ಹಾವೇರಿ: ‘ಗುರುಬ್ರಹ್ಮ, ಗುರುವಿಷ್ಣು, ಗುರುದೇವೋ ಮಹೇಶ್ವರ, ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರುವೇ ನಮ:’ ಎಂಬ ಮಾತಿನಂತೆ ತಂದೆ–ತಾಯಿ, ಗುರುಗಳಿಗೆ ನಮನ ಸಲ್ಲಿಸುವ ಗುರು ಪೂರ್ಣಿಮೆಯನ್ನು ಜಿಲ್ಲೆಯಾದ್ಯಂತ ಗುರುವಾರ ಶ್ರದ್ದಾ ಭಕ್ತಿಯಿಂದ ಆಚರಿಸಲಾಯಿತು.
ಜಿಲ್ಲೆಯ ಹಲವು ದೇವಸ್ಥಾನ ಹಾಗೂ ಮಠಗಳಲ್ಲಿ ಬೆಳಿಗ್ಗೆಯಿಂದ ವಿಶೇಷ ಪೂಜೆಗಳು ನಡೆದವು. ಭಕ್ತರು ದೇವಸ್ಥಾನಗಳಿಗೆ ಹೋಗಿ, ಗುರು ಸ್ವರೂಪಿ ದೇವರಿಗೆ ನಮಿಸಿದರು.
ಇಲ್ಲಿಯ ಹುಕ್ಕೇರಿಮಠದ ಶಿವಾನುಭವ ಮಂಟಪದಲ್ಲಿ ಗುರು ಪೂರ್ಣಿಮೆ ನಿಮಿತ್ತ ಭಕ್ತರು ಸದಾಶಿವ ಸ್ವಾಮೀಜಿಯವರ ಪಾದಪೂಜೆ ಮಾಡಿದರು.
ಕನಕ ಗುರುಪೀಠದಲ್ಲೂ ಆಚರಣೆ: ಬ್ಯಾಡಗಿ ತಾಲ್ಲೂಕಿನ ಕಾಗಿನೆಲೆಯಲ್ಲಿರುವ ಮಹಾಸಂಸ್ಥಾನ ಕನಕ ಗುರುಪೀಠದಲ್ಲಿ ಬೀರೇಂದ್ರ ಕೇಶವ ತಾರಕಾನಂದಪುರಿ ಸ್ವಾಮೀಜಿಯವರ 19ನೇ ವರ್ಷದ ಪುಣ್ಯಾರಾಧನೆಯ ಗುರು ಪೂರ್ಣಿಮ ಮಹೋತ್ಸವ ನಡೆಯಿತು.
ಅಹಿಲ್ಯಾಬಾಯಿ ಹೋಳಕರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಮಹೋತ್ಸವದಲ್ಲಿ ನಿರಂಜನಾನಂದಪುರಿ ಸ್ವಾಮೀಜಿ ಅವರಿಗೆ ಭಕ್ತರು ಪುಷ್ಪ ನಮನ ಸಲ್ಲಿಸಿದರು. ಸ್ವಾಮೀಜಿಯವರಿಂದ ಆಶೀರ್ವಾದ ಪಡೆದುಕೊಂಡರು.
ಶಿರಡಿ ಸಾಯಿ ಬಾಬಾ ಮಂದಿರ: ಹಾವೇರಿಯ ಅಶ್ವಿನಿನಗರ ಹಾಗೂ ದೇವಗಿರಿ ಯಲ್ಲಾಪುರದಲ್ಲಿರುವ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಗುರು ಪೂರ್ಣಿಮೆ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
ಬೆಳಗ್ಗೆಯಿಂದಲೇ ಸಾಯಿಬಾಬಾರಿಗೆ ವಿಶೇಷ ಕಾಕಡಾರತಿ, ಕ್ಷೀರಾಭಿಷೇಕ, ಗಣಪತಿ ಪೂಜೆ, ಸತ್ಯ ನಾರಾಯಣ ಪೂಜೆ, ನೇವೇದ್ಯಾರತಿ, ಮಧ್ಯಾಹ್ನ ಅನ್ನ ಪ್ರಸಾದ ಜರುಗಿತು. ಸಂಜೆ ಧೂಪಾರತಿ, ಪಾಲಕಿ ಉತ್ಸವ ನೆರವೇರಿತು.
