
ಹಾವೇರಿ: ಸರ್ಕಾರಿ ಹಾಗೂ ಖಾಸಗಿ ಜಾಗದಲ್ಲಿ ಹಲವು ವರ್ಷಗಳಿಂದ ವಾಸವಿದ್ದರೂ ಮಾಲೀಕತ್ವದಿಂದ ವಂಚಿತರಾಗಿದ್ದ 1 ಲಕ್ಷಕ್ಕೂ ಹೆಚ್ಚಿನ ಅರ್ಹ ಕುಟುಂಬಗಳಿಗೆ ರಾಜ್ಯ ಸರ್ಕಾರವು ಇತ್ತೀಚೆಗಷ್ಟೇ ಹಕ್ಕುಪತ್ರ ವಿತರಿಸಿದೆ. ಸರ್ಕಾರದ ಅವಕಾಶವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಜಿಲ್ಲೆಯ ಕೆಲವರು, ಸರ್ಕಾರದ ಜಾಗದಲ್ಲಿ ಅಕ್ರಮವಾಗಿ ಶೆಡ್ ನಿರ್ಮಿಸಿಕೊಂಡು ಮಾಲೀಕತ್ವದ ಹಕ್ಕು ಪಡೆಯಲು ಪ್ರಯತ್ನಿಸುತ್ತಿದ್ದಾರೆ.
ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಅರೇಮಲ್ಲಾಪುರ ಗ್ರಾಮದಲ್ಲಿ ನಡೆದಿರುವ ಘಟನೆಯಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ, ಸರ್ಕಾರದ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಶೆಡ್‌ಗಳನ್ನು ತೆರವುಗೊಳಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲು ಮುಂದಾಗಿದೆ.
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೇ, ಅರ್ಹರಿಗೆ ಹಕ್ಕುಪತ್ರ ನೀಡುತ್ತಿದೆ. 1 ಲಕ್ಷಕ್ಕೂ ಹೆಚ್ಚಿನ ಕುಟುಂಬಗಳಿಗೆ ಹಾವೇರಿಯಲ್ಲಿ ಫೆ.14ರಂದು ಆಯೋಜಿಸಿದ್ದ ‘ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ’ದಲ್ಲಿ ಹಕ್ಕುಪತ್ರ ವಿತರಿಸಲಾಗಿದೆ. ಜಿಲ್ಲೆಯಲ್ಲಿಯೂ 20 ಸಾವಿರಕ್ಕೂ ಅಧಿಕ ಜನರಿಗೆ ಹಕ್ಕುಪತ್ರ ನೀಡಲಾಗಿದೆ. ಮಾಲೀಕತ್ವದ ಹಕ್ಕಿಗಾಗಿ ಹಲವು ವರ್ಷಗಳಿಂದ ಕಾಯುತ್ತಿದ್ದ ಜನರು, ಹಕ್ಕುಪತ್ರ ಕೈಗೆ ಸಿಗುತ್ತಿದ್ದಂತೆ ಹರ್ಷಗೊಂಡಿದ್ದಾರೆ.
‘ಸರ್ಕಾರಿ ಜಾಗದಲ್ಲಿ ಹಲವು ವರ್ಷಗಳಿಂದ ನೆಲೆಸಿದ್ದ ತಮ್ಮೂರಿನ ವ್ಯಕ್ತಿಗಳಿಗೆ ಸರ್ಕಾರ ಹಕ್ಕುಪತ್ರ ನೀಡಿದೆ’ ಎಂದು ತಿಳಿದಿರುವ ಗ್ರಾಮದ ಕೆಲವರು, ಖಾಲಿ ಇರುವ ಸರ್ಕಾರದ ಜಾಗವನ್ನು ಅತಿಕ್ರಮಣ ಮಾಡಿ ಶೆಡ್ ನಿರ್ಮಿಸಿ ಹೊಸದಾಗಿ ಹಕ್ಕುಪತ್ರ ಪಡೆಯಲು ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ.
