
ಹಾವೇರಿ: ಇಲ್ಲಿಯ ಇಜಾರಿಲಕಮಾಪುರದಲ್ಲಿರುವ ‘ತಂಡೂರು ರೆಸಿಡೆನ್ಸಿ’ ಬಹುಮಹಡಿ ಕಟ್ಟಡದ ಹಾಸ್ಟೆಲ್‌ನಲ್ಲಿ ಆಹಾರ ಸೇವಿಸಿ ಅಸ್ವಸ್ಥಗೊಂಡ ವಿದ್ಯಾರ್ಥಿನಿಯರ ಸಂಖ್ಯೆ 20ಕ್ಕೆ ಏರಿಕೆಯಾಗಿದ್ದು, ಈ ಪೈಕಿ ನಾಲ್ವರು ತೀವ್ರ ಅಸ್ವಸ್ಥಗೊಂಡಿದ್ದಾರೆ.
ತಾಲ್ಲೂಕಿನ ದೇವಗಿರಿಯಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿರುವ ಸುಮಾರು 40 ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದರು. ಈ ಪೈಕಿ 20 ವಿದ್ಯಾರ್ಥಿಗಳು ಆಹಾರ ಸೇವನೆ ಬಳಿಕ ಅಸ್ವಸ್ಥಗೊಂಡಿದ್ದು, ನಗರದ ವೀರಾಪೂರ ಹಾಗೂ ರೇಣುಕಾ ಸರ್ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
‘ಶನಿವಾರ (ಡಿ. 20) ರಾತ್ರಿ ಊಟ ಹಾಗೂ ಭಾನುವಾರ (ಡಿ. 21) ಬೆಳಿಗ್ಗೆ ಉಪಾಹಾರ ಸೇವನೆ ಬಳಿಕ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಭಾನುವಾರ ತಡರಾತ್ರಿಯವರೆಗೂ 20 ವಿದ್ಯಾರ್ಥಿನಿಯರು ಆಸ್ಪತ್ರೆಗೆ ಬಂದು ದಾಖಲಾಗಿದ್ದಾರೆ. ಈ ಪೈಕಿ ನಾಲ್ವರು ವಿದ್ಯಾರ್ಥಿನಿಯರು ಪ್ರಜ್ಞೆ ತಪ್ಪಿದ್ದರು. ಚಿಕಿತ್ಸೆ ಬಳಿಕ ಸೋಮವಾರ ಕಣ್ಣು ತೆರೆದಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ’ ಎಂದು ಸಹಪಾಠಿಗಳು ಹೇಳಿದರು.
ಪ್ರಾಂಶುಪಾಲರ ಅಮಾನತಿಗೆ ಆಗ್ರಹ: ‘ಹಾಸ್ಟೆಲ್‌ನಲ್ಲಿ ಮೂಲ ಸೌಕರ್ಯವಿಲ್ಲ. ಊಟ–ಉಪಾಹಾರದಲ್ಲೂ ಗುಣಮಟ್ಟವಿಲ್ಲ. ವಿದ್ಯಾರ್ಥಿನಿಯರು ಅಸ್ವಸ್ಥಗೊಳ್ಳಲು ಪ್ರಾಂಶುಪಾಲ ಹಾಗೂ ವಾರ್ಡನ್ ಕಾರಣ. ಇಬ್ಬರನ್ನೂ ಅಮಾನತು ಮಾಡಬೇಕು’ ಎಂದು ಆಗ್ರಹಿಸಿ ದೇವಗಿರಿಯಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಎದುರು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
‘ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿರುವ ಸಾಮಾನ್ಯ ಕೋಟಾದ ವಿದ್ಯಾರ್ಥಿನಿಯರ ವಾಸ್ತವ್ಯಕ್ಕಾಗಿ ಹಾಸ್ಟೆಲ್ ಇದೆ. ಹಾಸ್ಟೆಲ್ ಬಾಡಿಗೆ ಸೇರಿ ಇತರೆ ವೆಚ್ಚಕ್ಕೆ ಕಾಲೇಜಿನಿಂದಲೇ ಹಣ ಭರಿಸಲಾಗುತ್ತಿದೆ. ಊಟ– ಉಪಾಹಾರಕ್ಕೆ ವಿದ್ಯಾರ್ಥಿಗಳು ಹಣ ನೀಡುತ್ತಿದ್ದಾರೆ. ಆಹಾರ ಸೇವನೆ ಬಳಿಕ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡು ಆಸ್ಪತ್ರೆಗೆ ಸೇರಿದರೂ ಪ್ರಾಂಶುಪಾಲರು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿಲ್ಲ. ನಿರ್ಲಕ್ಷ್ಯ ತೋರಿರುವ ಪ್ರಾಂಶುಪಾಲರನ್ನು ಅಮಾನತು ಮಾಡಬೇಕು’ ಎಂದು ಒತ್ತಾಯಿಸಿದರು.
‘ಘಟನೆ ಬಳಿಕವೂ ಕಾಲೇಜಿನವರು ಎಚ್ಚೆತ್ತುಕೊಂಡಿಲ್ಲ. ಪರ ಊರಿನ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸುತ್ತಿಲ್ಲ. ಪೋಷಕರು ಆತಂಕದಲ್ಲಿದ್ದು, ಮಕ್ಕಳ ಭವಿಷ್ಯದ ಚಿಂತೆಯಲ್ಲಿದ್ದಾರೆ. ಘಟನೆ ಬಗ್ಗೆ ಪ್ರಶ್ನಿಸಿದರೆ, ಪ್ರಾಂಶುಪಾಲರು ತಮಗೆ ಸಂಬಂಧವಿಲ್ಲವೆಂದು ಉಡಾಫೆ ಉತ್ತರ ನೀಡುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಆಗದಿದ್ದರೆ, ಮುಂಬರುವ ದಿನಗಳಲ್ಲಿ ಗಂಭೀರ ಸ್ವರೂಪದ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು.
‘ಹಾವೇರಿ ನಗರದಲ್ಲಿರುವ ಹಾಸ್ಟೆಲ್‌ನ್ನು ಎಂಜಿನಿಯರಿಂಗ್ ಕಾಲೇಜಿನಲ್ಲಿರುವ ಕಟ್ಟಡಕ್ಕೆ ಸ್ಥಳಾಂತರಿಸಬೇಕು. ಸೂಕ್ತ ವಾರ್ಡನ್ ನೇಮಿಸಬೇಕು. ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು. ಕಟ್ಟಡದ ಹೊರಗಡೆ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಬೇಕು’ ಎಂದು ಆಗ್ರಹಿಸಿದರು.
ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಅಭಿಷೇಕ್ ದೊಡ್ಡಮನಿ, ನಗರ ಕಾರ್ಯದರ್ಶಿ ಸಾಗರ ಪೊಲೀಸಗೌಡ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.