ADVERTISEMENT

ಹಾವೇರಿ: ನಾಲ್ವರು ಅಂತರರಾಜ್ಯ ದರೋಡೆಕೋರರ ಬಂಧನ

ಐದು ಕಾರು, ₹34 ಲಕ್ಷ ನಗದು ಸೇರಿದಂತೆ ₹1 ಕೋಟಿ ಮೌಲ್ಯದ ಸಾಮಗ್ರಿ ಜಪ್ತಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2022, 14:09 IST
Last Updated 23 ಡಿಸೆಂಬರ್ 2022, 14:09 IST
ಹಾವೇರಿ ಗ್ರಾಮಾಂತರ ಪೊಲೀಸ್‌ ಠಾಣೆಯಿಂದ ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲು ಅಂತರರಾಜ್ಯ ಹೆದ್ದಾರಿ ದರೋಡೆಕೋರರನ್ನು ಕರೆದೊಯ್ದ ಇನ್‌ಸ್ಪೆಕ್ಟರ್‌ ಸಿದ್ಧಾರೂಢ ಬಡಿಗೇರ ಮತ್ತು ಸಿಬ್ಬಂದಿ   –ಪ್ರಜಾವಾಣಿ ಚಿತ್ರ 
ಹಾವೇರಿ ಗ್ರಾಮಾಂತರ ಪೊಲೀಸ್‌ ಠಾಣೆಯಿಂದ ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲು ಅಂತರರಾಜ್ಯ ಹೆದ್ದಾರಿ ದರೋಡೆಕೋರರನ್ನು ಕರೆದೊಯ್ದ ಇನ್‌ಸ್ಪೆಕ್ಟರ್‌ ಸಿದ್ಧಾರೂಢ ಬಡಿಗೇರ ಮತ್ತು ಸಿಬ್ಬಂದಿ   –ಪ್ರಜಾವಾಣಿ ಚಿತ್ರ    

ಹಾವೇರಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಹವಾಲಾ ಹಣ ಸಾಗಣೆ ಮಾಡುವ ಮತ್ತು ಬಂಗಾರವನ್ನು ಸಾಗಣೆ ಮಾಡುವ ವ್ಯಾಪಾರಿಗಳನ್ನು ಗುರಿಯಾಗಿಟ್ಟುಕೊಂಡು, ಕಾರುಗಳನ್ನು ಅಡ್ಡಗಟ್ಟಿ ಹಣ ದೋಚುತ್ತಿದ್ದ ನಾಲ್ವರು ಅಂತರರಾಜ್ಯ ಹೆದ್ದಾರಿ ದರೋಡೆಕೋರರನ್ನು ಹಾವೇರಿ ಜಿಲ್ಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೇರಳ ರಾಜ್ಯದ ಅಂತೋನಿ (22), ಅಬ್ಬಾಸ್‌ ಇ.ಎಸ್‌. (38), ನಿಶಾದಬಾಬು (37), ಭರತ್‌ಕುಮಾರ್‌ (29) ಎಂಬ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ಪ್ರಕರಣದ ಬಗ್ಗೆ ಮಾತನಾಡಿದ ಎಸ್ಪಿ ಹನುಮಂತರಾಯ,ಆರೋಪಿಗಳಿಂದ ₹34.50 ಲಕ್ಷ ನಗದು, ಆಡಿ, ಕ್ರೇಟಾ, ಇನ್ನೋವಾ ಸೇರಿದಂತೆ ಐದು ಐಷಾರಾಮಿ ಕಾರುಗಳು, ಒಂದು ಏರ್‌ಗನ್‌, 6 ಮೊಬೈಲ್‌ ಫೋನ್‌, 3 ಲ್ಯಾಪ್‌ಟಾಪ್‌, 4 ಕಬ್ಬಿಣದ ರಾಡುಗಳು ಸೇರಿದಂತೆ ₹1.08 ಕೋಟಿ ಮೌಲ್ಯದ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ. ಅಲ್ಲದೇ, ಆರೋಪಿಗಳ ಬಳಿ ಪತ್ರಕರ್ತರು ತಮ್ಮ ವಾಹನಗಳಿಗೆ ಅಂಟಿಸುವ ‘ಪ್ರೆಸ್‌’ ಸ್ಟಿಕ್ಕರ್‌ ಗಳು ಕೂಡ ದೊರಕಿವೆ ಎಂದರು.

ADVERTISEMENT

₹50 ಲಕ್ಷ ದರೋಡೆ:

ನವೆಂಬರ್‌ 21ರಂದು ರಾತ್ರಿ 1 ಗಂಟೆ ಸಮಯದಲ್ಲಿ ಬ್ಯಾಡಗಿ ತಾಲ್ಲೂಕು ಛತ್ರ ಗ್ರಾಮದ ಹತ್ತಿರದ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್‌ ರಸ್ತೆಯಲ್ಲಿ ಹೋಗುತ್ತಿದ್ದ ಮೈಸೂರಿನ ಮಹೇಶ ನಾಂಗ್ರೆ ಅವರ ಕಾರನ್ನು 10ರಿಂದ 12 ದರೋಡೆಕೋರರು ಮೂರು ಕಾರುಗಳಲ್ಲಿ ಅಡ್ಡಗಟ್ಟಿ, ಕಬ್ಬಿಣದ ರಾಡುಗಳಿಂದ ಕಾರಿನ ಗಾಜುಗಳನ್ನು ಒಡೆದು ₹50 ಲಕ್ಷ ಹಣ ದೋಚಿದ್ದರು ಎಂದು ತಿಳಿಸಿದರು.

