ADVERTISEMENT

ವಿತರಕರ ಸಮ್ಮೇಳನ: ಕ್ಷೇಮಾಭಿವೃದ್ಧಿ ನಿಧಿ ಸ್ಥಾಪನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 16:24 IST
Last Updated 29 ಜೂನ್ 2025, 16:24 IST
ಹಾವೇರಿಯ ಪತ್ರಿಕಾ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಕಾರ್ಯಕಾರಿಣಿ ಸಮಿತಿ ಸಭೆ’ಯಲ್ಲಿ ಪಾಲ್ಗೊಂಡಿದ್ದ ಪತ್ರಿಕಾ ವಿತರಕರು
ಹಾವೇರಿಯ ಪತ್ರಿಕಾ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಕಾರ್ಯಕಾರಿಣಿ ಸಮಿತಿ ಸಭೆ’ಯಲ್ಲಿ ಪಾಲ್ಗೊಂಡಿದ್ದ ಪತ್ರಿಕಾ ವಿತರಕರು   

ಪ್ರಜಾವಾಣಿ ವಾರ್ತೆ

ಹಾವೇರಿ: ‘ಮೈಸೂರಿನಲ್ಲಿ ಆಗಸ್ಟ್ 27 ಹಾಗೂ 28ರಂದು ರಾಜ್ಯಮಟ್ಟದ 5ನೇ ವಿತರಕರ ಸಮ್ಮೇಳನ ಹಾಗೂ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಸಮ್ಮೇಳನವನ್ನು ಯಶಸ್ವಿಗೊಳಿಸಲು ಪದಾಧಿಕಾರಿಗಳು ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಕೆ. ಶಂಭುಲಿಂಗಪ್ಪ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಕಾರ್ಯಕಾರಿಣಿ ಸಮಿತಿ ಸಭೆ’ಯಲ್ಲಿ ಅವರು ಮಾತನಾಡಿದರು.

ADVERTISEMENT

‘ವಿತರಕರು ಮಳೆ, ಗಾಳಿ, ಚಳಿ ಎನ್ನದೇ ನಿತ್ಯವೂ ಪತ್ರಿಕೆಗಳನ್ನು ಮನೆಗೆ ತಲುಪಿಸುತ್ತಿದ್ದಾರೆ. ವಿತರಕರ ಹಿತ ಕಾಯಲು 2019ರಲ್ಲಿ ಒಕ್ಕೂಟ ಸ್ಥಾಪಿಸಲಾಗಿದೆ. ವಿತರಕರ ಅಸ್ತಿತ್ವವನ್ನು ಉಳಿಸಿಕೊಂಡು ನಮ್ಮ ಕೂಗನ್ನು ಸರ್ಕಾರಕ್ಕೆ ತಲುಪಿಸಲು ಸಮ್ಮೇಳನ ಆಯೋಜಿಸಲಾಗುತ್ತಿದೆ’ ಎಂದು ತಿಳಿಸಿದರು.

‘ಪತ್ರಿಕಾ ವಿತರಕರ ಹೆಸರಿನಲ್ಲಿ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಿ ₹ 10 ಕೋಟಿ ಮೀಸಲಿಡಬೇಕು. ಪತ್ರಿಕಾ ವಿತರಕರಿಗೂ ಆಶ್ರಯ ಯೋಜನೆಯಡಿ ನಿವೇಶನ ಹಾಗೂ ಮನೆಗಳನ್ನು ಒದಗಿಸಬೇಕು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿಶೇಷ ವಿದ್ಯಾರ್ಥಿವೇತನ ರೂಪಿಸಬೇಕು. ವಿತರಕರು ಅಕಾಲಿಕ ಮರಣ ಹೊಂದಿದರೆ, ಅವರ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ ನೀಡಬೇಕು. ವಿತರಕರಿಗೆ ಸಬ್ಸಿಡಿ ದರದಲ್ಲಿ ಎಲೆಕ್ಟ್ರಿಕ್ ಬೈಕ್ ಒದಗಿಸಬೇಕು. 60 ವರ್ಷ ವಯೋಮಿತಿ ಮೀರಿದ ವಿತರಕರಿಗೆ ಪ್ರತಿ ತಿಂಗಳು ₹ 2 ಸಾವಿರ ಪಿಂಚಣಿ ನೀಡಬೇಕು. ಈ ಎಲ್ಲ ಬೇಡಿಕೆಗಳ ಈಡೇರಿಕೆಗಾಗಿ ಸಮ್ಮೇಳನದ ಮೂಲಕ ಸರ್ಕಾರವನ್ನು ಒತ್ತಾಯಿಸಲಾಗುವುದು’ ಎಂದು ಹೇಳಿದರು.

