ADVERTISEMENT

ಕನ್ನಡ ಭಾಷೆ ಬಳಕೆಗೆ ಆದ್ಯತೆ ನೀಡಿ

ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸಲಹೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 17:34 IST
Last Updated 8 ಫೆಬ್ರುವರಿ 2021, 17:34 IST
ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ
ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ   

ಹಾವೇರಿ: ಆಡಳಿತ ಎಲ್ಲ ವಲಯಗಳಲ್ಲಿ ಕನ್ನಡ ಭಾಷೆಯಲ್ಲಿ ಪತ್ರ ವ್ಯವಹಾರ, ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಆದ್ಯತೆ, ಶಾಲೆಗಳಲ್ಲಿ ಕನ್ನಡ ಕಲಿಕೆಗೆ ಆದ್ಯತೆ, ಬ್ಯಾಂಕ್ ಸೇರಿದಂತೆ ಖಾಸಗಿ ಸಂಸ್ಥೆಗಳಲ್ಲಿ ಕನ್ನಡ ಭಾಷಾ ಬಳಕೆಗೆ ಆದ್ಯತೆ ನೀಡಲು ಅಗತ್ಯ ಕ್ರಮವಹಿಸಲು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸಲಹೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಇಲಾಖೆಗಳಲ್ಲಿ ಕನ್ನಡ ಭಾಷಾ ಬಳಕೆ ಹಾಗೂ ಕನ್ನಡ ಕಾಯಕ ವರ್ಷ ಆಚರಣೆ ಕುರಿತಂತೆ ಪರಿಶೀಲನೆ ನಡೆಸಿದರು.

ಬ್ಯಾಂಕ್‍ಗಳಲ್ಲಿ ಕನ್ನಡದಲ್ಲಿ ವ್ಯವಹಾರ ಕುರಿತಂತೆ ಬ್ಯಾಂಕರ್ಸ್ ಸಭೆಯಲ್ಲಿ ಚರ್ಚಿಸಲಾಗುವುದು. ತಾಲ್ಲೂಕುವಾರು ಕನ್ನಡ ಜಾಗೃತಿ ಸಮಿತಿ ರಚನೆಗೆ ಕ್ರಮವಹಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದರು.

ADVERTISEMENT

ಜಿಲ್ಲೆಯ ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಎಲ್ಲ ಶಾಲೆಗಳಲ್ಲೂ ಕನ್ನಡ ಬೋಧನೆ-ಕಲಿಕೆ ಕುರಿತಂತೆ ಕ್ರಮಕೈಗೊಳ್ಳಬೇಕು. ಖಾಸಗಿ ಶಾಲೆಗಳಲ್ಲಿ ಕನ್ನಡ ಭಾಷೆ ಕಲಿಕೆ ಕುರಿತಂತೆ ಪರಿಶೀಲನೆ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕನ್ನಡ ಜಾಗೃತಿ ಸಮಿತಿ ಸದಸ್ಯರು ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕಚೇರಿಗಳು ಹಾಗೂ ಖಾಸಗಿ ವಾಣಿಜ್ಯ ಮಳಿಗೆಗಳಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡುವ ಕುರಿತಂತೆ ನಗರಸಭೆ ವತಿಯಿಂದ ಕ್ರಮವಹಿಸುವಂತೆ ಮನವಿ ಮಾಡಿಕೊಂಡರು.

ನವೆಂಬರ್‌ 2020ರಿಂದ ಅಕ್ಟೋಬರ್ -2021ರವರೆಗೆ ಕನ್ನಡ ಕಾಯಕ ವರ್ಷವಾಗಿ ಘೋಷಣೆ ಮಾಡಲಾಗಿದೆ. ಕೇಂದ್ರ ಸರ್ಕಾರಿ ಇಲಾಖೆಯಲ್ಲಿ ತ್ರಿಭಾಷಾ ಸೂತ್ರದನ್ವಯ ಸ್ಥಳೀಯ ಭಾಷೆಯಾದ ಕನ್ನಡದಲ್ಲಿ ಪತ್ರ ವ್ಯವಹಾರ, ಅಂತರ್ಜಾಲ ತಾಣದಲ್ಲಿ ಕನ್ನಡ ತಂತ್ರಾಂಶ ಬಳಕೆ, ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಪತ್ರ ವ್ಯವಹಾರದಲ್ಲಿ ನೂರರಷ್ಟು ಕನ್ನಡ ಬಳಕೆ, ಕಾರ್ಯಕ್ರಮಗಳು ಕನ್ನಡಲ್ಲೇ ಇರಬೇಕು ಎಂದು ತಿಳಿಸಿದರು.

ಖಾಸಗಿ ಉದ್ಯಮ, ಸಂಘ-ಸಂಸ್ಥೆಗಳಲ್ಲಿ ನಿತ್ಯದ ಪತ್ರ ವ್ಯವಹಾರಗಳು, ಚಟುವಟಿಕೆಗಳು ಕನ್ನಡ ಭಾಷೆಯಲ್ಲಿ ನಡೆಯಬೇಕು. ಶಿಕ್ಷಣ, ಉದ್ಯೋಗ ರಂಗ, ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಭಾಷೆಗೆ ಆದ್ಯತೆ, ಗ್ರಾಮ ಪಂಚಾಯಿತಿಯಿಂದ ಜಿಲ್ಲಾ ಮಟ್ಟದ ಎಲ್ಲ ಕಚೇರಿಗಳಲ್ಲಿ ಕನ್ನಡ ಬಳಕೆಗೆ ಆದ್ಯತೆ ನೀಡುವಂತೆ ಮನವಿ ಮನವಿ ಮಾಡಿಕೊಂಡರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಏಕನಾಥ ಭಾನುವಳ್ಳಿ, ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್‌, ಡಿಡಿಪಿಐ ಅಂದಾನೆಪ್ಪ ವಡಗೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ, ಕನ್ನಡ ಜಾಗೃತಿ ಸಮಿತಿಯ ಸದಸ್ಯರಾದ ಸಾಹಿತಿ ಸಂಕಮ್ಮ ಸಂಕಣ್ಣನವರ, ಅಶೋಕ ಹಳ್ಳಿಯವರ, ಚಂದ್ರಪ್ಪ ಬಾರಂಗಿ, ಪ್ರಭು ಲಿಂಬಕ್ಕನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.