ಹಾವೇರಿ: ‘ರಾಣೆಬೆನ್ನೂರು ತಾಲ್ಲೂಕಿನ ಚೌಡಯ್ಯದಾನಪುರದಲ್ಲಿರುವ ಅಂಬಿಗರ ಚೌಡಯ್ಯನವರ ಐಕ್ಯ ಮಂಟಪವನ್ನು (ಗದ್ದುಗೆ) ಸರ್ಕಾರವೇ ಅಭಿವೃದ್ಧಿಪಡಿಸಬೇಕು. ಇಲ್ಲದಿದ್ದರೆ, ಅಭಿವೃದ್ಧಿಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು’ ಎಂದು ಶಿವಶರಣ ಅಂಬಿಗರ ಚೌಡಯ್ಯನವರ ಪೀಠದ ಸಂಸ್ಥಾಪಕರೂ ಆಗಿರುವ ಅಂಬಿಗರ ಧರ್ಮಪೀಠದ ಧರ್ಮದರ್ಶಿ ಬಿ.ಜಿ. ಸುಣಗಾರ ತಿಳಿಸಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗದ್ದುಗೆ ಅಭಿವೃದ್ಧಿ ವಿಚಾರವಾಗಿ ಬಣಗಳ ನಡುವೆ ವೈಮನಸ್ಸು ಮೂಡುತ್ತಿದೆ. ಸಮಾಜದ ಜನರಲ್ಲಿ ಗೊಂದಲ ಉಂಟಾಗುತ್ತಿದೆ. ಹೀಗಾಗಿ, ಸರ್ಕಾರವೇ ಮಧ್ಯಪ್ರವೇಶಿಸಿ ತನ್ನದೇ ಮುಂದಾಳ್ವತದಲ್ಲಿ ಗದ್ದುಗೆ ಅಭಿವೃದ್ಧಿಪಡಿಸಬೇಕು’ ಎಂದು ಒತ್ತಾಯಿಸಿದರು.
‘ಸಮಾಜದಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆ ಗಮನಿಸಿದರೆ ಮನಸ್ಸಿಗೆ ನೋವಾಗುತ್ತಿದೆ. ಸರ್ಕಾರದ ಪ್ರತಿನಿಧಿಯಾಗಿ ಗದ್ದುಗೆ ವೀಕ್ಷಣೆಗೆ ಬಂದಿದ್ದ ಸಚಿವ ಎಚ್.ಕೆ. ಪಾಟೀಲ, ಸ್ಥಳೀಯವಾಗಿ ಉಂಟಾದ ವೈಮನಸ್ಸಿನಿಂದ ಗದ್ದು್ಗೆ ವೀಕ್ಷಣೆ ಮಾಡದೇ ವಾಪಸು ಹೋಗಿರುವುದು ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಇಂಥ ಸಂದರ್ಭದಲ್ಲಿ ಸಮಾಜದ ಜನರು ಎಚ್ಚೆತ್ತುಕೊಳ್ಳಬೇಕಿದೆ. ನಿಜಶರಣ ಅಂಬಿಗರ ಚೌಡಯ್ಯನವರ ಗದ್ದುಗೆಯನ್ನು ಅಭಿವೃದ್ಧಿಪಡಿಸಲು ಒಂದಾಗಬೇಕಿದೆ’ ಎಂದು ಹೇಳಿದರು.
