ADVERTISEMENT

ಬಂಕಾಪುರ | ಡಿ.ಜೆ.ಗೆ ಪಟ್ಟು; 42 ದಿನವಾದರೂ ನಡೆಯದ ಗಣೇಶ ವಿಸರ್ಜನೆ

ಹಿಂದೂ ಮಹಾಸಭಾ ಗಣೇಶ ಮೂರ್ತಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 2:23 IST
Last Updated 7 ಅಕ್ಟೋಬರ್ 2025, 2:23 IST
ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿ ಪ್ರತಿಷ್ಠಾಪಿಸಲಾಗಿರುವ ಹಿಂದೂ ಮಹಾಸಭಾ ಗಣೇಶ ಮೂರ್ತಿ
ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿ ಪ್ರತಿಷ್ಠಾಪಿಸಲಾಗಿರುವ ಹಿಂದೂ ಮಹಾಸಭಾ ಗಣೇಶ ಮೂರ್ತಿ   

ಶಿಗ್ಗಾವಿ: ತಾಲ್ಲೂಕಿನ ಬಂಕಾಪುರದ ನೆಹರು ಗಾರ್ಡನ್‌ನಲ್ಲಿ ಹಿಂದೂ ಮಹಾಸಭಾ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ 42 ದಿನವಾಗಿದ್ದು, ಡಿ.ಜೆ.ಗಾಗಿ (ಡಿಸ್ಕ್‌ ಜಾಕಿ) ಮಂಡಳಿಯವರು ಪಟ್ಟು ಹಿಡಿದಿರುವುದರಿಂದ ವಿಸರ್ಜನಾ ದಿನವೂ ಮುಂದೂಡಿಕೆ ಆಗುತ್ತಿದೆ.

ಜಿಲ್ಲೆಯ ಪ್ರಸಿದ್ಧ ಮೂರ್ತಿಗಳಲ್ಲಿ ಒಂದಾದ, ಬಂಕಾಪುರದ ಹಿಂದೂ ಮಹಾಸಭಾ ಗಣೇಶ ಮೂರ್ತಿ ವಿಸರ್ಜನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ವಿಸರ್ಜನೆ ಸಂದರ್ಭದಲ್ಲಿ ಡಿ.ಜೆ. ವಿಚಾರವಾಗಿ ಹಲವು ದಿನಗಳಿಂದ ಚರ್ಚೆ ನಡೆಯುತ್ತಿದೆ. ಆದರೆ, ಪೊಲೀಸರು ಡಿ.ಜೆ.ಗೆ ಅವಕಾಶವಿಲ್ಲವೆಂದು ಹೇಳುತ್ತಿದ್ದಾರೆ.

ಮೂರ್ತಿ ಪ್ರತಿಷ್ಠಾಪಿಸಿರುವ ಪೆಂಡಾಲ್‌ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಂಸದ ಬಸವರಾಜ ಬೊಮ್ಮಾಯಿ, ಶಾಸಕ ಯಾಸೀರ ಅಹ್ಮದ್ ಖಾನ್ ಪಠಾಣ ಸಹ ಭೇಟಿ ನೀಡಿದ್ದರು. ಅವರ ಬಳಿ ಮಾತನಾಡಿದ್ದ ಮಂಡಳಿಯವರು, ‘ನಮಗೆ ಡಿ.ಜೆ. ಅನುಮತಿ ಕೊಡಿಸಿ’ ಎಂದು ಒತ್ತಾಯಿಸಿದ್ದರು. ಆದರೆ, ಯಾರೊಬ್ಬರೂ ಡಿ.ಜೆ.ಗೆ ಅನುಮತಿ ಕೊಡಿಸದಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

ADVERTISEMENT

ಡಿ.ಜೆ.ಗೆ ಅನುಮತಿ ಸಿಗದಿದ್ದರಿಂದ ಯಾವ ರೀತಿ ಮೂರ್ತಿ ವಿಸರ್ಜನೆ ಮಾಡಬೇಕು? ಎಂಬುದರ ಬಗ್ಗೆ ತೀರ್ಮಾನಿಸಲು ಮಂಡಳಿಯವರು ಮಂಗಳವಾರ (ಅ. 7) ಸಭೆ ಕರೆದಿದ್ದಾರೆ. ಮಂಡಳಿ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಭೆಯಲ್ಲಿ ಎಲ್ಲರ ಅಭಿಪ್ರಾಯ ಪಡೆದುಕೊಂಡು ತೀರ್ಮಾನ ಕೈಗೊಳ್ಳುವುದಾಗಿ ಮಂಡಳಿಯವರು ತಿಳಿಸಿದ್ದಾರೆ.

21ನೇ ದಿನದ ಗಣಪತಿ: ಆಗಸ್ಟ್ 27ರಂದು ಹಿಂದೂ ಮಹಾಸಭಾ ಗಣೇಶ ಮೂರ್ತಿ ಪ್ರತಿಷ್ಠಾಪನೆಯಾಗಿದೆ. ಈ ಗಣಪತಿ ಮೂರ್ತಿಯನ್ನು ಸೆ. 17ರಂದು 21ನೇ ದಿನಕ್ಕೆ ವಿಸರ್ಜನೆ ಮಾಡಬೇಕಿತ್ತು. 42 ದಿನವಾದರೂ ವಿಸರ್ಜನೆ ತೀರ್ಮಾನ ಕೈಗೊಂಡಿಲ್ಲ.

‘ಹಿಂದೂಗಳ ಹಬ್ಬವಾದ ಗಣೇಶ ವಿಸರ್ಜನೆಗೆ ಯಾವುದೇ ನಿರ್ಬಂಧ ಹಾಗೂ ಕಡಿವಾಣ ಹಾಕಬಾರದು. ಪ್ರತಿ ವರ್ಷವೂ ಡಿ.ಜೆ. ಸಮೇತ ವಿಸರ್ಜನೆ ಮಾಡಿದ್ದೇವೆ. ಈ ವರ್ಷವೂ ಡಿ.ಜೆ.ಗೆ  ಅವಕಾಶ ನೀಡಬೇಕು’ ಎಂದು ಮಂಡಳಿಯವರು ಆಗ್ರಹಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.