ADVERTISEMENT

ಬಸ್‌ ನಿಲ್ದಾಣವಿಲ್ಲದ ಹಲಗೇರಿ

ರಸ್ತೆಯಲ್ಲೇ ನಿಂತು ಬಸ್ ಹತ್ತುವ ಜನ | ಅಪಘಾತದ ಭಯದಲ್ಲಿ ಪ್ರಯಾಣಿಕರು

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 6:43 IST
Last Updated 5 ಆಗಸ್ಟ್ 2025, 6:43 IST
ಹಲಗೇರಿ ಗ್ರಾಮದಲ್ಲಿ ನಿಲ್ದಾಣ ಇಲ್ಲದಿದ್ದರಿಂದ ರಸ್ತೆ ಪಕ್ಕದ ಮಳಿಗೆಗಳ ಎದುರು ಬಸ್‌ಗಾಗಿ ಕಾಯುತ್ತ ನಿಂತಿದ್ದ ಪ್ರಯಾಣಿಕರು 
ಹಲಗೇರಿ ಗ್ರಾಮದಲ್ಲಿ ನಿಲ್ದಾಣ ಇಲ್ಲದಿದ್ದರಿಂದ ರಸ್ತೆ ಪಕ್ಕದ ಮಳಿಗೆಗಳ ಎದುರು ಬಸ್‌ಗಾಗಿ ಕಾಯುತ್ತ ನಿಂತಿದ್ದ ಪ್ರಯಾಣಿಕರು    

ರಾಣೆಬೆನ್ನೂರು: ತಾಲ್ಲೂಕು ಕೇಂದ್ರದಿಂದ 7 ಕಿ.ಮೀ. ದೂರದಲ್ಲಿರುವ ಹಲಗೇರಿ, ವೇಗದಲ್ಲಿ ಬೆಳೆಯುತ್ತಿರುವ ಗ್ರಾಮ. ಈ ಗ್ರಾಮದಲ್ಲಿ ಬಸ್‌ ನಿಲ್ದಾಣವಿಲ್ಲದೇ ಗ್ರಾಮಸ್ಥರು ನಿತ್ಯವೂ ಪರದಾಡುವಂತಾಗಿದೆ.

ಹರಿಹರ–ಸಮ್ಮಸಗಿ ರಾಷ್ಟ್ರೀಯ ಹೆದ್ದಾರಿ ಹಾಗೂ, ಶಿವಮೊಗ್ಗ (ಮಾಸೂರು - ಮುಂಡರಗಿ) ರಾಜ್ಯ ಹೆದ್ದಾರಿ ಹಾದು ಹೋಗಿರುವ ಗ್ರಾಮವಿದು. ನಿತ್ಯವೂ ನೂರಾರು ವಾಹನಗಳು ಸಂಚರಿಸುತ್ತವೆ. ಆದರೆ, ಪ್ರಯಾಣಿಕರು ರಸ್ತೆ ಪಕ್ಕದಲ್ಲಿ ನಿಂತುಕೊಂಡೇ ಬಸ್‌ಗಾಗಿ ಕಾಯುವ ಸ್ಥಿತಿಯಿದೆ. 

ಗ್ರಾಮದಲ್ಲಿ ಪ್ರತಿ ಗುರುವಾರ ಸಂತೆ ನಡೆಯುತ್ತದೆ. ಈ ಸಂತೆಗೆ ಸುತ್ತಮುತ್ತಲಿನ ಗ್ರಾಮಗಳಿಂದ ಜನರು ಬಂದು ಹೋಗುತ್ತಾರೆ. ಇಲ್ಲಿಯ ಎಪಿಎಂಸಿ ಉಪ ಪ್ರಾಂಗಣದಲ್ಲಿ ಬೆಳ್ಳುಳ್ಳಿ ವ್ಯಾಪಾರವೂ ಉತ್ತಮವಾಗಿರುತ್ತದೆ. ವ್ಯಾಪಾರಿಗಳು ಹಾಗೂ ರೈತರು ಆಗಮಿಸುತ್ತಾರೆ.  ಶಾಲಾ–ಕಾಲೇಜು ವಿದ್ಯಾರ್ಥಿಗಳಂತೂ ನಿತ್ಯವೂ ರಾಣೆಬೆನ್ನೂರು, ದಾವಣಗೆರೆ, ಹರಿಹರಕ್ಕೆ ಓಡಾಡುತ್ತಾರೆ.

ADVERTISEMENT

ಹೊನ್ನಾಳಿ, ಶಿಕಾರಿಪುರ, ಸಾಗರ, ಶಿವಮೊಗ್ಗ, ಧಾರವಾಡ, ಶಿವಮೊಗ್ಗ, ರಟ್ಟೀಹಳ್ಳಿ, ಹಾವೇರಿ, ಹಿರೇಕೆರೂರ, ಹರಿಹರ, ದಾವಣಗೆರೆ, ಸಾಗರ, ಅಂಕೋಲಾ, ಶಿರಸಿ, ಕಾರವಾರ ಜಿಲ್ಲೆಗಳಿಗೆ ನಿತ್ಯವೂ 180ರಿಂದ 200 ಬಸ್‌ಗಳು ಓಡಾಡುತ್ತವೆ. ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿರುತ್ತದೆ. ಇಂಥ ದಟ್ಟಣೆಯಲ್ಲಿಯೇ ಪ್ರಾಣ ಕೈಯಲ್ಲಿ ಹಿಡಿದು ಜನರು ಬಸ್‌ ಹತ್ತುತ್ತಿದ್ದಾರೆ.