‘ಗದ್ದುಗೆ ಅಭಿವೃದ್ಧಿಗಾಗಿ 1997ರಿಂದ ಸ್ಥಳೀಯರ ಜೊತೆ ಸೇರಿ ಹೋರಾಟ ಮಾಡುತ್ತಿದ್ದೇನೆ. 2002ರಲ್ಲಿ ಚೌಡಯ್ಯದಾನಪುರದಲ್ಲಿ ಸ್ಥಳೀಯ ಮಠದ ಸ್ವಾಮೀಜಿಯಿಂದ, ಸಮಾಜದ ಗಂಗಾಮಾತೆಗೆ ಅವಮಾನವಾಗಿದ್ದನ್ನು ಖಂಡಿಸಿದ್ದೆ. ಅಂದೇ, ಶಿವಶರಣ ಅಂಬಿಗರ ಚೌಡಯ್ಯನವರ ಪೀಠ ಸ್ಥಾಪಿಸಲಾಯಿತು. ಆರಂಭದಲ್ಲಿ ನಾನು ಸೇರಿ 21 ಮಂದಿ ಟ್ರಸ್ಟ್‌ನಲ್ಲಿದ್ದೆವು. ಇತ್ತೀಚಿನ ದಿನಗಳಲ್ಲಿ ಕೆಲವರು ತಾವೇ ಪೀಠ ಸ್ಥಾಪಿಸಿರುವುದಾಗಿ ಹೇಳಿಕೊಂಡು ಓಡಾಡುತ್ತಿದ್ದಾರೆ. ಅವರಿಂದ ಗದ್ದುಗೆ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ’ ಎಂದು ದೂರಿದರು.
‘ಗದ್ದುಗೆ ಪೂಜೆ ಮಾಡಲು ಸ್ಥಳೀಯರು ವಿರೋಧಿಸಿದ್ದರು. ಎಲ್ಲವನ್ನೂ ನಾವು ಎದುರಿಸಿದೆವು. ನರಸೀಪುರದಲ್ಲಿ ಜಾಗ ತೆಗೆದುಕೊಂಡು, ಪೀಠದ ಮಠ ಮಾಡಿದೆವು. ಶಾಂತಮುನಿ ಸ್ವಾಮೀಜಿಗೆ ಪಟ್ಟಾಧಿಕಾರವಾಯಿತು. ನಂತರ, ನನ್ನನ್ನೇ ಕಡೆಗಣಿಸಲಾಯಿತು. ಸಮಾಜದ ಹಿತದೃಷ್ಟಿಯಿಂದ ನಾನು ಯಾರನ್ನೂ ದ್ವೇಷಿಸಲಿಲ್ಲ. ನನ್ನ ಪಾಡಿಗೆ ನಾನಿದ್ದೆ. ಆದರೆ, ಇತ್ತೀಚಿನ ದಿನಗಳಲ್ಲಿ ಸಮಾಜ ಒಡೆಯುವ ಕೆಲಸವಾಗುತ್ತಿದೆ. ಇಂಥ ಸಂದರ್ಭದಲ್ಲಿ ಧ್ವನಿ ಎತ್ತಲು ನಾನು ಮುಂದೆ ಬಂದಿದ್ದೇನೆ. ಸ್ಥಳೀಯರೂ ನನ್ನ ಜೊತೆಗಿದ್ದಾರೆ. ವಿಶ್ವಗುರು ಬಸವಣ್ಣ ಅವರ ಮಾದರಿಯಲ್ಲಿಯೇ ಅಂಬಿಗರ ಚೌಡಯ್ಯನವರ ಗದ್ದುಗೆ ಅಭಿವೃದ್ಧಿಯಾಗಬೇಕೆಂದು ಹೋರಾಟ ಆರಂಭಿಸಿದ್ದೇನೆ. ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ’ ಎಂದರು ಹೇಳಿದರು.
ಸಮಾಜದ ಮುಖಂಡರಾದ ಚಂದ್ರಪ್ಪ ಹೊಂಬರಡಿ, ಹನುಮಂತಪ್ಪ ಜಾಲಗಾರ, ಗೂರಪ್ಪ ಕರಬಣ್ಣನವರ, ಲಕ್ಷಮ್ಮ ಹೊಂಬರಡಿ, ಗಂಗಮ್ಮ ಅಂಬಿಗೇರ, ಮಲ್ಲಪ್ಪ ಶಿಗ್ಲಿ ಪತ್ರಿಕಾಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.