ADVERTISEMENT

ಹಾವೇರಿ: ಬಸ್ ನಿಲ್ದಾಣಕ್ಕೆ ಕರಿಯಪ್ಪನವರ ನಾಮಕರಣ ಮಾಡಲು ಮನವಿ

​ಪ್ರಜಾವಾಣಿ ವಾರ್ತೆ
Published 30 ಮೇ 2023, 13:09 IST
Last Updated 30 ಮೇ 2023, 13:09 IST
ನಗರದ ಬಸ್ ನಿಲ್ದಾಣಕ್ಕೆ ಸ್ವಾತಂತ್ರ್ಯ ಹೋರಾಟಗಾರ ಸಂಗೂರು ಕರಿಯಪ್ಪನವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಡಿವೈಎಫ್ಐ, ಎಸ್ಎಫ್ಐ ಜಿಲ್ಲಾ ಸಮಿತಿಗಳು ಮಂಗಳವಾರ  ಜಿಲ್ಲಾಧಿಕಾರಿ ರಘುನಂದನಮೂರ್ತಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.-ಪ್ರಜಾವಾಣಿ ಚಿತ್ರ
ನಗರದ ಬಸ್ ನಿಲ್ದಾಣಕ್ಕೆ ಸ್ವಾತಂತ್ರ್ಯ ಹೋರಾಟಗಾರ ಸಂಗೂರು ಕರಿಯಪ್ಪನವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಡಿವೈಎಫ್ಐ, ಎಸ್ಎಫ್ಐ ಜಿಲ್ಲಾ ಸಮಿತಿಗಳು ಮಂಗಳವಾರ ಜಿಲ್ಲಾಧಿಕಾರಿ ರಘುನಂದನಮೂರ್ತಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.-ಪ್ರಜಾವಾಣಿ ಚಿತ್ರ   

ಹಾವೇರಿ: ‘ಸ್ವಾತಂತ್ರ್ಯ ಹೋರಾಟಗಾರ ಸಂಗೂರು ಕರಿಯಪ್ಪನವರ ಜೀವನ ಗಾಥೆಯನ್ನು ಜನಮಾನಸದಲ್ಲಿ ಶಾಶ್ವತವಾಗಿ ರಾಜ್ಯ ಸರ್ಕಾರ ಹಾಗೂ ಹಾವೇರಿ ಜಿಲ್ಲಾಡಳಿತ ಕಾರ್ಯಪ್ರವೃತ್ತರಾಗಬೇಕು’ ಎಂದು ಸಂಗೂರು ಕರಿಯಪ್ಪ ಅವರ ಪುತ್ರಿ ಚಿಕ್ಕಮ್ಮ ಆಡೂರು ಹೇಳಿದರು.

ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ), ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಜಿಲ್ಲಾ ಸಮಿತಿಗಳು ಹಾಗೂ ಕರಿಯಪ್ಪ ಅವರ ಕುಟುಂಬಸ್ಥರ ವತಿಯಿಂದ ಮಂಗಳವಾರ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ರಘುನಂದನಮೂರ್ತಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಗಾಂಧೀಜಿಯವರ ಅನುಯಾಯಿಗಳಾಗಿದ್ದ ಸಂಗೂರು ಕರಿಯಪ್ಪ, ವೀರಮ್ಮ ದಂಪತಿಗಳು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನು ಸವೆಸಿದವರು. ಇಂತಹ ಮಹಾನ್ ಹೋರಾಟಗಾರರ ಜೀವನ ಚರಿತ್ರೆಯನ್ನು ಪಠ್ಯಪುಸ್ತಕದಲ್ಲಿ ಅಳವಡಿಸಬೇಕು ಎಂದರು.

ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ‘ವಿದುರಾಶ್ವತ ಮಾದರಿಯಲ್ಲಿ ಸಂಗೂರಿನಲ್ಲಿ ಕರಿಯಪ್ಪ ಮತ್ತು ವೀರಮ್ಮ ಅವರ ಸ್ಮಾರಕ ಮೂರ್ತಿ ಹಾಗೂ ಮ್ಯುಸಿಯಮ್ ನಿರ್ಮಿಸಬೇಕು. ಗಾಂಧಿಜಿಯವರ ಚಿತಾಭಸ್ಮವಿರುವ ಸ್ಥಳವನ್ನು ಅಭಿವೃದ್ಧಿ ಪಡಿಸಿ ಅಲ್ಲಿ ನಿರಂತರ ಚಟುವಟಿಕೆಗಳು ನಡೆಯುವಂತಾಗಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಜಿಲ್ಲೆಯ ವಿದ್ಯಾರ್ಥಿ-ಯುವಜನರಿಗೆ ಸಂಗೂರು ಕರಿಯಪ್ಪ ಸೇರಿದಂತೆ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನಗಳ ಜೀವನಗಾಥೆಯ ಕುರಿತು ಜಾಗೃತಿ ಮೂಡಿಸುವ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲು ಕಾರ್ಯಯೋಜನೆಯನ್ನು ಸರ್ಕಾರ ಹಾಗೂ ಜಿಲ್ಲಾಡಳಿತ ರೂಪಿಸಬೇಕು’ ಎಂದರು.

ಈ ಬೇಡಿಕೆಗಳನ್ನು ಜಾರಿಗೊಳಿಸಲು ಮನವಿ ಪತ್ರದ ಗೌರವ ಪ್ರತಿರವಾನೆಯನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳು ಜೊತೆಗೆ ಬ್ಯಾಡಗಿ, ಹಾವೇರಿ ಶಾಸಕರು, ಹಾವೇರಿ ನಗರಸಭೆ ಹಾಗೂ ಸಂಗೂರು ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಅಧಿಕಾರಿಗಳಿಗೆ ಕಳುಹಿಸಲಾಯಿತು.

ಡಿವೈಎಫ್ಐ ಜಿಲ್ಲಾ ಮುಖಂಡರಾದ ರಾಜು ಮಲ್ಲೂರು, ಖಲಂದರ್ ಅಲ್ಲಿಗೌಡ್ರ, ಸಂತೋಷ ಕೂರಗುಂದ, ಜಯಶ್ರೀ ಡಿ. ಕಾವಲಕೊಪ್ಪ, ವಿನೋದಾ ಶೇ ಎರೆಸೀಮಿ, ರಾಜೇಶ್ವರಿ ಎನ್ ಎರೆಸೀಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.