ADVERTISEMENT

ಎಸ್ಸಿ–ಎಸ್ಟಿ ಕುಟುಂಬಗಳಿಗೆ ಉಚಿತ ವಿದ್ಯುತ್‌: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಹಿರೇಕೆರೂರು ತಾಲ್ಲೂಕಿನ ಮೂರು ವಸತಿ ಶಾಲೆಗಳಿಗೆ ಪಿಯು ತರಗತಿ ಮಂಜೂರು: ಸಚಿವ ಕೋಟ ಭರವಸೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2022, 14:34 IST
Last Updated 23 ಆಗಸ್ಟ್ 2022, 14:34 IST
ರಟ್ಟಿಹಳ್ಳಿ ತಾಲ್ಲೂಕು ಕುಡಪಲಿ ಗ್ರಾಮದಲ್ಲಿ ₹25 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಇಂದಿರಾಗಾಂಧಿ ವಸತಿ ಶಾಲೆಯ ನೂತನ ಕಟ್ಟಡವನ್ನು ಮಂಗಳವಾರ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ಕೃಷಿ ಸಚಿವ ಬಿ.ಸಿ.ಪಾಟೀಲ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ ಇದ್ದಾರೆ   –ಪ್ರಜಾವಾಣಿ ಚಿತ್ರ 
ರಟ್ಟಿಹಳ್ಳಿ ತಾಲ್ಲೂಕು ಕುಡಪಲಿ ಗ್ರಾಮದಲ್ಲಿ ₹25 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಇಂದಿರಾಗಾಂಧಿ ವಸತಿ ಶಾಲೆಯ ನೂತನ ಕಟ್ಟಡವನ್ನು ಮಂಗಳವಾರ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ಕೃಷಿ ಸಚಿವ ಬಿ.ಸಿ.ಪಾಟೀಲ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ ಇದ್ದಾರೆ   –ಪ್ರಜಾವಾಣಿ ಚಿತ್ರ    

ರಟ್ಟೀಹಳ್ಳಿ (ಹಾವೇರಿ): ‘ರಾಜ್ಯದ 24 ಲಕ್ಷ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಈ ತಿಂಗಳಿನಿಂದ ಪ್ರತಿ ಕುಟುಂಬ 75 ಯುನಿಟ್ ಉಚಿತ ವಿದ್ಯುತ್ ನೀಡಲಾಗುವುದು. ಈ ಉದ್ದೇಶಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ₹800 ಕೋಟಿ ಬಿಡುಗಡೆ ಮಾಡಿದ್ದಾರೆ’ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ರಟ್ಟಿಹಳ್ಳಿ ತಾಲ್ಲೂಕು ಕುಡಪಲಿ ಗ್ರಾಮದಲ್ಲಿ ₹25 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಇಂದಿರಾಗಾಂಧಿ ವಸತಿ ಶಾಲೆಯ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

‘ಹಿರೇಕೆರೂರು ತಾಲ್ಲೂಕಿನ ಕುಡುಪಲಿ, ದೂದಿಹಳ್ಳಿ, ಚಿಕ್ಕೇರೂರು ಮೂರು ವಸತಿ ಶಾಲೆಗಳಲ್ಲಿ ಪದವಿ ಪೂರ್ವ ಕಾಲೇಜು ಆರಂಭಿಸಲು ಮಂಜೂರಾತಿ ನೀಡಲಾಗುವುದು.ತಾಲ್ಲೂಕಿನಲ್ಲಿ ಬೇಡಿಕೆ ಇರುವ ಡಾ.ಬಿ.ಆರ್. ಅಂಬೇಡ್ಕರ್‌ ಸಮುದಾಯ ಭವನಗಳಿಗೆ ಹಾಗೂ ರಟ್ಟೀಹಳ್ಳಿ ಹಡಪದ ಸಮುದಾಯ ಭವನ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗುವುದು ಎಂದು ಭರವಸೆ ನೀಡಿದರು.

