ADVERTISEMENT

ಎಲ್ಲ ರೈತರಿಗೂ ಸಹಾಯಧನ ನೀಡಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2021, 16:57 IST
Last Updated 3 ಫೆಬ್ರುವರಿ 2021, 16:57 IST
ಶಿವಾನಂದ ಗುರುಮಠ
ಶಿವಾನಂದ ಗುರುಮಠ   

ಹಾವೇರಿ: ‘ಸಂಗೂರ ಸಹಕಾರಿ ಸಕ್ಕರೆ ಕಾರ್ಖಾನೆಗೆ ಫೆ.1ರಿಂದ ಕಬ್ಬು ಪೂರೈಸಿದ ರೈತರಿಗೆ ಪ್ರತಿ ಮೆ.ಟನ್‌ಗೆ ₹200ರಂತೆ ಹೆಚ್ಚುವರಿಯಾಗಿ ಕಬ್ಬು ಕಟಾವು ಮತ್ತು ನೀರು ನಿರ್ವಹಣೆ ಸಹಾಯಧನವನ್ನು ನೀಡುವುದಾಗಿ ಆಡಳಿತ ಮಂಡಳಿ ತಿಳಿಸಿದೆ. ಈ ಸಹಾಯಧನವನ್ನು2020–21ರ ಹಂಗಾಮಿನಲ್ಲಿ ಕಬ್ಬು ಪೂರೈಸಿದ ಎಲ್ಲ ರೈತರಿಗೂ ನೀಡಬೇಕು’ ಎಂದು ಅಖಿಲ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಶಿವಾನಂದ ಗುರುಮಠ ಒತ್ತಾಯಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2020ರ ಅಕ್ಟೋಬರ್‌ 12ರಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರ್ಕಾರ ನಿಗದಿಪಡಿಸಿದ ಎಫ್‌ಆರ್‌ಪಿ ದರ ₹2750 ಅನ್ನು ಪ್ರತಿ ಟನ್‌ಗೆ ಕೊಡುವುದಾಗಿ ಆಡಳಿತ ಮಂಡಳಿ ಒಪ್ಪಿಕೊಂಡಿತ್ತು. ಕಾರ್ಖಾನೆ ₹7ರಿಂದ ₹8 ಕೋಟಿ ನಷ್ಟದಲ್ಲಿದೆ ಎಂಬ ಕಾರಣ ಹೇಳಿ, ₹50 ಅನ್ನು ರೈತರಿಗೆ ಹೆಚ್ಚುವರಿಯಾಗಿ ನೀಡಲು ನಿರಾಕರಿಸಿತ್ತು. ಆದರೆ ಈಗ ₹200 ಹೆಚ್ಚುವರಿಯಾಗಿ ನೀಡಲು ಮುಂದಾಗಿರುವುದು ಕಾರ್ಖಾನೆಯ ಲಾಭಾಂಶವನ್ನು ತೋರಿಸುತ್ತದೆ ಎಂದು ಹೇಳಿದರು.

ಸಕ್ಕರೆ ಇಳುವರಿಯಲ್ಲಿ ಕಾರ್ಖಾನೆ ಮೋಸ ಮಾಡುತ್ತಿರುವುದರಿಂದ, ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಪರಿಶೀಲನಾ ಸಮಿತಿ ರಚಿಸಬೇಕು. ಅದರಲ್ಲಿ ಇಬ್ಬರು ಕಬ್ಬು ಬೆಳೆಗಾರರಿರಬೇಕು ಎಂಬ ಬೇಡಿಕೆ ಇದುವರೆಗೂ ಈಡೇರಿಲ್ಲ. ಕಬ್ಬು ಕಟಾವು ಮಾಡುವ ಗ್ಯಾಂಗ್‌ನವರು 1 ಟನ್‌ ಕಬ್ಬು ಕಡಿಯಲು ₹1000 ರಿಂದ ₹1100 ತೆಗೆದುಕೊಳ್ಳುತ್ತಿರುವುದರಿಂದ ರೈತರಿಗೆ ಮೋಸವಾಗುತ್ತಿದೆ. ಈ ಬಗ್ಗೆ ರೈತ ಪ್ರತಿನಿಧಿಗಳ ಸಮಿತಿ ಇದುವರೆಗೂ ರಚನೆಯಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಕೇಂದ್ರ ಸರ್ಕಾರ ₹3500 ಕೋಟಿಯನ್ನು ಬಿಡುಗಡೆ ಮಾಡಿದ್ದು, ಕಬ್ಬು ಬೆಳಗಾರರ ಖಾತೆಗೆ ನೇರ ಜಮೆ ಎಂದು ಹೇಳಲಾಗುತ್ತಿದೆ. ಆ ಹಣ ಯಾವ ರೈತರಿಗೆ ಮತ್ತು ಎಷ್ಟು ಜಮೆಯಾಗುತ್ತದೆ ಎಂಬ ಬಗ್ಗೆ ಸಂಸದರು ಕಬ್ಬು ಬೆಳೆಗಾರರಿಗೆ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಸದಸ್ಯ ಎಸ್‌.ಎಂ. ಚಿಕ್ಕಗೌಡ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.