‘ಸರ್ಕಾರದ ಜಾಗದಲ್ಲಿರುವ ಶೆಡ್‌ಗೆ ಹಕ್ಕುಪತ್ರ ನೀಡಲು ಹಾಗೂ ಇ–ಸ್ವತ್ತು ಮಾಡಲು ಅವಕಾಶವಿಲ್ಲ’ ಎಂದು ಅಧಿಕಾರಿಗಳು ಉತ್ತರ ನೀಡುತ್ತಿದ್ದಾರೆ. ಅಧಿಕಾರಿಗಳ ವಿರುದ್ಧವೇ ಹರಿಹಾಯುತ್ತಿರುವ ಕೆಲವರು, ಶಾಸಕರು ಹಾಗೂ ಇತರೆ ಜನಪ್ರತಿನಿಧಿಗಳ ಹೆಸರು ಹೇಳಿ ಬೆದರಿಸುತ್ತಿದ್ದಾರೆ. ‘ಶಾಸಕರೇ ಅರ್ಜಿ ಕೊಡುವಂತೆ ಹೇಳುತ್ತಿದ್ದಾರೆ. ನೀವು ಏಕೆ ಅರ್ಜಿ ಪಡೆಯುತ್ತಿಲ್ಲ’ ಎಂದು ಅಧಿಕಾರಿಗಳನ್ನು ಪ್ರಶ್ನಿಸುತ್ತಿದ್ದಾರೆ. ಶಾಸಕರಿಂದಲೂ ಕರೆ ಮಾಡಿಸುತ್ತಿದ್ದಾರೆ.
‘ಜಾಗ ಹಾಗೂ ನಿವೇಶನ ರಹಿತ ಅರ್ಹರಿಗೆ ಸರ್ಕಾರ ಭೂ ಗ್ಯಾರಂಟಿ ನೀಡುತ್ತಿದೆ. ಸರ್ಕಾರದ ಉದ್ದೇಶ ಜನಪರವಾಗಿದೆ. ಸರ್ಕಾರದ ಅವಕಾಶವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಕೆಲವರು, ಸರ್ಕಾರದ ಜಾಗದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿ ಹಲವು ವರ್ಷಗಳಿಂದ ವಾಸಿಸುತ್ತಿರುವುದಾಗಿ ವಾದಿಸುತ್ತಿದ್ದಾರೆ. ಇಂಥ ಶೆಡ್‌ಗಳನ್ನು ವಸತಿ ಎಂದು ಪರಿಗಣಿಸಲು ಬರುವುದಿಲ್ಲವೆಂದು ಹೇಳಿದರೆ, ಶಾಸಕರ ಹೆಸರಿನಲ್ಲಿ ಬೆದರಿಸುತ್ತಿದ್ದಾರೆ’ ಎಂದು ರಾಣೆಬೆನ್ನೂರು ತಾಲ್ಲೂಕಿನ ಅಧಿಕಾರಿಯೊಬ್ಬರು ಅಳಲು ತೋಡಿಕೊಂಡರು.
ರಾತ್ರೋರಾತ್ರಿ ಶೆಡ್ ನಿರ್ಮಾಣಕ್ಕೆ ತಯಾರಿ: ಅರೇಮಲ್ಲಾಪುರ ಗ್ರಾಮದ ಹೊರವಲಯದಲ್ಲಿರುವ ಜಾಗವನ್ನು ಕಂದಾಯ ಗ್ರಾಮವೆಂದು ಘೋಷಿಸಿ, ಕೆಲವರಿಗೆ ಹಕ್ಕುಪತ್ರ ನೀಡಲಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು, ಗ್ರಾಮದಲ್ಲಿರುವ ಸರ್ಕಾರದ ಜಾಗದಲ್ಲಿ ರಾತ್ರೋರಾತ್ರಿ ಕಂಬ ನಿಲ್ಲಿಸಿ ಶೆಡ್ ನಿರ್ಮಿಸಲು ಪ್ರಯತ್ನಿಸಿ ಜಿಲ್ಲಾಡಳಿತಕ್ಕೆ ಸಿಕ್ಕಿಬಿದ್ದಿದ್ದಾರೆ.
ಸರ್ಕಾರಿ ಜಾಗ ಅತಿಕ್ರಮಣದ ಬಗ್ಗೆ ಫೋಟೊ ಸಮೇತ ಮಾಹಿತಿ ಬರುತ್ತಿದ್ದಂತೆ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರು, ರಾಣೆಬೆನ್ನೂರು ತಹಶೀಲ್ದಾರ್ ಅವರನ್ನು ಸ್ಥಳಕ್ಕೆ ಕಳುಹಿಸಿ ಕಂಬಗಳನ್ನು ತೆರವು ಮಾಡಿಸಿದ್ದಾರೆ. ಜೊತೆಗೆ, ಸ್ಥಳೀಯರಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.
