ADVERTISEMENT

ಜನಸೇವೆಯ ಪವಿತ್ರ ಸಂಕಲ್ಪ ನನ್ನದು: ಶ್ರೀನಿವಾಸ ಮಾನೆ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2021, 4:44 IST
Last Updated 27 ಅಕ್ಟೋಬರ್ 2021, 4:44 IST
ಕಾಲ್ವೆಯಲ್ಲಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಮತಯಾಚಿಸಿದರು
ಕಾಲ್ವೆಯಲ್ಲಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಮತಯಾಚಿಸಿದರು   

ಹಾನಗಲ್: ಹಾನಗಲ್ ಕ್ಷೇತ್ರದ ಜನತೆಯ ಸೇವೆ ಮಾಡುವ ಪವಿತ್ರ ಸಂಕಲ್ಪ ಮಾಡಿದ್ದೇನೆ. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಜನರಿಗೆ ಮಾತು ಕೊಟ್ಟಂತೆ ಇಲ್ಲಿಯೇ ಇದ್ದು, ಜನರ ಮಧ್ಯೆ ಬದುಕಿದ್ದೇನೆ. ಜನ ಸವಾಲು- ಸಮಸ್ಯೆ ಎದುರಿಸಿದಾಗ ಅವರ ಜೊತೆ ನಿಂತಿದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಹೇಳಿದರು.

ಹಾನಗಲ್ ಉಪ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ಕ್ಷೇತ್ರದ ಇನಾಂ ನೀರಲಗಿ, ಚಿಕ್ಕೇರಿಹೊಸಳ್ಳಿ, ಆರೆಗೊಪ್ಪ, ಹುಣಶೆಟ್ಟಿಕೊಪ್ಪ, ಹಿರೇಕಣಗಿ, ಬಿದರಕೊಪ್ಪ, ಹಂದಿಹಾಳ, ಗೊಟಗೋಡಿ, ಮನೋಹರ ನಗರ, ಕಾಲ್ವೆಯಲ್ಲಾಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಮತಯಾಚಿಸಿ ಮಾತನಾಡಿದರು.

ನನ್ನ ಸೇವೆಯಲ್ಲಿ ಸ್ವಾರ್ಥ ಹುಡುಕುವರು ಹುಡುಕಲಿ, ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ಕ್ಷೇತ್ರದ ಜನರಿಗೆ ಎಲ್ಲವೂ ತಿಳಿದಿದೆ. ಜನರಿಗಿಂತ ದೊಡ್ಡವರು ಯಾರೂ ಇಲ್ಲ. ಜನರ ಸೇವೆ ಮಾಡಬೇಕಿರುವುದು ಜನಪ್ರತಿನಿಧಿಗಳ ಕರ್ತವ್ಯ. ಜನ ಕಷ್ಟದಲ್ಲಿದ್ದಾಗ ನೋಡುತ್ತಾ ಕುಳಿತುಕೊಳ್ಳುವ ಮನಸ್ಥಿತಿ ನನ್ನದಲ್ಲ. ಜನರಿಗೆ ಕಷ್ಟಕಾಲದಲ್ಲಿ ಸೂಕ್ತ ರೀತಿಯಲ್ಲಿ ಸ್ಪಂದನೆ ಮಾಡಿದ್ದೇ ಮಹಾ ಅಪರಾಧವೆ ಎಂದು ಪ್ರಶ್ನಿಸಿದರು.

ADVERTISEMENT

ಕಳೆದ ಮೂರುವರೆ ವರ್ಷಗಳಿಂದ ನಿರಂತರವಾಗಿ ಕ್ಷೇತ್ರ ಸುತ್ತಿದ್ದೇನೆ. ನೆರೆ ಬಂದಾಗ ಸಂತ್ರಸ್ತರ ಜೊತೆ ನಿಂತಿದ್ದೇನೆ. ಕೊರೊನಾ ಸಮಯದಲ್ಲಿ ಯುವ ಪಡೆಯೊಂದಿಗೆ ನನ್ನಿಂದಾದ ಅಳಿಲು ಸೇವೆ ಮಾಡಿದ್ದೇನೆ. ಉಪ ಚುನಾವಣೆಯನ್ನು ಕನಸಿನಲ್ಲಿಯೂ ಎಣಿಸಿರಲಿಲ್ಲ. ಆಕಸ್ಮಿಕವಾಗಿ ಚುನಾವಣೆ ಎದುರಾಗಿದೆ. ಪ್ರಾಮಾಣಿಕ ಸೇವೆಯನ್ನೂ ಗೇಲಿ ಮಾಡುವರಿಗೆ ಜನರೇ ಉತ್ತರ ನೀಡಲಿದ್ದಾರೆ ಎಂದರು.

ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ಶ್ರೀನಿವಾಸ ಮಾನೆ ಅವರ ಸೇವೆಯಲ್ಲಿ ಸತ್ಯ ಸಂಕಲ್ಪವಿದೆ. ಅವರು ಪ್ರಾಮಾಣಿಕವಾಗಿ ಜನಸೇವೆ ಮಾಡಿದ್ದರಿಂದಲೇ ಬಿಜೆಪಿ ನಾಯಕರ ದಂಡೇ ಕ್ಷೇತ್ರದಲ್ಲಿ ಬಿಡಾರ ಹೂಡಿದೆ.ಜನ ಸೋಲಿನ ರುಚಿ ತೋರಿಸುವ ಭೀತಿ ಬಿಜೆಪಿ ನಾಯಕರಿಗಿದೆ. ಜನ ಎಲ್ಲವನ್ನೂ ನೋಡುತ್ತಿದ್ದಾರೆ. ಒಳ್ಳೆಯ ತೀರ್ಮಾನವನ್ನೂ ಕೈಗೊಳ್ಳಲಿದ್ದಾರೆ. ಮಾನೆ ಗೆಲುವಿನ ನಗೆ ಬೀರಲಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.