ಅಶ್ವಿನಿನಗರದ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಸದಾಶಿವ ಸ್ವಾಮೀಜಿ ನೇತೃತ್ವದಲ್ಲಿ ಪೂಜೆಗಳು ನಡೆದವು. ಸ್ವಾಮೀಜಿ ಪಾದಪೂಜೆಯೂ ನೆರವೇರಿತು. ಜಗದೀಶ ಬೆಟಗೇರಿ, ವಿಜಯಕುಮಾರ ಗೊಡಚಿ, ರಾಜಶೇಖರ ಕಲ್ಲಮ್ಮನವರ, ಕೆ.ಸಿ. ಪಾವಲಿ, ಅಶೋಕ ಹೊಸಮನಿ ಇದ್ದರು.
ಆಶ್ರಮ: ಹಾವೇರಿ ಹೊರವಲಯದಲ್ಲಿರುವ ಸದ್ಗುರು ಸದಾನಂದ ಮಹಾರಾಜ ಆಶ್ರಮದಲ್ಲಿಯೂ ಗುರು ಪೂರ್ಣಿಮೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಗುರುವಿನ ಭಾವಚಿತ್ರಕ್ಕೆ ಭಕ್ತರು ವಿಶೇಷ ಪುಷ್ಪ ನಮನ ಸಲ್ಲಿಸಿದರು. ಭಜನೆ ಮೂಲಕ ಗುರುವಿನ ಸ್ಮರಣೆ ಮಾಡಿದರು.
ಬಿಜೆಪಿ ಕಚೇರಿ: ನಗರದಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಗುರು ಪೂರ್ಣಿಮೆ ಆಚರಿಸಲಾಯಿತು. ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಅವರ ಪಾದಪೂಜೆ ಮಾಡಿ, ಗುರು ನಮನ ಸಲ್ಲಿಸಲಾಯಿತು.
ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ, ಶಿವರಾಜ ಸಜ್ಜನರ, ಗವಿಸಿದ್ದಪ್ಪ ದ್ಯಾಮಣ್ಣನವರ, ಸಿದ್ದರಾಜ ಕಲಕೋಟಿ, ಬಸವರಾಜ ಕಳಸೂರ, ಎನ್. ಎಂ. ಈಟೇರ, ಕೃಷ್ಣ ಸುಣಗಾರ, ನಾಗೇಂದ್ರ ಕಡಕೋಳ, ಸಂತೋಷ ಆಲದಕಟ್ಟಿ, ನಂಜುಂಡೇಶ ಕಳ್ಳೇರ, ವೆಂಕಟೇಶ ನಾರಾಯಣ ಇದ್ದರು.
ವೈಭವಲಕ್ಷ್ಮಿ ಪಾರ್ಕ್: ಹಾವೇರಿಯ ಹಾನಗಲ್ ರಸ್ತೆಯಲ್ಲಿರುವ ವೈಭವಲಕ್ಷ್ಮಿ ಪಾರ್ಕ್‌ನ ಸಾಯಿಬಾಬಾ, ಅಂಬಾಭವಾನಿ, ಗಣೇಶ ದೇವಸ್ಥಾನದಲ್ಲಿ ಗುರು ಪೂರ್ಣಿಮೆ ನಿಮಿತ್ತ ವಿಶೇಷ ಪೂಜೆ ನಡೆಯಿತು.
ಬಣ್ಣದ ಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಕ್ತದಾನ ಶಿಬಿರವೂ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.