ADVERTISEMENT

ಶೋಷಿತರ ದನಿಯಾಗಿದ್ದ ಗೀತ: ಸಾಹಿತ್ಯ ಪರಿಷತ್ ಶ್ರದ್ಧಾಂಜಲಿ

​ಪ್ರಜಾವಾಣಿ ವಾರ್ತೆ
Published 29 ಜೂನ್ 2020, 15:48 IST
Last Updated 29 ಜೂನ್ 2020, 15:48 IST
ಗೀತಾ ನಾಗಭೂಷಣ
ಗೀತಾ ನಾಗಭೂಷಣ    

ಹಾವೇರಿ: ನಾಡಿನ ಹಿರಿಯ ಲೇಖಕಿ ಗೀತಾ ನಾಗಭೂಷಣ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮ ಇಲ್ಲಿಯ ಗೆಳೆಯರ ಬಳಗದ ಶಾಲಾ ಆವರಣದಲ್ಲಿ ಸೋಮವಾರ ನಡೆಯಿತು.

ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತಿನ ಆಯ್ದ ಪದಾಧಿಕಾರಿಗಳು ಶ್ರದ್ಧಾಂಜಲಿ ಸಲ್ಲಿಸಿ, ಬಡವರ ಬದುಕನ್ನು ತುಂಬ ಸೂಕ್ಷ್ಮ ಮತ್ತು ವ್ಯಾಪಕವಾಗಿ ಕನ್ನಡ ಸಾಹಿತ್ಯದಲ್ಲಿ ತಂದ ಕೀರ್ತಿ ಗೀತಾ ನಾಗಭೂಷಣರಿಗೆ ಸಲ್ಲುತ್ತದೆ ಎಂದು ಅಭಿಪ್ರಾಯಪಟ್ಟರು.

ಹಾವೇರಿಯಲ್ಲಿ 2010ರಲ್ಲಿ ನಡೆದ ರಾಜ್ಯ ಮಟ್ಟದ ಕದಳಿ ಸಮಾವೇಶದ ಅಧ್ಯಕ್ಷರಾಗಿ ಎಲ್ಲರೊಂದಿಗೆ ಬೆರೆತು ಭಾಷಣ ಮಾಡಿದ್ದ ಗೀತಾ ಅವರನ್ನು ಸಭೆ ನೆನಪಿಸಿಕೊಂಡಿತು. ಸರಳ ಸಜ್ಜನಿಕೆಯ ಯಾವ ಅಹಂಕಾರವಿಲ್ಲದ ಅವರ ನಡೆನುಡಿ ಮತ್ತು ಹೃದಯವಂತಿಕೆಯ ಬರವಣಿಗೆ ಕನ್ನಡ ಸಾಹಿತ್ಯದಲ್ಲಿ ಶಾಶ್ವತವಾಗಿ ಉಳಿಯುತ್ತವೆ. ಅವರೊಬ್ಬ ಗಟ್ಟಿ ಮತ್ತು ದಿಟ್ಟ ಲೇಖಕಿ ಎಂದು ಅನೇಕರು ನುಡಿದರು.

ADVERTISEMENT

ತುಂಬ ಸರಳವಾಗಿ ಅಂತರ ಕಾಯ್ದುಕೊಂಡು ನಡೆದ ಶ್ರದ್ಧಾಂಜಲಿಯ ಅಧ್ಯಕ್ಷತೆಯನ್ನು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಯ್ಯ ಹಿರೇಮಠ ವಹಿಸಿ ಕನ್ನಡದ ಮಹಿಳಾ ದಿಟ್ಟ ದನಿಯೊಂದು ಅಸ್ತಂಗತವಾಯಿತು ಎಂದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವೈ.ಬಿ. ಆಲದಕಟ್ಟಿ, ಗೆಳೆಯರ ಬಳಗದ ಅಧ್ಯಕ್ಷರಾದ ವಿ.ಎಂ. ಪತ್ರಿ, ಶರರಣ ಸಾಹಿತ್ಯ ಪರಿಷತ್ತಿನ ಎಸ್.ಆರ್. ಹಿರೇಮಠ, ಡಾ.ವಿ.ಪಿ. ದ್ಯಾಮಣ್ಣನವರ, ಈರಣ್ಣ ಬೆಳವಡಿ, ಹಿರಿಯ ಸಾಹಿತಿಗಳಾದ ಸಿ.ಎಸ್. ಮರಳಿಹಳ್ಳಿ, ಸತೀಶ ಕುಲಕರ್ಣಿ ಮಾತನಾಡಿದರು. ಸಭೆಯ ಕೊನೆಯಲ್ಲಿ ಮೌನ ಆಚರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.