ADVERTISEMENT

ಹಾನಗಲ್: ಮೂಲ ಸೌಲಭ್ಯಗಳಿಂದ ವಂಚಿತ ಜನವಸತಿ ಪ್ರದೇಶ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 2:49 IST
Last Updated 20 ಆಗಸ್ಟ್ 2025, 2:49 IST
ಹಾನಗಲ್ ವಿಜಯನಗರ ಬಡಾವಣೆಯ ಇಂದಿರಾನಗರ ಸಂಪರ್ಕದ ರಸ್ತೆ ಕೆರುಗದ್ದೆಯಾಗಿದ್ದು, ಓಡಾಟ ದುಸ್ತರವಾಗಿದೆ.
ಹಾನಗಲ್ ವಿಜಯನಗರ ಬಡಾವಣೆಯ ಇಂದಿರಾನಗರ ಸಂಪರ್ಕದ ರಸ್ತೆ ಕೆರುಗದ್ದೆಯಾಗಿದ್ದು, ಓಡಾಟ ದುಸ್ತರವಾಗಿದೆ.   

ಹಾನಗಲ್: ಇಲ್ಲಿನ ವಿಜಯನಗರ ಬಡಾವಣೆಯ ಕಂಬಳಗೇರಿ ಸಮೀಪದ ಜನವಸತಿ ಪ್ರದೇಶ ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದು, ಮಳೆಗಾಲ ಬಂದರೆ, ಇಲ್ಲಿನ ನಿವಾಸಿಗಳಿಗೆ ನರಕಯಾತನೆ ತೆರೆದುಕೊಳ್ಳುತ್ತದೆ. ಈ ಭಾಗದಲ್ಲಿ ರಸ್ತೆ ಸುಧಾರಣೆಗೊಂಡಿಲ್ಲ. ಚರಂಡಿ ಇಲ್ಲ. ಬೀದಿ ದೀಪಗಳು ಬೆಳಗುವುದಿಲ್ಲ. ಮನೆ ಕಸ ಸಂಗ್ರಹಣೆಗೆ ಇತ್ತ ಪುರಸಭೆ ಸಿಬ್ಬಂದಿ ಬರುವುದಿಲ್ಲ.

ಖಾಲಿ ನಿವೇಶನಗಳು ಕಸ ಹಾಕುವ ಸ್ಥಳವಾಗಿವೆ. ಹೀಗಾಗಿ ಇಲ್ಲಿ ಹಂದಿಗಳು ಸ್ವಚ್ಛಂದವಾಗಿ ವಿಹರಿಸುತ್ತವೆ. ಸೊಳ್ಳೆ ಕಾಟ ವಿಪರೀತವಾಗಿದೆ. ಆಗಾಗ್ಗೆ ಇಲ್ಲಿನ ಮಕ್ಕಳು ಜ್ವರ, ಕೆಮ್ಮು ಮತ್ತಿತರ ಆರೋಗ್ಯ ಸಮಸ್ಯೆಗಳಿಗೆ ಈಡಾಗುತ್ತಾರೆ.
ಈಗ ನಿರಂತರವಾಗಿ ಮಳೆ ಸುರಿಯುತ್ತಿದೆ. ಜಲ್ಲಿ ಕಲ್ಲು ಸಹ ಕಾಣದ ಇಲ್ಲಿನ ರಸ್ತೆ ಕೆಸರುಗದ್ದೆಯಾಗಿದೆ. ವಾಹನಗಳ ಓಡಾಟ ಸಾಧ್ಯವಾಗುತ್ತಿಲ್ಲ. ನಡೆದುಕೊಂಡು ಓಡಾಡಲು ಇಲ್ಲಿನ ನಿವಾಸಿಗಳು ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿದೆ.

ಇದೇ ರಸ್ತೆ ಬಳಸಿಕೊಂಡು ಇಲ್ಲಿರುವ ವಿರಾಟನಗರ ಪ್ರೌಢಶಾಲೆಗೆ ವಿದ್ಯಾರ್ಥಿಗಳು ಓಡಾಡುತ್ತಾರೆ. ಶಾಲೆ ತಲುಪುವಷ್ಟರಲ್ಲಿ ವಿದ್ಯಾರ್ಥಿಗಳ ಸಮವಸ್ತ್ರ ರಾಡಿಯಾಗುತ್ತದೆ. ವಿಜಯನಗರದಿಂದ ಇಂದಿರಾ ನಗರಕ್ಕೆ ಸಂಪರ್ಕ ಒದಗಿಸುವ ಈ ರಸ್ತೆಯಲ್ಲಿ ಜನ ಸಂಚಾರ, ವಾಹನ ಓಡಾಟ ದುಸ್ತರವಾಗಿದೆ.

