ADVERTISEMENT

ಗುರುವಂದನಾ ಸಮಾರಂಭ ನಾಳೆಯಿಂದ

ಸಿಂದಗಿ ಮಠದ ಶಿವಬಸಯ್ಯ ಆರಾಧ್ಯಮಠಗೆ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2022, 3:57 IST
Last Updated 6 ಜುಲೈ 2022, 3:57 IST
ಶಿವಬಸಯ್ಯ ಆರಾಧ್ಯಮಠ
ಶಿವಬಸಯ್ಯ ಆರಾಧ್ಯಮಠ   

ಹಾವೇರಿ: ಸಿಂದಗಿಮಠದಲ್ಲಿ 41 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಾ ಮಠದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿರುವ ಹಾಗೂ ಕುಮಾರೇಶ್ವರ ಧಾರ್ಮಿಕ ಪಾಠಶಾಲೆಯ ಸಾವಿರಾರು ಮಕ್ಕಳಿಗೆ ವಿದ್ಯಾಧಾರೆ ಎರೆದಿರುವ ಶಿವಬಸಯ್ಯ ಆರಾಧ್ಯಮಠದ ಅವರ ಷಷ್ಠಿ ಪೂರ್ತಿ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಜುಲೈ 7 ಮತ್ತು 8ರಂದು ನಗರದ ಸಿಂದಗಿಮಠದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಗದಗ ಜಿಲ್ಲೆಯ ಭೈರನಹಟ್ಟಿಯ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಜುಲೈ 7ರಂದು ಬೆಳಿಗ್ಗೆ 7.30ಕ್ಕೆ ಷಷ್ಠಿಪೂರ್ತಿ ಪೂಜಾ ಕಾರ್ಯಕ್ರಮ, ಬೆಳಿಗ್ಗೆ 10.30ಕ್ಕೆ ಧನ್ಯೋಸ್ಮಿ ಗ್ರಂಥ ಬಿಡುಗಡೆ ಮತ್ತು ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೊಣವಿನಕೆರೆಯ ಕಾಡಸಿದ್ಧೇಶ್ವರಮಠದ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ವಹಿಸಲಿದ್ದಾರೆ. ಸಿಂದಗಿ ಮಠದಲ್ಲಿ ಧಾರ್ಮಿಕ ಅಧ್ಯಯನ ಮಾಡಿದ 60 ವರ್ಷ ಮೇಲ್ಪಟ್ಟ ಹಿರಿಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭ ‘ಭಕ್ತಿಯ ಕುಸುಮಾಂಜಲಿ’ ಧ್ವನಿಸುರುಳಿ ಬಿಡುಗಡೆಯಾಗಲಿದೆ ಎಂದು ಹೇಳಿದರು.

ಜುಲೈ 8ರಂದು ಬೆಳಿಗ್ಗೆ ಲಿಂಗೈಕ್ಯ ಶಾಂತವೀರ ಪಟ್ಟಾಧ್ಯಕ್ಷರ ಗದ್ದುಗೆಗೆ ವಿಶೇಷ ಪೂಜೆ ಮತ್ತು ಅಲಂಕಾರ ನಡೆಯಲಿದೆ. ಸಂಜೆ 6 ಗಂಟೆಗೆ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಹೋತನಹಳ್ಳಿ ಸಿಂದಗಿಮಠದ ಶಂಭುಲಿಂಗ ಪಟ್ಟಾಧ್ಯಕ್ಷರ ಸಾನ್ನಿಧ್ಯದಲ್ಲಿ ಶಿವಬಸಯ್ಯ ಆರಾಧ್ಯಮಠ ಅವರಿಗೆ ಶಿಷ್ಯಂದಿರಿಂದ ‘ಗುರುವಂದನಾ ಸಮಾರಂಭ’ ಏರ್ಪಡಿಸಲಾಗಿದೆ ಎಂದರು.

ADVERTISEMENT

ಅತಿಥಿಯಾಗಿ ಸಂಸ್ಕೃತ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಭಾಗವಹಿಸಲಿದ್ದಾರೆ. ಕೃತಾರ್ಥ ಅಭಿನಂದನಾ ಗ್ರಂಥ ಬಿಡುಗಡೆ, ‘ಭಕ್ತಿಯ ಬಾಗಿನ’ ಹಾಗೂ ‘ಸುಶಾಂತ ಸುಧೆ’ ಧ್ವನಿಸುರುಳಿಗಳು ಬಿಡುಗಡೆಯಾಗಲಿವೆ. ಈ ಕಾರ್ಯಕ್ರಮಕ್ಕೆ ನಾಡಿನ ವಿವಿಧ ಮಠಾಧೀಶರು ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಹೋತನಹಳ್ಳಿ ಸಿಂದಗಿಮಠದ ಶಂಭುಲಿಂಗ ಪಟ್ಟಾಧ್ಯಕ್ಷರು, ಸಂಸ್ಕತ ಪಾಠಶಾಲೆಯ ಮುಖ್ಯ ಶಿಕ್ಷಕ ಗೋಪಾಲಕೃಷ್ಣ ಭಟ್‌, ಸಿದ್ದಯ್ಯ ಶಾಸ್ತ್ರೀ, ವಾಗೀಶ ಶಾಸ್ತ್ರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.