ADVERTISEMENT

ಹಾವೇರಿ: ಅನುದಾನ ವಾಪಸ್‌, ಅಧಿಕಾರಿಗಳೇ ಹೊಣೆ- ಬಸನಗೌಡ ದೇಸಾಯಿ

ಶಾಲಾ–ಅಂಗನವಾಡಿ ಕಟ್ಟಡ ದುರಸ್ತಿ ಕಾರ್ಯ ವಿಳಂಬ: ಬಸನಗೌಡ ದೇಸಾಯಿ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2020, 19:30 IST
Last Updated 17 ಆಗಸ್ಟ್ 2020, 19:30 IST
ಹಾವೇರಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಜಿ.ಪಂ.ಅಧ್ಯಕ್ಷ ಬಸನಗೌಡ ದೇಸಾಯಿ ಅಧ್ಯಕ್ಷತೆಯಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು
ಹಾವೇರಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಜಿ.ಪಂ.ಅಧ್ಯಕ್ಷ ಬಸನಗೌಡ ದೇಸಾಯಿ ಅಧ್ಯಕ್ಷತೆಯಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು   

ಹಾವೇರಿ: ಸರ್ಕಾರದಿಂದ ಬಿಡುಗಡೆಯಾದ ಅನುದಾನವು ಅನುಷ್ಠಾನಾಧಿಕಾರಿಗಳ ನಿರ್ಲಕ್ಷ್ಯದಿಂದ ಸರ್ಕಾರಕ್ಕೆ ವಾಪಸ್‌ ಹೋಗಿ ಜಿಲ್ಲೆಯ ಅಭಿವೃದ್ಧಿ ಕುಂಠಿತಗೊಂಡರೆ ಆಯಾ ಇಲಾಖಾ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದುಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸನಗೌಡ ದೇಸಾಯಿ ಖಡಕ್ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ನೀರಾವರಿ ಕಾಮಗಾರಿಗಳು, ಪಿ.ಡಬ್ಲ್ಯೂ.ಡಿ., ಪಿ.ಎಂ.ಜಿ.ಎಸ್.ವೈ., ನೆರೆಯಿಂದ ಹಾನಿಯಾದ ಶಾಲಾ ಹಾಗೂ ಅಂಗನವಾಡಿ ಕಟ್ಟಡಗಳ ದುರಸ್ತಿ ಕಾರ್ಯ ವಿಳಂಬ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ ವರ್ಷ ನೆರೆ ಹಾವಳಿ ಹಾಗೂ ಅತಿವೃಷ್ಟಿಯಿಂದ ಹಾನಿಯಾದ ಶಾಲೆಗಳು ಹಾಗೂ ಅಂಗನವಾಡಿ ಕಟ್ಟಡಗಳ ದುರಸ್ತಿ ಹಾಗೂ ನಿರ್ಮಾಣಕ್ಕಾಗಿ ಅನುದಾನ ಒದಗಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ವರ್ಕ ಆರ್ಡರ್‌ ನೀಡಿದರೂ ಇನ್ನೂ ಕಾಮಗಾರಿಗಳು ಆರಂಭಿಸಿರುವುದಿಲ್ಲ. ಕೆಲ ಅಧಿಕಾರಿಗಳು ಸರ್ಕಾರ ಅನುದಾನ ಒದಗಿಸಿದರೂ ಸ್ಥಳೀಯವಾಗಿ ಸೈಟ್ ಲಭ್ಯವಿದೆಯೋ ಇಲ್ಲವೋ ಎಂದು ಪರಿಶೀಲಿಸಿದೇ ಟೆಂಡರ್ ಕರೆದಿದ್ದಾರೆ. ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಕಾಮಗಾರಿ ಆರಂಭಿಸಲು ಈ ಕಾರಣದಿಂದ ತೊಡಕಾಗಿದೆ. ಇಂತಹ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಸಿದರು.

ADVERTISEMENT

₹75 ಲಕ್ಷ ಅನುದಾನ:

ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳ ಸಣ್ಣ-ಪುಟ್ಟ ದುರಸ್ತಿ ಕಾರ್ಯ ಕೈಗೊಳ್ಳಲು ₹75 ಲಕ್ಷ ಅನುದಾನ ಒದಗಿಸಲಾಗಿದೆ. ಈ ಅನುದಾನದಲ್ಲಿ ಪ್ರತಿ ಅಂಗನವಾಡಿ ಕಟ್ಟಡಕ್ಕೆ ಕನಿಷ್ಠ ಒಂದರಿಂದ ಒಂದೂವರೆ ಲಕ್ಷ ರೂಪಾಯಿ ಅನುದಾನ ಒದಗಿಸಿ ಪೂರ್ಣ ಪ್ರಮಾಣದಲ್ಲಿ ದುರಸ್ತಿ ಕೈಗೊಳ್ಳಬೇಕು. ಕೇವಲ ₹50 ಸಾವಿರ ಅನುದಾನ ಒದಗಿಸಿದರೆ ಪೂರ್ಣ ಪ್ರಮಾಣದಲ್ಲಿ ದುರಸ್ತಿ ಸಾಧ್ಯವಿಲ್ಲ ಎಂದು ಸ್ಥಾಯಿ ಸಮಿತಿ ಸದಸ್ಯರು ಮನವಿ ಮಾಡಿಕೊಂಡರು. ನೆರೆಯಿಂದ ಹಾನಿಯಾದ ಶಾಲಾ ಕಟ್ಟಡಗಳಿಗೆ ₹5.01 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಹಾಗೂ ಶಾಲಾ ಕಾಂಪೌಂಡ್‌, ಶೌಚಾಲಯ ನಿರ್ಮಾಣಕ್ಕಾಗಿ ₹82 ಲಕ್ಷ ಒದಗಿಸಲಾಗಿದೆ ಎಂದು ಡಿಡಿಪಿಐ ಮಾಹಿತಿ ನೀಡಿದರು.

ಎಂಜಿನಿಯರ್‌ಗೆ ತರಾಟೆ:

ತುಂಗಾ ಮೇಲ್ದಂಡೆ ಯೋಜನೆಯ ಎಂಜಿನಿಯರ್‌ ಅವರನ್ನು ಸಭೆಯಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡ ಬಸವನಗೌಡ ದೇಸಾಯಿಸಿ, ಜಿಲ್ಲೆಯಲ್ಲಿ ಯಾವ ಯಾವ ಭಾಗದಲ್ಲಿ ನೀರಾವರಿ ಯೋಜನೆಗಳು ಯಾವ ಹಂತದಲ್ಲಿವೆ. ಎಷ್ಟು ಅನುದಾನ ಬಿಡುಗಡೆಯಾಗಿದೆ, ನೀರಾವರಿ ಕಾಲುವೆಗಳ ನಿರ್ವಹಣೆಗೆ ಬಿಡುಗಡೆಯಾಗಿರುವ ಅನುದಾನದ ಮಾಹಿತಿಯನ್ನು ಪೂರ್ಣ ಪ್ರಮಾಣದಲ್ಲಿ ಒದಗಿಸಬೇಕು. ಪೈಪ್‍ಲೈನ್ ಕಾಮಗಾರಿಗಳಿಂದ ರೈತರ ಬೆಳೆಹಾನಿಯ ಸಮೀಕ್ಷೆ ಮಾಡಿ ಪರಿಹಾರಕ್ಕೆ ಕ್ರಮವಹಿಸಬೇಕು ಎಂದರು.

ಯೂರಿಯಾ ಅಭಾವವಿಲ್ಲ:

ಯೂರಿಯಾ ಗೊಬ್ಬರದ ಸಮಸ್ಯೆ ಕುರಿತಂತೆ ಸಭೆಯಲ್ಲಿ ಚರ್ಚಿಸಲಾಯಿತು. ಈವರೆಗೆ 51,376 ಮೆಟ್ರಿಕ್ ಟನ್ ಗೊಬ್ಬರ ಪೂರೈಕೆಯಾಗಿದೆ. 1800 ಟನ್‍ನಷ್ಟು ಗೊಬ್ಬರ ಮಂಗಳವಾರ ಬರಲಿದ್ದು, ಮುಂದಿನ ಒಂದು ವಾರದೊಳಗೆ ಹೆಚ್ಚುವರಿಯಾಗಿ 3000 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಜಿಲ್ಲೆಗೆ ಬರಲಿದೆ. ಯೂರಿಯಾಕ್ಕೆ ಯಾವುದೇ ಅಭಾವವಿಲ್ಲ. ಜಿಲ್ಲೆಯಲ್ಲಿ ಬೆಳೆವಿಮೆ ಸಮಸ್ಯೆ ಬಹುತೇಕ ಇತ್ಯರ್ಥವಾಗಿದೆ ಎಂದು ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಸಭೆಗೆ ಮಾಹಿತಿ ಒದಗಿಸಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಗಿರಿಜವ್ವ ಬ್ಯಾಲದಹಳ್ಳಿ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಾನಂದ ವಿಶ್ವನಾಥ ಕನ್ನ ಪ್ಪಳವರ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಟಾಕನಗೌಡ ಪಾಟೀಲ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.