ADVERTISEMENT

ಹಂಸಬಾವಿ: ಸ್ಮಶಾನ, ಬಸ್‌ ನಿಲ್ದಾಣ, ಸಾರ್ವಜನಿಕ ಶೌಚಾಲಯದ ಕೊರತೆ

ರಾಜೇಂದ್ರ ನಾಯಕ
Published 20 ಮಾರ್ಚ್ 2024, 6:55 IST
Last Updated 20 ಮಾರ್ಚ್ 2024, 6:55 IST
<div class="paragraphs"><p>ಹಂಸಬಾವಿಯ ಸಾರಿಗೆ ಸಂಸ್ಥೆ ಬಸ್‌ ನಿಲ್ದಾಣದಲ್ಲಿರುವ ಶೌಚಾಲಯಕ್ಕೆ ಬೀಗ ಹಾಕಿರುವುದು</p></div>

ಹಂಸಬಾವಿಯ ಸಾರಿಗೆ ಸಂಸ್ಥೆ ಬಸ್‌ ನಿಲ್ದಾಣದಲ್ಲಿರುವ ಶೌಚಾಲಯಕ್ಕೆ ಬೀಗ ಹಾಕಿರುವುದು

   

ಹಂಸಬಾವಿ: ಗ್ರಾಮದಲ್ಲಿ ಹಲವು ಮೂಲ ಸೌಲಭ್ಯಗಳ ಕೊರತೆ ಎದುರಾಗಿದ್ದು, ಸಾರ್ವಜನಿಕರು ಇನ್ನಿಲ್ಲದ ಸಮಸ್ಯೆ ಎದುರಿಸುವಂತಾಗಿದೆ.

ಹೊರವಲಯದಲ್ಲಿರುವ ಹಿಂದೂ ಸಮಾಜದ ಸ್ಮಶಾನ 2 ಎಕರೆ ವಿಸ್ತೀರ್ಣವಿದೆ. ತಡೆಗೋಡೆ ನಿರ್ಮಾಣಕ್ಕೆ ಬುನಾದಿ ಹಾಕಲಾಗಿದ್ದು, ಆ ಕಾಮಗಾರಿಯೂ ಅರ್ಧಕ್ಕೆ ನಿಂತಿದೆ. ಸ್ಮಶಾನದ ತುಂಬ ಮಳ್ಳು, ಗಿಡ-ಗಂಟಿಗಳು ಬೆಳೆದಿವೆ. ಇಲ್ಲಿ ಶವಸಂಸ್ಕಾರಕ್ಕೆ ಬರುವವರು ನೀರಿನ ವ್ಯವಸ್ಥೆ, ನೆರಳು, ಅಂತ್ಯ ಸಂಸ್ಕಾರದ ಶೆಡ್‌ ಇಲ್ಲದೇ ಪರದಾಡುವಂತಾಗಿದೆ.

ADVERTISEMENT

‘ಈ ಸ್ಮಶಾನದ ಜಮೀನನ್ನು ನಾವು 20 ವರ್ಷಗಳಿಂದ ಉಳುಮೆ ಮಾಡಿದ್ದೇವೆ. ಮೂಲಸೌಲಭ್ಯಗಳಿಲ್ಲದ ಕಾರಣ ಜನ ಅಂತ್ಯ ಸಂಸ್ಕಾರವನ್ನು ಎಲ್ಲೆಂದರಲ್ಲಿ ಮಾಡುತ್ತಿದ್ದಾರೆ. ಕುಡುಕರ ಹಾವಳಿಯಿಂದ ಸ್ವಚ್ಛತೆಯೂ ಇಲ್ಲದಂತಾಗಿದೆ’ ಎನ್ನುತ್ತಾರೆ ಗ್ರಾಮದ ಹಿರಿಯರಾದ ತೋಟಯ್ಯ ಜೀರಿಗಿಮಠ.

ಅವ್ಯಸ್ಥೆಯ ತಾಣ ಬಸ್‌ ನಿಲ್ದಾಣ: ಗ್ರಾಮದ ಹೃದಯ ಭಾಗದಲ್ಲಿರುವ ವಾಯವ್ಯ ಸಾರಿಗೆ ಬಸ್‌ ನಿಲ್ದಾಣವೂ ಅವ್ಯವಸ್ಥೆಯ ತಾಣವಾಗಿದೆ. ಪ್ರಯಾಣಿಕರು, ವಿದ್ಯಾರ್ಥಿಗಳು ಕುಳಿತುಕೊಳ್ಳಲು ಸೂಕ್ತ ಆಸನ ವ್ಯವಸ್ಥೆ ಇಲ್ಲದೇ ಅಲ್ಲಲ್ಲಿ ನಿಂತು ಬಸ್ಸಿಗಾಗಿ ಕಾಯುವ ಸ್ಥಿತಿ ಇದೆ. ಅಲ್ಲದೇ ಇಲ್ಲಿರುವ ಶೌಚಾಲಯಕ್ಕೆ ಬೀಗ ಹಾಕಲಾಗಿದ್ದು, ಬೇರೆ ಗ್ರಾಮಗಳಿಂದ ಬರುವ ಪ್ರಯಾಣಿಕರು ಶೌಚಕ್ಕೆ ಹೋಗಲು ಸಮಸ್ಯೆ ಉಂಟಾಗಿದೆ.

