
ಹಾವೇರಿ: ‘ಜಿಲ್ಲೆಯಲ್ಲಿ 2025ರ ಏಪ್ರಿಲ್‌ನಿಂದ 2026ರ ಜನವರಿವರೆಗೆ 40 ಬಾಲಗರ್ಭಿಣಿಯರು ಪತ್ತೆಯಾಗಿದ್ದಾರೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ರೇವತಿ ಎಸ್. ಹೊಸಮಠ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ಜಿಲ್ಲೆಯ ಮಕ್ಕಳ ವಸತಿ ನಿಲಯಗಳ ನಿಲಯ ಮೇಲ್ವಿಚಾರಕರಿಗಾಗಿ ಮಂಗಳವಾರ ಹಮ್ಮಿಕೊಂಡಿದ್ದ ‘ಮಕ್ಕಳ ರಕ್ಷಣಾ ನೀತಿ ಹಾಗೂ ಮಕ್ಕಳ ಸಂರಕ್ಷಣಾ ಕಾಯ್ದೆ’ ಕುರಿತ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 52 ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆ ಹಾಗೂ ಬಾಲ್ಯ ವಿವಾಹಕ್ಕೆ ಸಂಬಂಧಪಟ್ಟಂತೆ, 35 ಪ್ರಕರಣ ಕಂಡುಬಂದಿದೆ’ ಎಂದರು.
‘ಬಾಲ್ಯ ವಿವಾಹ ಹಾಗೂ ಪೋಕ್ಸೊ ಪ್ರಕರಣಗಳ ತಡೆಗೆ ಸೇರಿದಂತೆ ಮಕ್ಕಳ ರಕ್ಷಣೆ ಕಾಯ್ದೆಗಳ ಕುರಿತು ಗ್ರಾಮ ಪಂಚಾಯಿತಿ ಅಧಿಕಾರಿ, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಶಿಕ್ಷಕರಿಗೆ ಈ ಕಾರ್ಯಾಗಾರ ಮಾಡಲಾಗಿದೆ. ಮಕ್ಕಳ ರಕ್ಷಣೆಯಲ್ಲಿ ವಸತಿ ನಿಲಯಗಳ ಮೇಲ್ವಿಚಾರಕರ ಜವಾಬ್ದಾರಿ ಹೆಚ್ಚಿದೆ’ ಎಂದರು.
ಕಾರ್ಯಾಗಾರ ಉದ್ಘಾಟಿಸಿದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ, ‘ಮಕ್ಕಳ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರು, ಮಕ್ಕಳ ರಕ್ಷಣೆಗೆ ಪ್ರಮುಖ ಆದ್ಯತೆ ನೀಡಬೇಕು. ರಾಜ್ಯ ಮಕ್ಕಳ ರಕ್ಷಣಾ ನೀತಿ ತಿಳಿದುಕೊಂಡು ಸಂಪೂರ್ಣ ಅನುಷ್ಠಾನ ಮಾಡಿದಾಗ ಮಾತ್ರ ಮಕ್ಕಳ ರಕ್ಷಣೆ ಹಾಗೂ ಮಕ್ಕಳ ಕ್ಷೇತ್ರದಲ್ಲಿ ಕೆಲಸ ಮಾಡುವವರ ರಕ್ಷಣೆ ಸಾಧ್ಯ’ ಎಂದರು.
‘ಇಂದಿನ ಪೋಕ್ಸೊ ಪ್ರಕರಣಗಳಲ್ಲಿ ಆರೋಪಿಗಳು, 25 ವರ್ಷದಿಂದ 75 ವರ್ಷ ವಯಸ್ಸಿನವರಿದ್ದಾರೆ. ಮಕ್ಕಳ ಕಾಯ್ದೆಗಳೂ ದುರುಪಯೋಗವಾಗುತ್ತಿರುವ ಆರೋಪಗಳೂ ಇವೆ. ಮಕ್ಕಳ ರಕ್ಷಣೆಗೆ ಎಲ್ಲರೂ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು. ಮಕ್ಕಳ ಶಿಕ್ಷಣ, ಬಿಸಿಯೂಟದ ಆದ್ಯತೆ ಜೊತೆಗೆ ಮಕ್ಕಳ ರಕ್ಷಣೆಗೆ ಆದ್ಯತೆ ನೀಡುವುದು ಅತ್ಯಗತ್ಯವಾಗಿದೆ’ ಎಂದರು.
