ADVERTISEMENT

ಶಿಗ್ಗಾವಿ | ಮಳೆಯಲ್ಲೂ ರಾರಾಜಿಸಿದ ಗಣೇಶ ಮೂರ್ತಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 2:34 IST
Last Updated 29 ಆಗಸ್ಟ್ 2025, 2:34 IST
ಶಿಗ್ಗಾವಿ ತಾಲ್ಲೂಕಿನ ಬಸವನಾಳ ಗ್ರಾಮದಲ್ಲಿ ಗಣೇಶ ಹಬ್ಬದ ಅಂಗವಾಗಿ ಬುಧವಾರ ಗಣೇಶ ಮೂರ್ತಿಯನ್ನು ಸಾರ್ವಜನಿಕ ಮೆರವಣಿಗೆ ನಡೆಸಿ ಪ್ರತಿಷ್ಠಾಪಿಸಲಾಯಿತು
ಶಿಗ್ಗಾವಿ ತಾಲ್ಲೂಕಿನ ಬಸವನಾಳ ಗ್ರಾಮದಲ್ಲಿ ಗಣೇಶ ಹಬ್ಬದ ಅಂಗವಾಗಿ ಬುಧವಾರ ಗಣೇಶ ಮೂರ್ತಿಯನ್ನು ಸಾರ್ವಜನಿಕ ಮೆರವಣಿಗೆ ನಡೆಸಿ ಪ್ರತಿಷ್ಠಾಪಿಸಲಾಯಿತು   

ಶಿಗ್ಗಾವಿ: ಕಳೆದ ಮೂರು ತಿಂಗಳಿಂದ ಸುರಿಯುತ್ತಿರುವ ಮಳೆಯು ಬುಧವಾರ ಚೌತಿಯ ದಿನವೂ ಬಿಡದೆ ಸುರಿಯಿತು. ಮಳೆ ಇದ್ದರೂ ವಿಘ್ನ ನಿವಾರಕ ಗಣೇಶನನ್ನು ಪ್ರತಿಷ್ಠಾಪಿಸುವ ಪೂರ್ವ ಅದ್ದೂರಿಯಾಗಿ ಮೂರ್ತಿ ಮೆರವಣಿಗೆ ಮಾಡಲಾಯಿತು.

ಭಕ್ತ ಸಮೂಹವು ಹಬ್ಬವನ್ನು ಸಡಗರ,ಸಂಭ್ರಮದಿಂದ ಆಚರಿಸುತ್ತಿರುವುದು ವಿಶೇಷ. ಪಟ್ಟಣ ಹಾಗೂ ತಾಲ್ಲೂಕಿನ ಗ್ರಾಮಗಳಲ್ಲೂ  ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದು, ಗಣೇಶನಿಗೆ ಭಕ್ತಿ ಸಮರ್ಪಿಸಲು ಪ್ರತಿ ಓಣಿಗಳಲ್ಲೂ ಝಗಮಗಿಸುವ ವಿದ್ಯುತ್ ದೀಪಗಳನ್ನು ಅಲಂಕೃತವಾಗಿ ಜೋಡಿಸಲಾಗಿದೆ. ಬೀದಿಗಳನ್ನು ಬಾಳೆ, ಮಾವಿನ ತಳೀರು ತೋರಣಗಳಿಂದ ಶೃಂಗರಿಸಲಾಗಿದೆ.

ಝಾಂಜ್ ಮೇಳ, ಡೊಳ್ಳು ಮೇಳ, ಭಜನೆ ಸೇರಿದಂತೆ ವಿವಿಧ ವಾಧ್ಯ ವೈಭವದಿಂದ ಗಣೇಶನ ಮೂರ್ತಿ ಮೆರವಣಿಗೆ ಸಾಗಿತು. ಗಣೇಶ ಪ್ರತಿಷ್ಠಾಪನೆಗೆ ಬೃಹತ್‌ ಮಂಟಪಗಳನ್ನು ಹಾಕಲಾಗಿದೆ. ಪಟಾಕಿ ಹಚ್ಚಿ, ಧ್ವನಿವರ್ಧಕಗಳನ್ನು ಹಚ್ಚಿ ಯುವಕರು, ಮಕ್ಕಳು ಹಾಡಿಗೆ ತಕ್ಕಂತೆ ಕುಣಿದು, ಕುಪ್ಪಳಿಸಿದರು. ಮಹಿಳೆಯರು, ಮಕ್ಕಳು ಗಣೇಶ ಮೂರ್ತಿಗೆ ಕಡುಬಿನ, ಮೋದಕದಿಂದ ನೈವೇದ್ಯ ಮಾಡುತ್ತಿದ್ದಾರೆ. ಹಣ್ಣುಕಾಯಿ, ಹೂಗಳಿಂದ ಪೂಜಿಸುತ್ತಿದ್ದಾರೆ.

ADVERTISEMENT

ಗಣೇಶನ ಮೂರ್ತಿಗೆ ಹೂವಿನ ಹಾರ, ಬೆಳ್ಳಿ, ಬಂಗಾರದ ಆಭರಣಗಳನ್ನು ಹಾಕಲಾಗಿತು. ಗಣೇಶ ಚತುರ್ಥಿಯ ದಿನದಂದು ಗಣೇಶನು ಪ್ರಸನ್ನ ಆಗಬೇಕಾದರೆ ಗಣೇಶನು ಸಂತೋಷದಿಂದ ಮತ್ತು ವಿಧಿವತ್ತಾಗಿ ಮನೆಗೆ ಪ್ರವೇಶಸಬೇಕು ಎನ್ನುವುದು ಸಂಪ್ರದಾಯ. ಆಗ ಮಾತ್ರ  ಗಣೇಶನಿಂದ ವ್ರತದ ಪೂರ್ಣ ಫಲ ದೊರೆಯಲಿದೆ ಎನ್ನುವುದು ಭಕ್ತರ ನಂಬಿಕೆ.

ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಗಳ ಎದುರು ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ವಿಶೇಷ ಪೂಜಾ ವಿಧಿವಿಧಾನಗಳು ಜರುಗುತ್ತಿವೆ. ನಿತ್ಯವೂ ಸಂಜೆ ಸಾಂಸ್ಕೃತಿಕ, ಮನರಂಜನೆ ಕಾರ್ಯಕ್ರಮ, ಭಕ್ತಿ ಗೀತೆಗಳ ಗೀತ ಗಾಯನ, ಸಂಗೀತ ಕಾರ್ಯಕ್ರಮ, ಜಾನಪದ ಕಾರ್ಯಕ್ರಮ, ವಿಶೇಷ ಉಪನ್ಯಾಸ ಮಾಲೀಕೆಗಳನ್ನು ಹಮ್ಮಿಕೊಳ್ಳುವದರ ಮೂಲಕ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ವಿತರಿಸುವ ಜತೆಗೆ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕೆಲವು ಕಡೆ ಗಣೇಶ ಮೂರ್ತಿ ನೋಡಲು ಬರುವ ಭಕ್ತ ಸಮೂಹಕ್ಕೆ ಅನ್ನಪ್ರಸಾದ ವಿತರಣೆ ಮಾಡಲಾಗುತ್ತಿದೆ.

ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿ ಬುಧವಾರ ವೀರಭದ್ರೇಶ್ವರ ದೇವಸ್ಥಾನದ ಹತ್ತಿರ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪಿಸಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.