ADVERTISEMENT

ಹಾನಗಲ್| ಸಮನ್ವಯತೆ ಕೊರತೆ: ನಲುಗುತ್ತಿರುವ ಶಾಸಕರ ಮಾದರಿ ಶಾಲೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 2:18 IST
Last Updated 14 ಜನವರಿ 2026, 2:18 IST
ಹಾನಗಲ್ ಶಾಸಕರ ಮಾದರಿ ಸರ್ಕಾರಿ ಶಾಲೆ
ಹಾನಗಲ್ ಶಾಸಕರ ಮಾದರಿ ಸರ್ಕಾರಿ ಶಾಲೆ   

ಹಾನಗಲ್: ಶಾಲಾಭಿವೃದ್ಧಿ ಸಮಿತಿ ಮತ್ತು ಶಿಕ್ಷಕರ ನಡುವೆ ಸಮನ್ವಯತೆ ಕೊರತೆಯ ಪರಿಣಾಮ ಇಲ್ಲಿನ ಶಾಸಕರ ಮಾದರಿ ಸರ್ಕಾರಿ ಶಾಲೆ ನಾನಾ ಸಮಸ್ಯೆಗಳಿಂದ ನಲಗುತ್ತಿದೆ.  ಈಚೆಗೆ ಶಾಲೆ ಅಂಗಳದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮತ್ತು ಅತಿಥಿ ಶಿಕ್ಷಕ ಪರಸ್ಪರ ಬಡಿದಾಡಿಕೊಂಡಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.

‘ಶಾಲಾಭಿವೃದ್ಧಿ ಸಮಿತಿಯಿಂದ ಶೈಕ್ಷಣಿಕ ಪ್ರೋತ್ಸಾಹ ಸಿಗುತ್ತಿಲ್ಲ. ಎಲ್ಲದಕ್ಕೂ ಅನುಮಾನದ ನೋಟವಿದೆ. ಅರ್ಪಣಾ ಭಾವದಿಂದ ಕೆಲಸ ಮಾಡಲು ಸಾದ್ಯವಾಗುತ್ತಿಲ್ಲ’ ಎಂದು ಹೊಸದಾಗಿ ವರ್ಗಾವಣೆಗೊಂಡು ಬಂದಿರುವ ಶಿಕ್ಷಕರ ಅಳಲು ತೋಡಿಕೊಳ್ಳುತ್ತಿದ್ದಾರೆ.

ಎಲ್‌ಕೆಜಿಯಿಂದ 10 ನೇ ತರಗತಿ ತನಕ ಈ ಶಾಲೆಯಲ್ಲಿ 690 ವಿದ್ಯಾರ್ಥಿಗಳು ಓದುತ್ತಾರೆ. 29 ಶಿಕ್ಷಕರ ಹುದ್ದೆಗಳು ಕಾಯಂ ಇದೆ. ಆದರೆ, 12 ಶಿಕ್ಷಕರು ಮಾತ್ರ ಇದ್ದಾರೆ. ಉಳಿದವರು ಅತಿಥಿ ಶಿಕ್ಷಕರು. ಇನ್ನೂ 8 ಕೊಠಡಿಗಳ ಅಗತ್ಯವಿದೆ. 7 ನೇ ತರಗತಿಯಲ್ಲಿ 75 ವಿದ್ಯಾರ್ಥಿಗಳಿದ್ದರೂ, ವಿಭಾಗ ಮಾಡಿಲ್ಲ. ಶುದ್ಧ ಕುಡಿಯುವ ನೀರು ಇಲ್ಲ.

ADVERTISEMENT

ಆರು ತಿಂಗಳಿನಿಂದ ಶಾಲೆಯ 5 ಅತಿಥಿ ಶಿಕ್ಷಕರಿಗೆ ಗೌರವ ಧನ ನೀಡಿಲ್ಲ. ₹ 23 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಶೌಚಾಲಯ ಸಹ ವಾರದಲ್ಲಿಯೇ ದುರ್ವಾಸನೆ ಬೀರುತ್ತಿದ್ದು, ಬಳಕೆ ಆಗದಂತೆ ವಸ್ತುಗಳು ಕಳಚಿ ಬಿದ್ದು ಒಡೆದಿವೆ. ಎರಡನೇ ದಿನಕ್ಕೆ ಶೌಚಾಲಯ ಹಾಳಾಗಿದೆ.

