ADVERTISEMENT

ಹಾವೇರಿ: ಪ್ರೀತಿ ನಿರಾಕರಿಸಿದ್ದಕ್ಕೆ ಬಾಲಕಿ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 3:01 IST
Last Updated 11 ಸೆಪ್ಟೆಂಬರ್ 2025, 3:01 IST
<div class="paragraphs"><p>FIR</p></div>

FIR

   

ಹಾವೇರಿ: ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ತಡಸ ಗ್ರಾಮದಲ್ಲಿ ಪ್ರೀತಿ ವಿಚಾರಕ್ಕೆ ಶಾಲಾ ಬಾಲಕಿಯೊಬ್ಬಳಿಗೆ ಜೀವ ಬೆದರಿಕೆಯೊಡ್ಡಿ ಹಲ್ಲೆ ಮಾಡಲಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ.

‘ಗ್ರಾಮದ ಶಾಲೆಯೊಂದರಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ 15 ವರ್ಷದ ಬಾಲಕಿ ಗಾಯಗೊಂಡಿದ್ದಾಳೆ. ಆಕೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

‘ಕೃತ್ಯದ ಬಗ್ಗೆ ಬಾಲಕಿಯ ತಾಯಿ ದೂರು ನೀಡಿದ್ದಾರೆ. ಅದರನ್ವಯ ಆರೋಪಿ ಇಮಾಮಹುಸೇನ್ ಮಹಬೂಬಅಲಿ ಮಹಲ್ದಾರ (22) ಎಂಬಾತನನ್ನು ಬಂಧಿಸಲಾಗಿದೆ’ ಎಂದು ತಡಸ ಪೊಲೀಸರು ಹೇಳಿದರು.

‘ಬಾಲಕಿ ನಿತ್ಯವೂ ಶಾಲೆಗೆ ಹೋಗಿ ಬರುತ್ತಿದ್ದಳು. ಮಾಂಸ ವ್ಯಾಪಾರಿಯಾದ ಆರೋಪಿ ಇಮಾಮಹುಸೇನ್, ಬಾಲಕಿಯನ್ನು ಹಿಂಬಾಲಿಸಿ ಪ್ರೀತಿ ಮಾಡುವಂತೆ ಪೀಡಿಸುತ್ತಿದ್ದ. ಸೆ. 9ರಂದು ಬಾಲಕಿ ಬಳಿ ಹೋಗಿದ್ದ ಆರೋಪಿ, ‘ನೀನು ನನ್ನನ್ನು ಪ್ರೀತಿ ಮಾಡಬೇಕು. ಇಲ್ಲದಿದ್ದರೆ, ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ’ ಎಂದು ಬೈದಾಡಿ ಪತ್ರವೊಂದನ್ನು ಕೊಟ್ಟಿದ್ದ.’

‘ಪತ್ರವನ್ನು ತೆಗೆದುಕೊಳ್ಳಲು ಬಾಲಕಿ ನಿರಾಕರಿಸಿದ್ದರು. ಅವಾಗಲೇ ಆರೋಪಿ, ಬಾಲಕಿಯನ್ನು ಹಿಂದಿನಿಂದ ಹಿಡಿದು ಎಳೆದಾಡಿ ಕೆನ್ನೆ ಹಾಗೂ ಗದ್ದದ ಭಾಗದಲ್ಲಿ ಪರಚಿದ್ದ. ನಂತರ, ಸ್ಥಳದಿಂದ ಪರಾರಿಯಾಗಿದ್ದ. ರಕ್ತ ಸೋರುತ್ತಿದ್ದರಿಂದ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

‘ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.