‘ನಾವು ಬೆಳಿಗ್ಗೆ ನಮ್ಮ ಊರಿಂದ ಕಾಲೇಜಿಗೆ ಬಂದರೆ ಮರಳಿ ಮನೆಗೆ ಮುಟ್ಟುವವರೆಗೂ ಈ ಗ್ರಾಮದಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲ. ಬಸ್‌ ನಿಲ್ದಾಣದಲ್ಲಿಯ ಶೌಚಾಲಯಕ್ಕೆ ಬೀಗ ಹಾಕಲಾಗಿದೆ. ಮೂತ್ರಾಲಯದಲ್ಲಿ ಸ್ವಚ್ಛತೆ ಇಲ್ಲದೇ ಅಲ್ಲಿ ಕಾಲಿಡಲು ಭಯವಾಗುತ್ತದೆ’ ಎನ್ನುತ್ತಾರೆ ವಿದ್ಯಾರ್ಥಿನಿ ವಂದನಾ ಕರಿಗಾರ.

ಫುಟ್‌ಪಾತ್‌ ಆಕ್ರಮಿಸಿದ ಅಂಗಡಿಗಳು: ಗ್ರಾಮದ ಮುಖ್ಯರಸ್ತೆಯುದ್ದಕ್ಕೂ ನಿರ್ಮಾಣವಾಗಿರುವ ಫುಟ್‌ಪಾತ್‌ ಅನ್ನು ಎಗ್ ರೈಸ್‌ ಅಂಗಡಿಗಳು, ಇನ್ನಿತರ ಶೆಡ್‌ಗಳು ಆಕ್ರಮಿಸಿವೆ.

ಪಾದಚಾರಿಗಳು ಸಂಚರಿಸಲು ರಸ್ತೆಯಲ್ಲೇ ಹಾದು ಹೋಗಬೇಕಾದ ಸ್ಥಿತಿ ಇದೆ. ಅಲ್ಲದೇ ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ದೊಡ್ಡ ಶೆಡ್‌ ನಿರ್ಮಾಣವಾಗಿದ್ದು, ಆಸ್ಪತ್ರೆ ಇರುವುದೇ ಕಾಣದಂತಾಗಿದೆ. 

‘ಇಲ್ಲಿ ಇರುವ ವಿದ್ಯುತ್‌ ಪರಿವರ್ತಕವೊಂದು ನಿವಾಸಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಮೂರ್ನಾಲ್ಕು ಬಾರಿ ಬೆಂಕಿ ಹತ್ತಿ ಉರಿದಿದೆ. ಪಕ್ಕದಲ್ಲಿಯೇ ನಮ್ಮ ಕಾರು ನಿಲ್ಲಿಸುತ್ತೇವೆ. ಅನಾಹುತ ಎದುರಾಗುವ ಆತಂಕವಿದೆ. ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದರೂ ಏನೂ ಪ್ರಯೋಜನವಾಗಿಲ್ಲ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಮೃತ್ಯುಂಜಯ ಬಾಸೂರ ‘ಪ್ರಜಾವಾಣಿʼಗೆ ತಿಳಿಸಿದರು.

ಹಂಸಬಾವಿಯ ಹೊರವಲಯದಲ್ಲಿರುವ ಮೂಲಸೌಲಭ್ಯ ವಂಚಿತ ಸ್ಮಶಾನ
ಹಂಸಬಾವಿಯ ಮುಖ್ಯ ರಸ್ತೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಅಕ್ರಮವಾಗಿ ಶೆಡ್‌ ನಿರ್ಮಾಣವಾಗಿರುವುದು
ಹಂಸಬಾವಿಯ ಮುಖ್ಯರಸ್ತೆಯ ಪಕ್ಕದಲ್ಲಿ ಅಪಾಯಕಾರಿಯಾಗಿರುವ ವಿದ್ಯುತ್‌ ಪರಿವರ್ತಕ

ಸ್ಮಶಾನದ ಸುತ್ತ ತಡೆಗೋಡೆ ಅಗತ್ಯ

‘ನಮ್ಮೂರಿನ ಸ್ಮಶಾನ ಅಭಿವೃದ್ಧಿಗೆ 2005-06 ರಲ್ಲೇ ಸಮಿತಿಯೊಂದನ್ನು ಮಾಡಿ ಸ್ಮಶಾನದ ಸುತ್ತಲೂ ತಡೆಗೋಡೆ ನಿರ್ಮಿಸಲು ಬುನಾದಿ ಹಾಕುವಷ್ಟರಲ್ಲಿ ಆರ್ಥಿಕ ಸಮಸ್ಯೆಯಿಂದ ಅದು ನನೆಗುದಿಗೆ ಬಿದ್ದಿದೆ. ಗ್ರಾಮ ಪಂಚಾಯ್ತಿಯವರು ಇದರ ಬಗ್ಗೆ ಮುತುವರ್ಜಿ ವಹಿಸಬೇಕು’ ಎಂದು ಗ್ರಾಮಸ್ಥ ಗುರು ಮಳೀಮಠ ಒತ್ತಾಯಿಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.