ADVERTISEMENT

‘ಗಣಿತ ಆಕೃತಿಯಿಂದ ವಿಷಯ ಮನದಟ್ಟು’

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 13:06 IST
Last Updated 14 ಮಾರ್ಚ್ 2020, 13:06 IST
ಹಾವೇರಿಯ ಕೆ.ಎಲ್.ಇ. ಸಂಸ್ಥೆಯ ಜಿ.ಎಚ್.ಕಾಲೇಜಿನಲ್ಲಿ ಹಮ್ಮಿಕೊಂಡ ಗಣಿತಶಾಸ್ತ್ರ ಆಕೃತಿಗಳ ಪ್ರದರ್ಶನವನ್ನು ನಿರ್ಣಾಯಕರು ಮತ್ತು ಉಪನ್ಯಾಸಕರು ವೀಕ್ಷಿಸಿದರು
ಹಾವೇರಿಯ ಕೆ.ಎಲ್.ಇ. ಸಂಸ್ಥೆಯ ಜಿ.ಎಚ್.ಕಾಲೇಜಿನಲ್ಲಿ ಹಮ್ಮಿಕೊಂಡ ಗಣಿತಶಾಸ್ತ್ರ ಆಕೃತಿಗಳ ಪ್ರದರ್ಶನವನ್ನು ನಿರ್ಣಾಯಕರು ಮತ್ತು ಉಪನ್ಯಾಸಕರು ವೀಕ್ಷಿಸಿದರು   

ಹಾವೇರಿ: ‘ಗಣಿತಶಾಸ್ತ್ರ ವಿಷಯದ ಆಕೃತಿ ಅಥವಾ ಮಾದರಿಗಳಿಂದ ಪೂರಕವಾದ ಕಲಿಕಾ ವಾತಾವರಣ ನಿರ್ಮಿಸುವಲ್ಲಿ ಸಹಕಾರಿಯಾಗಿವೆ’ ಎಂದು ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಂ.ಎಸ್. ಯರಗೊಪ ಅಭಿಪ್ರಾಯಪಟ್ಟರು.

ಗಣಿತಶಾಸ್ತ್ರ ವಿಭಾಗ ಏರ್ಪಡಿಸಿದ್ದ ‘ಮಾದರಿಗಳ ಪ್ರದರ್ಶನ’ ಉದ್ಘಾಟಿಸಿ ಅವರು ಮಾತನಾಡಿದರು. ‘ನಮ್ಮ ಉಪನ್ಯಾಸಕರ ಬೋಧನಾ ಮಾದರಿಯಲ್ಲಿ ದೃಷ್ಟಿಕೋನ ರೂಪಾಂತರವಾಗಬೇಕಾದ ಸಮಯವಿದು. ಗಣಿತಶಾಸ್ತ್ರದ ಸಮೀಕರಣವನ್ನು ಮಾದರಿ ರೂಪದಲ್ಲಿ ಉಪಕರಣಗಳಾಗಿ ತಯಾರಿಸಿ ವಿಷಯವನ್ನು ಸಂಪೂರ್ಣವಾಗಿ ಮನದಟ್ಟು ಮಾಡಿಕೊಳ್ಳಬಹುದು. ಮಾದರಿ ತಯಾರಿಕೆಯಲ್ಲಿ ವಿದ್ಯಾರ್ಥಿಗಳು ತಮ್ಮಲ್ಲಿ ಹುದುಗಿದ ಪ್ರತಿಭೆ ಹೊರಹಾಕುತ್ತಾ ಅರ್ಥವಿವರಣೆ ಮಾಡಿದ್ದು ನಿರ್ಣಾಯಕರನ್ನು ತೃಪ್ತಿಪಡಿಸಿದೆ’ ಎಂದು ಡಾ.ಎಂ.ಎಸ್.ಯರಗೊಪ್ಪ ಹೇಳಿದರು.

ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥೆ ಗೀತಾ ಮಂಕಣಿ ಮಾತನಾಡಿ, ‘ಪರಿಶ್ರಮಶೀಲತೆ ಅಗತ್ಯವಾಗಿದ್ದು, ಆಕೃತಿಗಳು ನಿಷ್ಪಷ್ಟತೆ ಹೊಂದಿದ್ದು, ತೊಡಕು ನಿವಾರಣೆಗೆ ದಿಕ್ಸೂಚಿ’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಯೋಜನಾಧಿಕಾರಿ ಡಾ.ಶಂಕರ ಮಡವಾಳೆ, ಹಿರಿಯ ಪ್ರಾಧ್ಯಾಪಕರಾದ ಡಾ. ವಾಸುದೇವ ನಾಯಕ, ಎಂ.ಸಿ. ಶಶಿಕಲಾ, ಉಮಾ ಜಾಲಿ, ಜಿ.ಎಂ.ಯಣ್ಣಿ ಹಾಜರಿದ್ದರು.

ವಿಜೇತರು

ಗಣಿತಶಾಸ್ತ್ರ ಆಕೃತಿಗಳ ಪ್ರದರ್ಶನದಲ್ಲಿ ಉತ್ತಮ ಪ್ರತಿಭೆ ಮತ್ತು ವಿವರಣೆಗಳನ್ನು ನೀಡಿದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ಘೋಷಿಸಲಾಯಿತು. ಅನುಷಾ ಎಂ ಮತ್ತು ಜ್ಯೋತಿ ಎಸ್.ಎಚ್. (ಪ್ರಥಮ), ತನುಜಾ ಎಸ್.ಎಚ್. ಮತ್ತು ಭಾಗ್ಯಾ ಎಂ.ಬಿ. (ದ್ವಿತೀಯ), ನಬಿಲಾ (ತೃತೀಯ), ಕಲಾ, ಫರ್ಜಾನಾ ಮತ್ತು ತಬಾಸಂ (ಸಮಾಧಾನಕರ ಬಹುಮಾನ). ಒಟ್ಟು 52 ವಿದ್ಯಾರ್ಥಿಗಳು ತಯಾರಿಸಿದ್ದ 29 ಮಾದರಿಗಳು ಪ್ರದರ್ಶನದಲ್ಲಿ ಗಮನ ಸೆಳೆಯುವಲ್ಲಿ ಯಶಸ್ವಿಯಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.