ವಿಶೇಷ ತಂಡ ರಚನೆ:

ಮಹೇಶ ಅವರ ಜೊತೆಗಿದ್ದ ಹೃಷಿಕೇಶ ಅವರ ಮುಖಕ್ಕೆ ಬಟ್ಟೆ ಕಟ್ಟಿ ಕರೆದೊಯ್ದು ದೂರದಲ್ಲಿ ಬಿಟ್ಟು ಕಾರಿನ ಸಮೇತ ಪರಾರಿಯಾಗಿದ್ದರು. ಈ ಬಗ್ಗೆ ಬ್ಯಾಡಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್‌ಸ್ಪೆಕ್ಟರ್‌ಗಳಾದ ಸಿದ್ಧಾರೂಢ ಬಡಿಗೇರ ಮತ್ತು ಇನ್‌ಸ್ಪೆಕ್ಟರ್‌ ಸಂತೋಷ ಪಾಟೀಲ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು ಎಂದರು.

ಕೇರಳ ಸೇರಿದಂತೆ ವಿವಿಧ ಕಡೆ ಸತತ ಒಂದು ತಿಂಗಳು ಕಾರ್ಯಾಚರಣೆ ನಡೆಸಿ, ಖಚಿತ ಮಾಹಿತಿ ಮೇರೆಗೆ ಬಂಕಾಪುರದ ಪಂಚವಟಿ ಹೋಟೆಲ್ ಹತ್ತಿರ ದರೋಡೆಕೋರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ಸತತ ಒಂದು ತಿಂಗಳು ತನಿಖೆ ನಡೆಸಿ, ದರೋಡೆಕೋರರನ್ನು ಬಂಧಿಸಿದ ಇನ್‌ಸ್ಪೆಕ್ಟರ್‌ ಸಿದ್ಧಾರೂಢ ಬಡಿಗೇರ ಮತ್ತು ಅವರ ತಂಡಕ್ಕೆ ಬಹುಮಾನ ನೀಡುವುದಾಗಿ ಎಸ್ಪಿ ಹೇಳಿದರು.

ಏರ್‌ಗನ್‌ ತೋರಿಸಿ ಬೆದರಿಕೆ

6 ರೌಂಡ್ಸ್‌ ಒಳಗೊಂಡ ಏರ್‌ಗನ್‌ನಲ್ಲಿ ಕಬ್ಬಿಣದ ತುಣುಕುಗಳನ್ನು ತುಂಬಿ, ಏರ್‌ ಟೈಟ್‌ ಮಾಡಿ ಏರ್‌ಗನ್‌ ತೋರಿಸಿ ಶೂಟ್‌ ಮಾಡುತ್ತೇವೆ ಎಂದು ಬೆದರಿಸುತ್ತಿದ್ದರು. ಟೋಲ್‌ಗಳಲ್ಲಿ ಪದೇ ಪದೇ ಕಾರಿನ ನಂಬರ್ ಪ್ಲೇಟ್‌ ಹಾಗೂ ಫಾಸ್ಟ್‌ ಟ್ಯಾಗ್‌ಗಳನ್ನು ಬದಲಿಸುತ್ತಿದ್ದರು. ಸಂಗಡಿಗರೊಂದಿಗೆ ಮಾತನಾಡಲು ವಾಕಿಟಾಕಿ ಬಳಸುತ್ತಿದ್ದರು. ಹಳೆಯ ಕಾರುಗಳನ್ನು ಖರೀದಿಸಿ, ಕೃತ್ಯಕ್ಕೆ ಬಳಕೆ ಮಾಡುತ್ತಿದ್ದರು. ಹೆದ್ದಾರಿಗಳ ಸರ್ವಿಸ್‌ ರಸ್ತೆಯಲ್ಲಿ ಕಾರುಗಳು ನಿಧಾನವಾಗುವ ಕಡೆ ಇವರು ದಾಳಿ ಮಾಡುತ್ತಿದ್ದರು.ಯಾವುದೇ ರೀತಿಯಲ್ಲಿ ಸಾಕ್ಷಿ ಸಿಗದಂತೆ ಚಾಣಾಕ್ಷತನದಿಂದ ಕೃತ್ಯ ಎಸಗುತ್ತಿದ್ದರು ಎಂದು ಎಸ್ಪಿ ಹನುಮಂತರಾಯ ಮಾಹಿತಿ ನೀಡಿದರು.

‘ವಿವಿಧ ಪ್ರಕರಣಗಳಲ್ಲಿ ಭಾಗಿ’

ಅತ್ಯಾಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿ ಕೃತ್ಯ ಎಸಗುತ್ತಿದ್ದ ಈ ಆರೋಪಿಗಳು ಪಾಂಡವಪುರ, ಮೈಸೂರು, ಗುಂಡ್ಲುಪೇಟೆ, ಯಲ್ಲಾಪುರ, ಬೆಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದ ಅಪರಾಧ ಪ್ರಕರಣಗಳಲ್ಲಿಯೂ ಭಾಗಿಯಾಗಿದ್ದಾರೆ’ ಎಂದು ಎಸ್ಪಿ ಹನುಮಂತರಾಯ ಮಾಹಿತಿ ನೀಡಿದರು.

ಈ ಆರೋಪಿಗಳು ನಾಲ್ಕೈದು ತಂಡಗಳಾಗಿ ದರೋಡೆ ನಡೆಸುತ್ತಿದ್ದರು. ಇವರ ವಿರುದ್ಧ ಕೊಲೆ, ಕೊಲೆಗೆ ಯತ್ನ, ಅಪಹರಣ ಮುಂತಾದ ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿವೆ. ಈ ಆರೋಪಿಗಳ ತಂಡದ ಮುಖ್ಯಸ್ಥ ಮುನೀರ್‌ ಮತ್ತು ಆತನ 10 ಸಂಗಡಿಗರ ಪತ್ತೆಗೆ ಬಲೆ ಬೀಸಿದ್ದೇವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.