ADVERTISEMENT

ಗಾಂಧಿ ಜಯಂತಿ: ಸರಳ ಆಚರಣೆಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 15:31 IST
Last Updated 25 ಸೆಪ್ಟೆಂಬರ್ 2020, 15:31 IST
ಗಾಂಧಿ ಜಯಂತಿ ಅಂಗವಾಗಿ ಹಾವೇರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸಂಜಯ ಶೆಟ್ಟೆಣ್ಣವರ ನೇತೃತ್ವದಲ್ಲಿ ಪೂರ್ವಭಾವಿ ನಡೆಯಿತು 
ಗಾಂಧಿ ಜಯಂತಿ ಅಂಗವಾಗಿ ಹಾವೇರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸಂಜಯ ಶೆಟ್ಟೆಣ್ಣವರ ನೇತೃತ್ವದಲ್ಲಿ ಪೂರ್ವಭಾವಿ ನಡೆಯಿತು    

ಹಾವೇರಿ: ಕೋವಿಡ್ ಹಿನ್ನೆಲೆಯಲ್ಲಿ ಅ.2ರಂದು ಈ ವರ್ಷದ ಗಾಂಧಿ ಜಯಂತಿ ಕಾರ್ಯಕ್ರಮವನ್ನು ಸರಳವಾಗಿ ಹಾಗೂ ಅರ್ಥಪೂರ್ಣ ಆಯೋಜನೆಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಿಂದ ವಿಡಿಯೊ ಸಂವಾದದ ಮೂಲಕ ಎಲ್ಲ ತಾಲ್ಲೂಕು ಆಡಳಿತದೊಂದಿಗೆ ಸಭೆ ನಡೆಸಿದ ಅವರು ಗಾಂಧಿ ಪುತ್ಥಳಿಗೆ ಮಾಲಾರ್ಪಣೆ, ಸರ್ವಧರ್ಮ ಪ್ರಾರ್ಥನೆ, ಕಚೇರಿಗಳ ಸ್ವಚ್ಛತೆ, ಒಂದು ವಾರದವರೆಗೆ ವಾರ್ಡ್‍ವಾರು ಸಾಮೂಹಿಕ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾ ಮಟ್ಟದಲ್ಲಿ ಗಾಂಧಿ ವೃತ್ತದಲ್ಲಿ ಸರಳವಾಗಿ ಅ.2 ರಂದು ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಯಿತು. ಯಾವುದೇ ವೇದಿಕೆ ಕಾರ್ಯಕ್ರಮಗಳನ್ನು ಆಯೋಜಿಸಬಾರದು. ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಜೊತೆಗೆ ಲಾಲ್ ಬಹದ್ದೂರ್‌ ಶಾಸ್ತ್ರೀ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲು ಸೂಚನೆ ನೀಡಿದರು.

ADVERTISEMENT

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ ಮಾಹಿತಿ ನೀಡಿ, ಅ.2ರಿಂದ 9ರವರೆಗೆ ಏಳು ದಿನಗಳ ಕಾಲ ಪ್ರತಿ ದಿನ ಬೆಳಿಗ್ಗೆ 7 ರಿಂದ 9ರವರೆಗೆ ಜಿಲ್ಲಾ ಕೇಂದ್ರ ಸೇರಿದಂತೆ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಸಾಮೂಹಿಕ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಒಣಕಸ ಮತ್ತು ಬಳಕೆ ಮಾಡಿದ ಮಾಸ್ಕ್‌ಗಳನ್ನು ಸೂಕ್ತ ವಿಲೇವಾರಿ ಮಾಡಬೇಕು ಎಂದು ಸೂಚನೆ ನೀಡಿದರು.

ಕಚೇರಿಯನ್ನು ಅತ್ಯುತ್ತಮವಾಗಿ ನಿರ್ವಹಿಸಿದವರಿಗೆ ರಾಜ್ಯೋತ್ಸವದಂದು ಪ್ರಶಸ್ತಿಗಳನ್ನು ನೀಡಲಾಗುವುದು. ಸ್ವಚ್ಛತೆಗೆ ಆದ್ಯತೆ ನೀಡದ ಕಚೇರಿಯ ಮುಖ್ಯಸ್ಥರಿಗೆ ದಂಡ ಹಾಕಲಾಗುವುದು ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.