ಕಬ್ಬು ಕಟಾವು (ಸಾಂದರ್ಭಿಕ ಚಿತ್ರ)
– ಪ್ರಜಾವಾಣಿ ಚಿತ್ರ
ಹಾವೇರಿ: ರೈತರಿಂದ ಖರೀದಿಸಿದ್ದ ಕಬ್ಬಿನ ಬಾಕಿ ಬಿಲ್ ಪಾವತಿ ಮಾಡುವಂತೆ ಸಂಗೂರಿನ ಜಿ.ಎಂ. ಶುಗರ್ಸ್ ಮತ್ತು ಎನರ್ಜಿ ಕಂಪನಿ ಕಾರ್ಖಾನೆಗೆ ಹಾವೇರಿ ತಹಶೀಲ್ದಾರ್ ಶರಣಮ್ಮ ಅವರು ನೋಟಿಸ್ ನೀಡಿದ್ದಾರೆ.
ಸಕ್ಕರೆ ಅಭಿವೃದ್ಧಿ ಆಯುಕ್ತ ಆದೇಶವನ್ನು ಉಲ್ಲೇಖಿಸಿ ಜಿಲ್ಲಾಧಿಕಾರಿಯವರ ಸೂಚನೆ ಮೇರೆಗೆ ಕಾರ್ಖಾನೆಗೆ ನೋಟಿಸ್ ಕಳುಹಿಸಿರುವ ತಹಶೀಲ್ದಾರ್, ನಿಗದಿತ ದಿನದೊಳಗೆ ಉತ್ತರ ನೀಡುವಂತೆ ತಿಳಿಸಿದ್ದಾರೆ.
2023–24ನೇ ಸಾಲಿನಲ್ಲಿ ಪ್ರತಿ ಟನ್ ಕಬ್ಬಿಗೆ ₹ 2923 ಎಫ್‌ಆರ್‌ಪಿ ದರ ನಿಗದಿಪಡಿಸಲಾಗಿತ್ತು. ಅದೇ ಅವಧಿಯಲ್ಲಿ 3,06,030 ಮೆ.ಟನ್ ಕಬ್ಬು ಅರೆಯಲಾಗಿತ್ತು. ಕಬ್ಬು ನೀಡಿದ್ದ ರೈತರಿಗೆ ₹ 89.45 ಕೋಟಿ ಪಾವತಿಸಬೇಕಿತ್ತು. ಪೂರ್ತಿ ಹಣ ನೀಡಲು ವಿಫಲವಾಗಿದ್ದ ಕಾರ್ಖಾನೆ, ₹ 18.46 ಕೋಟಿ ಬಾಕಿ ಉಳಿಸಿಕೊಂಡಿತ್ತು. ಬಾಕಿ ಇರುವ ಬಿಲ್ ಮೊತ್ತವನ್ನು ಶೇ 15ರಷ್ಟು ಬಡ್ಡಿ ಸಮೇತ ರೈತರಿಗೆ ಪಾವತಿ ಮಾಡುವಂತೆ ಸಕ್ಕರೆ ಅಭಿವೃದ್ಧಿ ಆಯುಕ್ತರು ಜಿಲ್ಲಾಧಿಕಾರಿಗೆ 2024ರ ಅಕ್ಟೋಬರ್ 22ರಂದು ಪತ್ರ ಬರೆದಿದ್ದರು. ಇದಾದ ನಂತರ ಕಾರ್ಖಾನೆಯವರು, ನಿಗದಿತ ಸಮಯದಲ್ಲಿ ಬಿಲ್ ಪಾವತಿ ಮಾಡಿರಲಿಲ್ಲ. ತಡವಾಗಿ ಬಿಲ್ ಪಾವತಿ ಮಾಡಿರುವುದಾಗಿ ಮೂಲಗಳು ತಿಳಿಸಿವೆ.
ನೋಟಿಸ್ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಶರಣಮ್ಮ, ‘₹ 18.46 ಕೋಟಿ ಬಾಕಿ ಬಿಲ್‌ನ್ನು ಶೇ 15ರಷ್ಟು ಬಡ್ಡಿ ಸಮೇತ ಏಳು ದಿನಗಳ ಒಳಗಾಗಿ ಪಾವತಿಸುವಂತೆ ಕಾರ್ಖಾನೆಗೆ ನೋಟಿಸ್ ನೀಡಲಾಗಿದೆ. ಅವರು ನೀಡುವ ಉತ್ತರ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.
ಬಿಲ್ ತ್ವರಿತ ಪಾವತಿಗೆ ಆಗ್ರಹ: ‘ಪ್ರತಿ ವರ್ಷವೂ ಕಾರ್ಖಾನೆಯಿಂದ ಬಿಲ್ ಪಾವತಿಸಲು ವಿಳಂಬವಾಗುತ್ತಿದೆ. ಇದರ ವಿರುದ್ಧ ನಿರಂತರವಾಗಿ ಹೋರಾಟ ನಡೆಸಲಾಗುತ್ತಿದ್ದು, ಸಚಿವರು, ಆಯುಕ್ತರು ಹಾಗೂ ಜಿಲ್ಲಾಧಿಕಾರಿಗೂ ಮನವಿ ಸಲ್ಲಿಸಲಾಗುತ್ತಿದೆ. ಇದರ ಫಲವಾಗಿ ತಹಶೀಲ್ದಾರ್ ಅವರು ಇದೀಗ ಕಾರ್ಖಾನೆಗೆ ನೋಟಿಸ್ ನೀಡಿದ್ದಾರೆ’ ಎಂದು ಕರ್ನಾಟಕ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತದ ನಿರ್ದೇಶಕರೂ ಆಗಿರುವ ರಾಜ್ಯ ಕಬ್ಬು ಬೆಳೆಗಾರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪೂರ ಹೇಳಿದರು.
‘2023–24ರ ಆದೇಶ ಪ್ರತಿಯನ್ನೇ ಅಧಿಕಾರಿಗಳು ಮುಚ್ಚಿಟ್ಟಿದ್ದರು. ಕರ್ನಾಟಕ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತದ ಕಚೇರಿಯಲ್ಲಿ ಇತ್ತೀಚೆಗೆ ಪರಿಶೀಲನೆ ಸಂದರ್ಭದಲ್ಲಿ ಪತ್ರ ಸಿಕ್ಕಿದೆ. ಇದೇ ಪತ್ರವನ್ನು ಜಿಲ್ಲಾಧಿಕಾರಿಗೆ ನೀಡಲಾಗಿತ್ತು. ಕಾರ್ಖಾನೆಗೆ ಸೇರಿದ ಸಕ್ಕರೆ, ಇತರೆ ಉಪ ಉತ್ಪನ್ನಗಳನ್ನು ಮಾರಾಟ ಮಾಡಿ ಬಾಕಿ ವಸೂಲಿ ಮಾಡಲು ಹಾಗೂ ದಾಸ್ತಾನು ಲಭ್ಯವಿಲ್ಲದಿದ್ದರೆ ಚರ–ಸ್ತಿರಾಸ್ತಿ ಹರಾಜು ಮಾಡಲು ಅವಕಾಶವಿದೆ. ಜಿಲ್ಲಾಧಿಕಾರಿಯವರು ಸೂಕ್ತ ಕ್ರಮ ಕೈಗೊಂಡು ರೈತರ ಕಬ್ಬಿನ ಬಾಕಿ ಬಿಲ್‌ನ್ನು ಬಡ್ಡಿ ಸಮೇತ ಕೊಡಿಸಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.