ADVERTISEMENT

ಕೆಲವರು ತಮ್ಮ ಮನೆ ಮುಂದೆ ಚರಂಡಿ ನಿರ್ಮಿಸಿಕೊಂಡಿದ್ದಾರೆ. ಇನ್ನುಳಿದ ಜಾಗೆಯಲ್ಲಿ ಚರಂಡಿ ಇಲ್ಲದೇ ಗಲೀಜು ರಸ್ತೆಯನ್ನು ಆಕ್ರಮಿಸುತ್ತದೆ. ಮಳೆಗಾಲದ ಈ ಸಮಯದಲ್ಲಿ ಇಲ್ಲಿನ ಜನರು ಮನೆ ಮುಂದೆ ಜಲ್ಲಿಕಲ್ಲು ಹಾಕಿಸಿಕೊಂಡು ನಡೆದಾಡಲು ಅನುವು ಮಾಡಿಕೊಂಡಿದ್ದಾರೆ.

15 ವರ್ಷದಿಂದ ಇಲ್ಲಿ ಮನೆ ಕಟ್ಟಿಕೊಂಡಿದ್ದೇವೆ. ಪುರಸಭೆಗೆ ತೆರಿಗೆ ಕೂಡ ಕಟ್ಟುತ್ತೇವೆ. ನೀರಿನ ಸೌಲಭ್ಯ ಹೊರತುಪಡಿಸಿ ನಮ್ಮ ಪ್ರದೇಶವನ್ನು ಪುರಸಭೆ ನಿರ್ಲಕ್ಷಿಸಿದೆ. ಇಲ್ಲಿನ ಅವಸ್ಥೆ ಬಗ್ಗೆ ಜನಪ್ರತಿನಿಧಿಗಳು ಮತ್ತು ಪುರಸಭೆಗೆ ಸಾಕಷ್ಟು ಬಾರಿ ತಿಳಿಸಲಾಗಿದೆ. ಆದರೆ ಪ್ರಯೋಜನವಾಗಿಲ್ಲ ಎಂದು ಇಲ್ಲಿನ ನಿವಾಸಿ ಸರ್ವರ್‌ಖಾನ್‌ ಮಿಠಾಯಿಗಾರ, ಮಖಬೂಲ್‌ಅಹ್ಮದ್‌ ಓಣಿಕೇರಿ ಹೇಳಿದರು.

ನಮ್ಮ ಶಾಲೆಯಲ್ಲಿ 110 ವಿದ್ಯಾರ್ಥಿಗಳಿದ್ದಾರೆ. ವಿಜಯನಗರ, ಇಂದಿರಾ ನಗರದ ಸಂಪರ್ಕ ರಸ್ತೆಗಳು ಹದಗೆಟ್ಟಿವೆ. ಹೀಗಾಗಿ ವಿದ್ಯಾರ್ಥಿಗಳು ಫಜೀತಿಗೆ ಒಳಗಾಗುತ್ತಿದ್ದಾರೆ. ಇಲ್ಲಿನ ನೈರ್ಮಲ್ಯ ಹಾಳಾಗಿರುವುದು ಶೈಕ್ಷಣಿಕ ವಾತಾವರಣದ ಮೇಲೆ ಪರಿಣಾಮ ಉಂಟು ಮಾಡುತ್ತಿದೆ ಎಂದು ವಿರಾಟನಗರ ಪ್ರೌಢಶಾಲೆ ಮುಖ್ಯಶಿಕ್ಷಕ ಎಂ.ಎಚ್‌.ಸಂಶಿ ಹೇಳಿದ್ದಾರೆ.

ಖಾಲಿ ನಿವೇಶನ ತ್ಯಾಜ್ಯ ಸಂಗ್ರಹಣೆಗೆ ಬಳಕೆಯಾಗುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.