ಈ ಶಾಲೆಯಲ್ಲಿ ಪ್ರೌಢಶಾಲೆ ವಿಭಾಗ ಆರಂಭವಾಗಿದೆ. ಅಧ್ಯಕ್ಷ ಹಾಗೂ ಮುಖ್ಯಶಿಕ್ಷಕರ ನಡುವೆ ಸಮನ್ವಯದ ಕೊರತೆಯಿಂದ ಅನುದಾನ ಸೂಕ್ತ ರೀತಿಯಲ್ಲಿ ಬಳಕೆಯಾಗುತ್ತಿಲ್ಲ. ಕಳೆದ ವರ್ಷ ₹ 1.5 ಲಕ್ಷ ಅನುದಾನ ಬಳಕೆಯಾಗದೇ ಸರ್ಕಾರಕ್ಕೆ ವಾಪಸು ಹೋಗಿರುವ ಬಗ್ಗೆ ಪೋಷಕರು ಮಾಹಿತಿ ನೀಡುತ್ತಿದ್ದಾರೆ.

ಅತಿಥಿ ಶಿಕ್ಷಕ ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರ ನಡುವಿನ ಬಡಿದಾಟ ಪ್ರಕರಣ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮೆಟ್ಟಿಲೇರಿವೆ.

ಕೆಲಸಕ್ಕೆ ಗೈರಾದ ಆರೋಪದಡಿ ಪ್ರಭಾರಿ ಮುಖ್ಯ ಶಿಕ್ಷಕ ಒಂದೂವರೆ ತಿಂಗಳ ಹಿಂದೆಯೇ ಅಮಾನತು ಆಗಿದ್ದಾರೆ. ಸರ್ಕಾರಿ ಉರ್ದು ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ವೀರಪ್ಪ ಕರೆಗೊಂಡರ ಅವರು ಎರಡೂ ಶಾಲೆಗಳ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಮೊದಲ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸುತ್ತಿರುವ ಈ ಶಾಲೆಯ ಪರೀಕ್ಷೆ ಫಲಿತಾಂಶ ಸುಧಾರಣೆಯ ಹೊಣೆಯೂ ಅವರ ಮೇಲಿದೆ.

ಬಡಿದಾಟ ವೈಯಕ್ತಿಕ ವಿಚಾರ

‘ಶಾಲೆ ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿ ನಡುವೆ ಸಮನ್ವಯವಿಲ್ಲದಿರುವುದು ಕಂಡುಬಂದಿದೆ. ಇದರಿಂದ ಶಾಲೆಯ ಮಕ್ಕಳ ಕಲಿಕೆಗೆ ಅನಾನುಕೂಲ ಆಗದಂತೆ ವಿಶೇಷ ಗಮನ ಹರಿಸಿದ್ದೇವೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್‌.ವಿ. ಚಿನ್ನಿಕಟ್ಟಿ ತಿಳಿಸಿದರು. ಶಾಲೆ ಗೊಂದಲದ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ಪ್ರೌಢ ಹಾಗೂ ಪ್ರಾಥಮಿಕ ವಿಭಾಗಕ್ಕೆ ಶಿಕ್ಷಕರ ಕೊರತೆ ನೀಗಿಸಲಾಗಿದೆ. ಈ ಬಾರಿ ಈ ಶಾಲೆಯ ಮೊದಲ ಎಸ್ಎಸ್ಎಲ್‌ಸಿ ಪರೀಕ್ಷೆಗೆ ಮಕ್ಕಳನ್ನು ಸಿದ್ಧ ಮಾಡಲಾಗುತ್ತಿದೆ. ಇತ್ತೀಚೆಗೆ ನಡೆದ ಬಡಿದಾಟ ಅವರ ವೈಯಕ್ತಿಕ ವಿಚಾರ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.