ಹಾವೇರಿ: ಸಮುದಾಯವೊಂದರ ಪ್ರಭಾವಿ ತಂಗಿದ್ದ ಸ್ಥಳದ ಬಗ್ಗೆ ಲೋಕೇಷನ್ ಸಮೇತ ಅನ್ಯರಿಗೆ ಮಾಹಿತಿ ಕೊಟ್ಟ ಆರೋಪದಡಿ ಹಾನಗಲ್ ಸರ್ಕಲ್ ಇನ್‌ಸ್ಪೆಕ್ಟರ್ (ಸಿಪಿಐ) ಆಂಜನೇಯ ಎನ್.ಎಚ್. ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಲೋಕೇಷನ್‌ನಿಂದ ಸಮಸ್ಯೆಗೆ ಸಿಲುಕಿದ್ದ ಹಾನಗಲ್ ಪಟ್ಟಣದ ಪ್ರಭಾವಿ ನೀಡಿದ್ದ ಮಾಹಿತಿ ಅನ್ವಯ ಪ್ರಾಥಮಿಕ ತನಿಖೆ ನಡೆಸಿ ವರದಿ ಪಡೆದಿದ್ದ ದಾವಣಗೆರೆ ವಲಯದ ಐಜಿಪಿ ರವಿಕಾಂತೇಗೌಡ ಅವರು ಸಿಪಿಐ ಆಂಜನೇಯ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಐಜಿಪಿ ಆದೇಶ ಉಲ್ಲೇಖಿಸಿ ಮತ್ತೊಂದು ಆದೇಶ ಹೊರಡಿಸಿರುವ ಜಿಲ್ಲಾ ಎಸ್ಪಿ ಅಂಶುಕುಮಾರ, ‘ಸಿಪಿಐ ಆಂಜನೇಯ ಅವರನ್ನು ಜೂನ್ 15ರಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಅವರಿಂದ ತೆರುವಾದ ಸ್ಥಾನಕ್ಕೆ ಪ್ರಭಾರಿಯಾಗಿ ಶಿಗ್ಗಾವಿ ಸಿಪಿಐ ಅನಿಲ್‌ಕುಮಾರ ರಾಠೋಡ್ ಅವರನ್ನು ನಿಯೋಜಿಸಲಾಗಿದೆ’ ಎಂದು ತಿಳಿಸಿದ್ದಾರೆ.
ವಿರೋಧಿ ಗುಂಪಿಗೆ ಮಾಹಿತಿ: ‘ಅಪರಾಧ ಪ್ರಕರಣಗಳ ತನಿಖೆ ಸಂದರ್ಭದಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಲೋಕೇಷನ್ (ನಿಖರ ಸ್ಥಳ) ತಿಳಿದುಕೊಳ್ಳುವ ಅವಕಾಶ ಪೊಲೀಸರಿಗಿದೆ. ಆದರೆ, ಸಿಪಿಐ ಆಂಜನೇಯ ಅವರು ಈ ಅವಕಾಶವನ್ನು ದುರುಪಯೋಗಪಡಿಸಿಕೊಂಡಿರುವುದು ಪ್ರಾಥಮಿಕ ವಿಚಾರಣೆಯಿಂದ ಗೊತ್ತಾಗಿದೆ’ ಎಂದು ಪೊಲೀಸ್ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಹಾನಗಲ್ ಪಟ್ಟಣ ನಿವಾಸಿಯಾದ ಪ್ರಭಾವಿ ಹಾಗೂ ಅವರ ವಿರೋಧಿ ಗುಂಪಿನವರ ನಡುವೆ, ಸಮುದಾಯದ ಸಂಘಟನೆಗೆ ಸಂಬಂಧಪಟ್ಟಂತೆ ವೈಮನಸ್ಸು ಏರ್ಪಟ್ಟಿತ್ತು. ಪ್ರಭಾವಿಗಾಗಿ ವಿರೋಧಿ ಬಣದವರು ಹುಡುಕಾಟ ನಡೆಸುತ್ತಿದ್ದರು. ವಿರೋಧಿ ಗುಂಪಿನವರ ಜೊತೆ ಒಡನಾಟ ಹೊಂದಿದ್ದ ಸಿಪಿಐ ಆಂಜನೇಯ, ಪ್ರಭಾವಿ ತಂಗಿದ್ದ ಲೋಕೇಷನ್ ಕೊಟ್ಟಿದ್ದರು. ಅದರ ಆಧಾರದಲ್ಲಿ ವಿರೋಧಿ ಗುಂಪಿನವರು, ಪ್ರಭಾವಿ ಇರುವ ಸ್ಥಳಕ್ಕೆ ಹೋಗಿದ್ದರು. ಅವರಿಂದ ತಪ್ಪಿಸಿಕೊಂಡಿದ್ದ ಪ್ರಭಾವಿ, ಪರಿಚಯಸ್ಥರ ಬಳಿ ವಿಷಯ ತಿಳಿಸಿದ್ದರು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.