ಹಾವೇರಿ: ‘ಸದೃಢ ಭಾರತ ನಿರ್ಮಾಣಕ್ಕೆ ಹಳ್ಳಿ ಹಳ್ಳಿಗಳಿಂದಲೂ ಯುವಕರು ಸನ್ನದ್ಧರಾಗಬೇಕು’ ಎಂದು ಶಾಸಕ ನೆಹರು ಓಲೇಕಾರ ಕರೆ ನೀಡಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ‘ಆಜಾದಿ ಕಾ ಅಮೃತ ಮಹೋತ್ಸವ’ದ ಅಂಗವಾಗಿ ಹಮ್ಮಿಕೊಂಡಿದ್ದ ‘ಫಿಟ್ ಇಂಡಿಯಾ ಫ್ರೀಡಮ್ ರನ್ 2.0’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ವಿಶ್ವದಲ್ಲೇ ಅತಿ ಹೆಚ್ಚು ಯುವಕರನ್ನು ಹೊಂದಿರುವ ರಾಷ್ಟ್ರ ಭಾರತ. ಯುವಶಕ್ತಿ ಒಗ್ಗೂಡಿದರೆ ವಿಶ್ವದಲ್ಲೇ ಭಾರತ ಸದೃಢ ರಾಷ್ಟ್ರವಾಗಿ ಹೊರಹೊಮ್ಮಬಹುದು. ನಮ್ಮ ಭಾರತ ವಿಶ್ವಕ್ಕೆ ಗುರುವಾಗಲಿದೆ’ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ‘ಪ್ರಧಾನ ಮಂತ್ರಿಗಳ ಫಿಟ್ ಇಂಡಿಯಾ ಆಂದೋಲನ ಯಶಸ್ವಿಗೆ ಯುವಕರೆಲ್ಲ ಸದೃಢರಾಗಬೇಕು ಹಾಗೂ ಸಶಸ್ತ್ರ ಪಡೆಗಳಿಗೆ ಹೆಚ್ಚು ಹೆಚ್ಚು ಸೇರಿಕೊಂಡು ರಾಷ್ಟ್ರ ಸೇವೆಗೆ ಮುಂದಾಗಬೇಕು’ ಎಂದು ಯುವಕರಿಗೆ ಕಿವಿಮಾತು ಹೇಳಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ರವಿಕುಮಾರ ಅಂಬೋರೆ ಮಾತನಾಡಿ, ನಾವೆಲ್ಲ ಸೋಮಾರಿತನವನ್ನು ಬಿಟ್ಟು ದೈಹಿಕ ಸದೃಢತೆ ಬಗ್ಗೆ ಗಮನ ಹರಿಸಬೇಕು. ಆಗ ಮಾತ್ರ ನಾವು ಏನನ್ನಾದರೂ ಸಾಧಿಸಲು ಸಾಧ್ಯ ಎಂದು ಯುವಕರಿಗೆ ಕಿವಿಮಾತು ಹೇಳಿದರು.
ನೆಹರು ಯುವ ಕೇಂದ್ರದ ಜಿಲ್ಲಾ ಅಧಿಕಾರಿ ಭುಕ್ಯಾ ಸಂಜೀವ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.