ರಸ್ತೆ ಪಕ್ಕದಲ್ಲಿ ನಿಂತ ಪ್ರಯಾಣಿಕರು, ರಸ್ತೆಯಲ್ಲಿ ಬಸ್‌ ಬರುತ್ತಿದ್ದಂತೆ ಹತ್ತಲು ತೆರಳುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಅಪಘಾತಗಳು ನಡೆಯುತ್ತಿತ್ತು, ಇದು ಜನರ ಭಯಕ್ಕೆ ಕಾರಣವಾಗಿದೆ. ನಿಲ್ದಾಣ ಮರೀಚಿಕೆಯಾಗಿರುವುದರಿಂದ, ಕುಡಿಯುವ ನೀರು, ಆಸನ ವ್ಯವಸ್ಥೆ, ಶೌಚಾಲಯ ಸಹ ಲಭ್ಯವಿಲ್ಲ. ರಸ್ತೆ ಬದಿಗೆ ಮಲ–ಮೂತ್ರ ಮಾಡುವವರು ಹೆಚ್ಚಾಗಿದ್ದಾರೆ. ಇದರಿಂದಾಗಿ ರಸ್ತೆಗಳಲ್ಲಿ ಗಬ್ಬು ವಾಸನೆ ಬರುತ್ತಿದ್ದು, ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿಯಿದೆ.

ಪ್ರಯಾಣಿಕರಿಗೆ ಯಾವುದೇ ಭದ್ರತೆ ಇಲ್ಲ. ರಾತ್ರಿ ಹೊತ್ತು ಕೊರೆಯುವ ಚಳಿಯಲ್ಲೂ ಹೆದ್ದಾರಿ ಬಳಿ ಡಬ್ಬಾ ಅಂಗಡಿ ಮುಂದೆ ಅಥವಾ ಬೇಕರಿ ಪಕ್ಕದಲ್ಲಿ ಜನರು ನಿಲ್ಲುವಂತಾಗಿದೆ.

ರಸ್ತೆ ವಿಸ್ತರಣೆಗೆ ತಂಗುದಾಣ ತೆರವು: ನಾಡಗೇರ ಆಸ್ಪತ್ರೆ ಬಳಿ ಈ ಹಿಂದೆ ಬಸ್‌ ತಂಗುದಾಣವಿತ್ತು. ರಸ್ತೆ ವಿಸ್ತರಣೆಗಾಗಿ ಅದನ್ನು ತೆರವುಗೊಳಿಲಾಗಿದೆ. ಅಂದಿನಿಂದ ಗ್ರಾಮದಲ್ಲಿ ಯಾವುದೇ ನಿಲ್ದಾಣವಿಲ್ಲ. ಶಾಸಕ, ಸಂಸದ ಹಾಗೂ ಗ್ರಾಮ ಪಂಚಾಯಿತಿಗೆ ಗ್ರಾಮಸ್ಥರು ಮನವಿ ನೀಡುತ್ತಲೇ ಇದ್ದಾರೆ. ಯಾರೊಬ್ಬರೂ ಪ್ರತಿಕ್ರಿಯಿಸಿಲ್ಲವೆಂಬ ನೋವು ಗ್ರಾಮಸ್ಥರದ್ದು.

ಪ್ರತಿ ಅಮವಾಸ್ಯೆಗೆ ಉಕ್ಕಡಗಾತ್ರಿ ಕರಿಬಸವೇಶ್ವರ ದೇವಸ್ಥಾನಕ್ಕೆ ಹೋಗಲು ರಾಜ್ಯದ ಹಲವು ಕಡೆಗಳಿಂದ ಭಕ್ತರು ಬರುತ್ತಾರೆ. ಅವರು ಹಲಗೇರಿ ಮೂಲಕ ಹಾದು ಹೋಗುತ್ತಾರೆ.  ಬಸ್‌ ನಿಲ್ದಾಣ ಇಲ್ಲದ ಕಾರಣ ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಿಗೆ ಸಾಗುವ ವಿದ್ಯಾರ್ಥಿಗಳ ಗೋಳು ಹೇಳತೀರದು.  

‘ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿ ಅಭಿವೃದ್ಧಿಪಡಿಸಲಾಗಿದೆ. ಅದಕ್ಕಾಗಿ ತಂಗುದಾಣ ತೆರವು ಮಾಡಲಾಗಿದೆ. ಸರ್ಕಾರಿ ಕಟ್ಟಡ ತೆರವುಗೊಳಿಸಿದರೆ, ಮತ್ತೆ ಅವರೇ ಮರು ನಿರ್ಮಿಸಬೇಕೆಂಬ ಸರ್ಕಾರದ ನಿಯಮವಿದೆ. ಆದರೆ, ಹೆದ್ದಾರಿ ಕಾಮಗಾರಿ ಮಾಡಿದವರು ಇದುವರೆಗೂ ಬಸ್ ನಿಲ್ದಾಣ ನಿರ್ಮಿಸಿಲ್ಲ’ ಎಂದು ಗ್ರಾಮಸ್ಥರು ತಿಳಿಸಿದರು.

‘ಕೆಎಸ್‌ಆರ್‌ಟಿಸಿಯಿಂದ ಬಸ್‌ ನಿಲ್ದಾಣ ಕಟ್ಟಡ ನಿರ್ಮಿಸಿಕೊಡಲು ಯಾವುದೇ ಅನುದಾನ ಅಥವಾ ಯೋಜನೆ ಇಲ್ಲ. ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯಿತಿ ಅನುದಾನ ಅಥವಾ ಸಂಸದರ ಅನುದಾನದಲ್ಲಿ ಬಸ್‌ ತಂಗುದಾಣ ನಿರ್ಮಿಸಿಕೊಳ್ಳಬಹುದು. ಹಲಗೇರಿಗೆ ಬಸ್‌ ನಿಲ್ದಾಣದ ಅವಶ್ಯಕತೆ ಹೆಚ್ದಿದೆ’ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.