‘ಅರೇಮಲ್ಲಾಪುರದ ಸರ್ಕಾರಿ ಜಾಗದಲ್ಲಿ ಕಂಬಗಳನ್ನು ನಿಲ್ಲಿಸಿದ್ದ ವಿಷಯ ಗೊತ್ತಾಗುತ್ತಿದ್ದಂತೆ, ತೆರವು ಮಾಡಿಸಲಾಗಿದೆ. ಒಂದೇ ಜಾಗದಲ್ಲಿ ಹಲವು ವರ್ಷಗಳಿಂದ ವಾಸವಿದ್ದರೂ ಮಾಲೀಕತ್ವದ ಹಕ್ಕಿನಿಂದ ವಂಚಿತರಾದ ಅರ್ಹ ಬಡವರಿಗೆ ಸರ್ಕಾರ ಹಕ್ಕುಪತ್ರ ನೀಡುವ ಯೋಜನೆ ರೂಪಿಸಿದೆ. ಆದರೆ, ಕೆಲವರು ಸರ್ಕಾರದ ಆಸ್ತಿಯನ್ನು ಅತಿಕ್ರಮಣ ಮಾಡಿ ಹಕ್ಕುಪತ್ರ ಪಡೆಯಬಹುದೆಂದು ತಿಳಿದಿದ್ದಾರೆ. ಇದಕ್ಕೆ ಅವಕಾಶವಿಲ್ಲ. ಶೆಡ್ ನಿರ್ಮಿಸುವುದು ಕಾನೂನುಬಾಹಿರ. ಇಂಥ ವರ್ತನೆ ತೋರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ತಿಳಿಸಿದರು.
‘ಸರ್ಕಾರದ ಆಸ್ತಿಯನ್ನು ಜನರೂ ರಕ್ಷಿಸಬೇಕು. ಯಾರಾದರೂ ಅತಿಕ್ರಮಣ ಮಾಡಿದರೆ, ಅದನ್ನು ಪ್ರಶ್ನಿಸಿ ತಡೆಯಬೇಕು. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು. ಅತಿಕ್ರಮಣ ಮಾಡುವವರ ಬಗ್ಗೆ ಲಿಖಿತ ದೂರು ನೀಡಿದರೆ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲು ಅನುಕೂಲವಾಗುತ್ತದೆ’ ಎಂದರು.
ಯಾವುದಾದರೂ ಜಾಗದಲ್ಲಿ ಏಕಾಏಕಿ ಶೆಡ್ ನಿರ್ಮಿಸಿ ಹಕ್ಕುಪತ್ರ ಕೇಳಿದರೆ ಸಿಗುವುದಿಲ್ಲ. ಅದಕ್ಕೆಂದು ಹಲವು ನಿಯಮಗಳಿವೆ. ಅರ್ಹರಿಗೆ ಮಾತ್ರ ಹಕ್ಕುಪತ್ರ ಸಿಗುತ್ತದೆ ಹೊರತು ಅನರ್ಹರಿಗಲ್ಲವಿಜಯ ಮಹಾಂತೇಶ ಜಿಲ್ಲಾಧಿಕಾರಿ
‘ಜಾಗಕ್ಕಾಗಿ ಜನರಿಂದ ಅರ್ಜಿ ಸಲ್ಲಿಕೆ
’ ‘ಅರೇಮಲ್ಲಾಪುರದಲ್ಲಿರುವ ಸರ್ಕಾರಿ ಜಾಗದಲ್ಲಿ ಕೆಲವರು ಕಂಬಗಳನ್ನು ನಿಲ್ಲಿಸಿ ಶೆಡ್ ನಿರ್ಮಿಸಲು ತಯಾರಿ ನಡೆಸಿದ್ದರು. ಈ ಪೈಕಿ ಕೆಲವರು ಹಕ್ಕುಪತ್ರ ಕೊಡಿಸುವಂತೆ ಅರ್ಜಿ ಸಲ್ಲಿಸಿದ್ದಾರೆ. ಅದನ್ನು ಸ್ವೀಕರಿಸಿದ್ದೇವೆ’ ಎಂದು ಅರೇಮಲ್ಲಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಕೊಟ್ರಯ್ಯ ಅಜ್ಜವಾಡಿಮಠ ತಿಳಿಸಿದರು. ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ‘ಇಂಥ ಅತಿಕ್ರಮಣದ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳು ಗಮನಹರಿಸುತ್ತಾರೆ’ ಎಂದರು. ‘ಜಾಗವಿಲ್ಲ ಮನೆಯಿಲ್ಲವೆಂದು ಜನರು ಅರ್ಜಿ ಕೊಟ್ಟಿದ್ದಾರೆ. ಅರ್ಜಿ ಬೇಡವೆಂದು ಹೇಳಲು ಬರುವುದಿಲ್ಲ. ಹೀಗಾಗಿ ಅರ್ಜಿ ಪಡೆದುಕೊಂಡಿದ್ದೇವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.