ADVERTISEMENT

₹250 ಕೋಟಿ ಮಂಜೂರು:

ರಾಜ್ಯ ಸರ್ಕಾರ ಬಡವರ ಮಕ್ಕಳ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಲಾಗಿದ್ದು, ಬಡವರ ಮಕ್ಕಳಿಗಾಗಿ ಗುಣಮಟ್ಟದ ಶಿಕ್ಷಣ, ಉನ್ನತ ಸೌಭ್ಯಗಳನ್ನು ಒಳಗೊಂಡ 830 ವಸತಿ ಶಾಲೆಗಳು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ವಸತಿ ಶಾಲೆಗಳಿಗೆ ₹250 ಕೋಟಿಯನ್ನು ವಸತಿಶಾಲೆಗಳಿಗೆ ಮಂಜೂರು ಮಾಡಿದ್ದಾರೆ ಎಂದರು.

ವಸತಿ ಶಾಲೆಗಳಿಗೆ ಬರುವ ವಿದ್ಯಾರ್ಥಿಗಳ ಹೆಚ್ಚಾಗಿರುವುದರಿಂದ ಬರುವ ಆರ್ಥಿಕ ವರ್ಷದಲ್ಲಿ 6ನೇ ತರಗತಿಗೆ ಎ ಮತ್ತು ಬಿ ಸೆಕ್ಷನ್‌ಗಳನ್ನುಆರಂಭಿಸಿ 27 ಸಾವಿರ ಮಕ್ಕಳಿಗೆ ಅವಕಾಶ ಕಲ್ಪಿಸಲಾಗುವುದು. ಈ ಉದ್ದೇಶಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದಲ್ಲಿ 2,400 ವಿದ್ಯಾರ್ಥಿನಿಲಯಗಳಿದ್ದು, 20 ಲಕ್ಷ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡಿದ್ದಾರೆ ಎಂದರು.

ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ ಮಾತನಾಡಿ, ‘ಶಿಕ್ಷಣ ವ್ಯವಸ್ಥೆಯಲ್ಲಿ ವಸತಿ ಶಾಲೆ ಪರಿಕಲ್ಪನೆ ಬಹುದೊಡ್ಡದು. ಸರ್ಕಾರ ಬಡ ಮಕ್ಕಳಿಗಾಗಿ ನಿರ್ಮಾಣ ಮಾಡಿರುವ ಈ ಶಾಲೆಗಳಲ್ಲಿ ಉತ್ತಮ ಶಿಕ್ಷಣ ಪಡೆದು ಉನ್ನತವಾಗಿ ಬೆಳೆಯಬೇಕು’ ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಗದೀಶ ಹೆಬ್ಬಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿಎಲ್‌ಡಿಬ್ಯಾಂಕ್ ಅಧ್ಯಕ್ಷ ಮಾಲತೇಶ ಗಂಗೋಳ, ರಾಜ್ಯ ಕೃಷಿಕ ಸಮಾಜದ ನಿರ್ದೇಶಕ ಆರ್.ಎನ್. ಗಂಗೋಳ, ಕೆ.ಎಂ.ಎಫ್. ನಿರ್ದೇಶಕ ಹನುಮಂತಗೌಡ ಭರಮಣ್ಣನವರ, ದೊಡ್ಡಗೌಡ ಪಾಟೀಲ, ದೇವರಾಜ ನಾಗಣ್ಣನವರ, ಗುತ್ತಿಗೆದಾರರಾದ ಜಿ.ಪಿ. ಪ್ರಕಾಶಗೌಡ, ರಘುನಾಥ ರಾಮರೆಡ್ಡಿ, ಶಂಕರಗೌಡ ಚನ್ನಗೌಡ್ರ, ಕಾರ್ಯಪಾಲಕ ಎಂಜಿನಿಯರ್‌ ಆರ್. ನಿತಿನ್, ಕುಡಪಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿರ್ಮಲಾ, ಉಪಾಧ್ಯಕ್ಷ ಅಲ್ಲಾಬಕ್ಷ್‌ಸಾಬ್‌ ಇದ್ದರು.ಇಂದಿರಾಗಾಂಧಿ ವಸತಿ ಶಾಲೆ ಪ್ರಾಂಶುಪಾಲ ರಾಜೀವಗೌಡ ಪಾಟೀಲ ಸ್ವಾಗತಿಸಿದರು. ಶಿಕ್ಷಕ ಮಲ್ಲಪ್ಪ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.