ಯುನಿಸೆಫ್ ಕಾರ್ಯಕ್ರಮದ ಯೋಜನಾ ವ್ಯವಸ್ಥಾಪಕ ಹರೀಶ ಜೋಗಿ ಅವರು ಮಕ್ಕಳ ರಕ್ಷಣಾ ನೀತಿ ಹಾಗೂ ಮಕ್ಕಳ ಸಂರಕ್ಷಣಾ ಕಾಯ್ದೆ ಕುರಿತು ಉಪನ್ಯಾಸ ನೀಡಿದರು. ಮಕ್ಕಳ ರಕ್ಷಣೆ ಕುರಿತ ಕಾಯ್ದೆಗಳ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಪ್ರಶಾಂತ ವರಗಪ್ಪನವರ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಆರ್. ಸುಬ್ರಾ ನಾಯಕ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಅಬ್ದುಲ್ ರಶೀದ್ ಮಿರ್ಜಾನವರ, ಜಿ.ಪಂ. ಮುಖ್ಯ ಯೋಜನಾಧಿಕಾರಿ ಕುಮಾರ ಮಣ್ಣವಡ್ಡರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಜಯಶ್ರೀ ಪಾಟೀಲ, ವಿನಯ ಗುಡದೂರ ಹಾಗೂ ಇತರರು ಇದ್ದರು.
‘ವಸತಿ ಶಾಲೆಯಲ್ಲಿ ಬಾಲಗರ್ಭಿಣಿಯರು’
‘ರಾಜ್ಯದಲ್ಲಿ ಬಾಲ ಗರ್ಭಿಣಿಯರು ಕಂಡುಬರುತ್ತಿರುವುದು ವಿಷಾದನೀಯ. ಕೊಪ್ಪಳ ಶಿವಮೊಗ್ಗ ಸೇರಿ ಹಲವು ಜಿಲ್ಲೆಗಳ ವಸತಿ ಶಾಲೆ ಹಾಗೂ ವಸತಿ ನಿಲಯಗಳಲ್ಲಿರುವ ಕೆಲ ವಿದ್ಯಾರ್ಥಿನಿಯರು ಗರ್ಭಿಣಿಯರಾಗುತ್ತಿರುವ ಪ್ರಕರಣಗಳು ಕಂಡುಬರುತ್ತಿವೆ’ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಹೇಳಿದರು. ‘ಬಾಲಗರ್ಭಿಣಿಯರ ಪ್ರಕರಣಗಳನ್ನು ಸಂಪೂರ್ಣವಾಗಿ ತಡೆಯಬೇಕು. ವಸತಿ ಶಾಲೆ ಹಾಗೂ ವಸತಿ ನಿಲಯಗಳಲ್ಲಿರುವ ಲೋಪದೋಷಗಳನ್ನು ಸರಿಪಡಿಸಿಕೊಳ್ಳಬೇಕು’ ಎಂದರು.
ಮಕ್ಕಳು ಹಾಗೂ ಮಹಿಳೆಯರ ಸಮಸ್ಯೆಗೆ ತುರ್ತಾಗಿ ಸ್ಪಂದಿಸಲು ಜಿಲ್ಲೆಯಲ್ಲಿ ಅಕ್ಕಪಡೆ ಕೆಲಸ ಮಾಡುತ್ತಿದ್ದು ತಾಲ್ಲೂಕಿಗೂ ವಿಸ್ತರಿಸಲಾಗುವುದು. ಮಕ್ಕಳ ಸಮಸ್ಯೆಗಳಿದ್ದರೆ 1098 ಹಾಗೂ ಮಹಿಳೆಯರ ಸಮಸ್ಯೆಗೆ 112–181 ಸಂಖ್ಯೆಗೆ ಕರೆ ಮಾಡಬಹುದು–ರೇವತಿ ಎಸ್. ಹೊಸಮಠ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ
ಜಿಲ್ಲೆಯಲ್ಲಿ ಪೋಕ್ಸೊ–ಬಾಲಗರ್ಭಿಣಿಯರ ಪ್ರಕರಣ ಅಧಿಕವಾಗಿವೆ. ಮಕ್ಕಳ ರಕ್ಷಣೆ ಕಾಯ್ದೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಪೋಕ್ಸೊ–ಬಾಲಗರ್ಭಿಣಿಯರ ಮುಕ್ತ ಜಿಲ್ಲೆಯನ್ನಾಗಿಸಲು ಸಂಕಲ್ಪ ಮಾಡಬೇಕು–ಶ್ರೀಶೈಲಜಾ ಎಚ್.ವಿ., ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.