‘ರಾಜಧಾನಿಯಲ್ಲಿ ಒಕ್ಕೂಟದ ಕಚೇರಿ ತೆರೆಯಬೇಕು. ಸಮುದಾಯ ಭವನ ನಿರ್ಮಿಸಿ, ವಿತರಕರು ಹಾಗೂ ಅವರ ಕುಟುಂಬದವರ ಕಾರ್ಯಕ್ರಮಗಳಿಗೆ ಅನುಕೂಲ ಕಲ್ಪಿಸಬೇಕು. ಅಕಾಡೆಮಿಯಲ್ಲಿಯೂ ವಿತರಕರನ್ನು ಸದಸ್ಯರನ್ನಾಗಿ ಪರಿಗಣಿಸಬೇಕು ಎಂಬ ಬೇಡಿಕೆಗಳನ್ನೂ ಸರ್ಕಾರದ ಮುಂದಿಡಲಾಗುವುದು’ ಎಂದರು.

‘ಸಮ್ಮೇಳನದ ಮೂಲಕ ವಿತರಕರ ಒಗ್ಗಟ್ಟು ಹಾಗೂ ಶಕ್ತಿಯನ್ನು ಸರ್ಕಾರಕ್ಕೆ ತೋರಿಸಬೇಕು. ಒಕ್ಕೂಟದ ಪದಾಧಿಕಾರಿಗಳು, ತಮಗೆ ವಹಿಸಿರುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಇತರರಿಗೆ ಮಾದರಿಯಾಗಬೇಕು. ಸಮ್ಮೇಳನಕ್ಕೆ ಬರುವ ಎಲ್ಲರಿಗೂ ವಸತಿ, ಊಟ ಹಾಗೂ ಸಕಲ ವ್ಯವಸ್ಥೆ ಮಾಡಲಾಗಿದೆ. ಉಸ್ತುವಾರಿ ಸಚಿವರು ಸಹ ಸಮ್ಮೇಳನಕ್ಕೆ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೂ ಸೂಚನೆ ನೀಡಿದ್ದಾರೆ’ ಎಂದು ಹೇಳಿದರು.

ಬೆಂಗಳೂರು, ತುಮಕೂರು, ಚಿತ್ರದುರ್ಗ, ಮೈಸೂರು, ಶಿವಮೊಗ್ಗ, ಹಾವೇರಿ, ಧಾರವಾಡ, ಬೆಳಗಾವಿ, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳ ಪತ್ರಿಕಾ ವಿತರಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಒಕ್ಕೂಟದ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಓಂದೇವ, ಚಿತ್ರದುರ್ಗದ ತಿಪ್ಪೇಸ್ವಾಮಿ, ಶಿವಮೊಗ್ಗದ ಮಾಲತೇಶ, ಧಾರವಾಡದ ಶಿವು ಹಲಗಿ, ಬೆಳಗಾವಿಯ ಪ್ರತಾಪ್ ಭೋಸಲೆ, ಉತ್ತರ ಕನ್ನಡದ ಜಯರಾಜ್, ತುಮಕೂರು ವಾಸುದೇವ ನಾದೂರ, ದಾವಣಗೇರಿಯ ಕೃಷ್ಣಮೂರ್ತಿ, ಮುಕ್ತಾರ್‌ ಅಹ್ಮದ್, ಸಂಗಮ ಸುರೇಶ, ಶಾಂತವೀರೇಶ, ವೀರೇಶ ಹ್ಯಾಡ್ಲ, ಶ್ರೀಧರ ಬ್ಯಾಡಗಿ, ಜಯಪ್ಪ ಬಣಕಾರ, ಕರಬಸಪ್ಪ ಹಳದೂರ, ವಿರೂಪಾಕ್ಷಪ್ಪ ನೀರಲಗಿ, ವೀರೇಶ ಚೌಕಿಮಠ, ರಾಮಣ್ಣ ಕುದ್ರಳ್ಳಿ, ಪರುಶುರಾಮ ಕಾಳೇರ, ಚಂದ್ರಶೇಖರ ಅಕ್ಕಿ, ಕಾಶಿನಾಥ ಕಂಟಿ, ಶಿವಾನಂದ ಬಣಕಾರ, ವಿನಾಯಕ ಮಂಟಗಣಿ, ನಂದೀಶ ಮಂಟಗಣಿ, ವಿನಾಯಕ ಅರ್ಕಾಚಾರಿ, ವರುಣ ಹುಬ್ಬಳ್ಳಿ, ಸಂಜೀವ, ಸಂಗಮೇಶ, ಮಂಜುನಾಥ ಶಿಗ್ಲಿ, ಅಶೋಕ ಮಜ್ಜಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.