಸಿಬಿ ಯಂತ್ರದಿಂದ ಮಾವಿನ ಗಿಡಗಳನ್ನು ಕಡಿದು ಕಳ್ಳತನ ಮಾಡಿರುವುದಾಗಿ ದೂರುದಾರರು ಆರೋಪಿಸಿದ್ದಾರೆ’ ಎಂದು ಹೇಳಿದರು.

ತಮ್ಮ ವಿರುದ್ಧ ದಾಖಲಾಗಿರುವ ಆರೋಪದ ಬಗ್ಗೆ ಪ್ರತಿಕ್ರಿಯೆ ಪಡೆಯಲು ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ ಲಭ್ಯರಾಗಲಿಲ್ಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.