ADVERTISEMENT

223 ಗ್ರಾ.ಪಂ.ಗಳಲ್ಲಿ ‘ಕಾರ್ಮಿಕ ಆಯವ್ಯಯ’ ರಚನೆ

’ಉದ್ಯೋಗ ಖಾತ್ರಿ ನಡಿಗೆ ಸುಸ್ಥಿರತೆಯಡೆಗೆ’ ಅಭಿಯಾನ ಆರಂಭ: ಸಿಇಒ ಮೊಹಮ್ಮದ್‌ ರೋಶನ್‌

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2022, 14:25 IST
Last Updated 18 ಅಕ್ಟೋಬರ್ 2022, 14:25 IST
ಮೊಹಮ್ಮದ್‌ ರೋಶನ್‌, ಸಿಇಒ, ಹಾವೇರಿ ಜಿಲ್ಲಾ ಪಂಚಾಯಿತಿ
ಮೊಹಮ್ಮದ್‌ ರೋಶನ್‌, ಸಿಇಒ, ಹಾವೇರಿ ಜಿಲ್ಲಾ ಪಂಚಾಯಿತಿ   

ಹಾವೇರಿ: ಜಿಲ್ಲೆಯ 223 ಗ್ರಾಮ ಪಂಚಾಯಿತಿಗಳಲ್ಲಿ 2023-24ನೇ ಸಾಲಿನ ‘ಕಾರ್ಮಿಕ ಆಯವ್ಯಯ’ ತಯಾರಿಸಲು ‘ಉದ್ಯೋಗ ಖಾತ್ರಿ ನಡಿಗೆ ಸುಸ್ಥಿರತೆಯಡೆಗೆ’ ಅಭಿಯಾನ ಆರಂಭಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್‌ ತಿಳಿಸಿದ್ದಾರೆ.

ಒಂದು ತಿಂಗಳ ಅವಧಿಗೆ ‘ಮನೆ– ಮನೆ ಜಾಥಾ’ ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಲಾಗಿದ್ದು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಪ್ರತಿಯೊಂದು ಮನೆಗೆ ಭೇಟಿ ನೀಡಿ, ನರೇಗಾ ಯೋಜನೆ ಕುರಿತು ಜನರಿಗೆ ಮಾಹಿತಿ ನೀಡಲಾಗುವುದು ಹಾಗೂ ಬೇಡಿಕೆ ಸಂಗ್ರಹಿಸಲಾಗುವುದು. 2022ರ ಅಕ್ಟೋಬರ್‌ನಿಂದ ‘ಕಾರ್ಮಿಕ ಆಯವ್ಯಯ’ ತಯಾರಿಕೆ ಪ್ರಕ್ರಿಯೆ ಆರಂಭಿಸಿ 2023ರ ಫೆ.20ರಂದು ಅಂತಿಮಗೊಳಿಸಲು ವೇಳಾಪಟ್ಟಿ ಹಾಕಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮನೆ– ಮನೆ ಭೇಟಿ:ಯೋಜನೆಯಡಿ ದೊರೆಯುವ ಕೂಲಿ ಮೊತ್ತ ಬಗ್ಗೆ ಮಾಹಿತಿ, ಗಂಡು ಹೆಣ್ಣಿಗೆ ಸಮಾನ ಕೂಲಿ, ಒಂದು ದಿನದ ಕೂಲಿ ಪಡೆಯಲು ಮಾಡಬೇಕಾದ ಕೆಲಸದ ಪ್ರಮಾಣ ಮತ್ತು ಕೆಲಸದ ಅವಧಿ, ವೈಯಕ್ತಿಕ ಸೌಲಭ್ಯಗಳು ಮತ್ತು ಅರ್ಹತೆಗಳು, ಕಾಮಗಾರಿ ಪ್ರಮಾಣದಲ್ಲಿ ಹಿರಿಯ ನಾಗರಿಕರಿಗೆ ಮತ್ತು ವಿಶೇಷ ಚೇತನರಿಗೆ ಶೇ 50ರಷ್ಟು ರಿಯಾಯಿತಿ, ಕಾಮಗಾರಿ ಸ್ಥಳದಲ್ಲಿ ಒದಗಿಸಲಾಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಗುವುದುಎಂದು ತಿಳಿಸಿದ್ದಾರೆ.

ADVERTISEMENT

ಕಾಮಗಾರಿ ಬೇಡಿಕೆ ಪಟ್ಟಿ:ರೈತರಿಗೆ ಹಾಗೂ ಗ್ರಾಮಸ್ಥರಿಗೆ ಬೇಕಾಗುವ ಕಾಮಗಾರಿಗಳ ಬೇಡಿಕೆಯ ಅರ್ಜಿಗಳನ್ನು ಸ್ವೀಕರಿಸಲು ಜಾಗೃತಿ ವಾಹನದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಮತ್ತು ಗ್ರಾಮ ಪಂಚಾಯಿತಿಯಲ್ಲಿ ‘ಕಾಮಗಾರಿ ಬೇಡಿಕೆ ಪೆಟ್ಟಿಗೆ’ಯನ್ನು ಇಡಲಾಗುವುದು. ಅ.31ರವರೆಗೆ ಅರ್ಜಿ ಸ್ವೀಕರಿಸಲಾಗುವುದು.

ವಾರ್ಡ್ ಸಭೆ:ಜನರಿಂದ ಹಾಗೂ ಕಾಮಗಾರಿ ಬೇಡಿಕೆ ಪೆಟ್ಟಿಗೆ ಮೂಲಕ ಸ್ವೀಕರಿಸಲಾದ ಅರ್ಜಿಗಳನ್ನು ಪರಿಶೀಲಿಸಿ, ವಾರ್ಡ್ ಸಭೆಗಳಲ್ಲಿ ಕಾಮಗಾರಿ ಪಟ್ಟಿ ತಯಾರಿಸಿ ಅನುಮೋದಿಸಿ ಗ್ರಾಮ ಸಭೆಗೆ ಸಲ್ಲಿಸುವುದು. ಮಹಾತ್ಮಗಾಂಧಿ ನರೇಗಾ ಯೋಜನೆ ಮತ್ತು ಜಲ ಸಂಜೀವಿನಿ ಕಾರ್ಯಕ್ರಮದ ಮಹತ್ವದ ಬಗ್ಗೆ ಖಾತ್ರಿಪಡಿಸಬೇಕು ಹಾಗೂ ವಾರ್ಡ್ ಸಭೆಗಳನ್ನು ನವೆಂಬರ್‌ 15ರೊಳಗೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.